EVM VBPAT and SC 
ಸುದ್ದಿಗಳು

ಇದೇ ಮೊದಲು: ಇವಿಎಂಗಳನ್ನೇ ತರಿಸಿಕೊಂಡು ಮತಗಳ ಮರುಎಣಿಕೆ ನಡೆಸಿದ ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್‌ ರಿಜಿಸ್ಟ್ರಾರ್ ಒಬ್ಬರು ಮರು ಎಣಿಕೆ ನಡೆಸಿದ್ದು ಇಡೀ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಯಿತು.

Bar & Bench

ಇದೇ ಮೊದಲು ಎಂಬಂತೆ ಹರಿಯಾಣದ ಸ್ಥಳೀಯ ಸಂಸ್ಥೆಗೆ ಚುನಾವಣೆಗೆ ಸಂಬಂಧಿಸಿದ ಎಲೆಕ್ಟ್ರಾನಿಕ್ ಮತ ಯಂತ್ರಗಳು (ಇವಿಎಂಗಳು) ಮತ್ತಿತರ ದಾಖಲೆಗಳನ್ನು ತರಿಸಿಕೊಂಡ ಸುಪ್ರೀಂ ಕೋರ್ಟ್‌ ಮತಗಳ ಮರುಎಣಿಕೆ ನಡೆಸಿದೆ [ಮೋಹಿತ್ ಕುಮಾರ್ ಮತ್ತು ಕುಲದೀಪ್ ಸಿಂಗ್ ನಡುವಣ ಪ್ರಕರಣ] .

ಹರಿಯಾಣದ ಪಾಣಿಪತ್ ಜಿಲ್ಲೆಯ ಬುವಾನಾ ಲಖು ಗ್ರಾಮದ ಗ್ರಾಮ ಪಂಚಾಯತ್‌ ಅಧ್ಯಕ್ಷರ ಆಯ್ಕೆಯ ಬಗ್ಗೆ ವಿವಾದ ಉದ್ಭವಿಸಿದ್ದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ದೀಪಂಕರ್ ದತ್ತ ಹಾಗೂ ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ಮತ ಎಣಿಕೆಗೆ ಸೂಚಿಸಿತು.

ಅಂತೆಯೇ ಎರಡೂ ಕಡೆಯ ಕಕ್ಷಿದಾರರ ಸಮ್ಮುಖದಲ್ಲಿ ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ಒಬ್ಬರು ಮರು ಎಣಿಕೆ ನಡೆಸಿದ್ದು ಇಡೀ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಯಿತು.

ಪಂಚಾಯತ್‌ ಚುನಾವಣೆಯಲ್ಲಿ ಪ್ರತಿವಾದಿ ಕುಲದೀಪ್ ಸಿಂಗ್ ಅವರ ಆಯ್ಕೆ ಪ್ರಶ್ನಿಸಿ ಪ್ರತಿಸ್ಪರ್ಧಿ ಮೋಹಿತ್‌ ಕುಮಾರ್‌ ಅರ್ಜಿ ಸಲ್ಲಿಸಿದ್ದರು. ಪಾಣಿಪತ್‌ನ ಚುನಾವಣಾ ನ್ಯಾಯಮಂಡಳಿ ಬೂತ್ ಸಂಖ್ಯೆ 69ರಲ್ಲಿ ಮತಗಳ ಮರು ಎಣಿಕೆಗೆ ನಿರ್ದೇಶಿಸಿತ್ತು. ಚುನಾವಣಾ ನ್ಯಾಯಮಂಡಳಿಯ ಈ ಆದೇಶವನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ರದ್ದುಗೊಳಿಸಿತ್ತು. ಹೀಗಾಗಿ ಮೋಹಿತ್‌ ಕುಮಾರ್‌ ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು.

ಜುಲೈ 31ರಂದು ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇವಿಎಂ ಮತ್ತಿತರ ದಾಖಲೆಗಳನ್ನು ಹಾಜರುಪಡಿಸುವಂತೆ ನಿರ್ದೇಶಿಸಿತ್ತು. ಒಂದೇ ಮತಗಟ್ಟೆಯ ಬದಲು ಎಲ್ಲಾ ಮತಗಟ್ಟೆಗಳಲ್ಲಿ ಮರುಎಣಿಕೆಗೆ ಆದೇಶಿಸಿತ್ತು. ಮತಗಳ ಮರುಎಣಿಕೆ ನಡೆದಾಗ ಮೋಹಿತ್ ಕುಮಾರ್ 1,051 ಮತಗಳನ್ನು ಪಡೆದರೆ ಪ್ರತಿವಾದಿ ಕುಲದೀಪ್ ಸಿಂಗ್ 1,000 ಮತಗಳನ್ನು ಪಡೆದು ಹಿನ್ನಡೆ ಅನುಭವಿಸಿದ್ದರು. ಈ ಸಂಬಂಧ ರಿಜಿಸ್ಟ್ರಾರ್‌ ಅವರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದರು.

ರಿಜಿಸ್ಟ್ರಾರ್‌ ವರದಿಯಲ್ಲಿ ಶಂಕೆಪಡುವಂಥದ್ದು ಏನೂ ಇಲ್ಲ ಎಂದು ಆಗಸ್ಟ್ 11ರಂದು ನಿರ್ಧರಿಸಿದ ಸುಪ್ರೀಂ ಕೋರ್ಟ್‌ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶ ರದ್ದುಗೊಳಿಸಿ ಮೋಹಿತ್‌ ಕುಮಾರ್‌ ಅವರು ಗ್ರಾಮಪಂಚಾಯತ್‌ ಅಧ್ಯಕ್ಷರಾಗಿ ಆಯ್ಕೆ ಆಗಲು ಅರ್ಹರು ಎಂದು ಘೋಷಿಸಿತು.

ಇನ್ನೂ ಏನಾದರೂ ಸಮಸ್ಯೆಗಳಿದ್ದಲ್ಲಿ ಚುನಾವಣಾ ನ್ಯಾಯಮಂಡಳಿಯ ಮುಂದೆ ಕಕ್ಷಿದಾರರು ಪ್ರಶ್ನಿಸಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತಾದರೂ ಮರುಎಣಿಕೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ರಿಜಿಸ್ಟ್ರಾರ್‌ ನೀಡಿದ ವರದಿಯನ್ನೇ ಅಂತಿಮ ಮತ್ತು ನಿರ್ಣಾಯಕವಾಗಿ ಚುನಾವಣಾ ನ್ಯಾಯಮಂಡಳಿ ಸ್ವೀಕರಿಸಬೇಕು ಎಂದಿತು. ವರದಿ ಮತ್ತು ಇವಿಎಂಗಳನ್ನು ದಾಖಲೆಯ ಭಾಗವಾಗಿ ಚುನಾವಣಾ ನ್ಯಾಯಮಂಡಳಿಗೆ ಕಳುಹಿಸಬೇಕೆಂದು ಅದು ಆದೇಶಿಸಿತು.