ಕೃಷಿ ತ್ಯಾಜ್ಯ (ಕೂಳೆ) ಸುಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳದ ಬಗ್ಗೆ ಬುಧವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳಿಗೆ ಸಮನ್ಸ್ ನೀಡಿದೆ [ವಾಯು ಗುಣಮಟ್ಟ ನಿರ್ವಹಣಾ ಆಯೋಗಕ್ಕೆ ಸಂಬಂಧಿಸಿದಂತೆ ದಾಖಲಿಸಿಕೊಂಡ ಸ್ವಯಂ ಪ್ರೇರಿತ ಪ್ರಕರಣ].
ಗೋಧಿ ಮತ್ತು ಭತ್ತದಂತಹ ಧಾನ್ಯಗಳನ್ನು ಕೊಯ್ಲು ಮಾಡಿದ ನಂತರ ಹೊಲಗಳಲ್ಲಿ ಉಳಿಯುವ ಒಣಹುಲ್ಲಿನ ಕಡ್ಡಿಗಳನ್ನು (ಕೂಳೆ) ದಹಿಸುವುದು ಕೃಷಿ ತ್ಯಾಜ್ಯವನ್ನು ಸುಲಭವಾಗಿ ಮತ್ತು ಅಗ್ಗವಾಗಿ ವಿಲೇವಾರಿ ಮಾಡುವ ವಿಧಾನವಾದರೂ ಅದು ಗಾಳಿಯ ಗುಣಮಟ್ಟದ ತೀವ್ರ ಕುಸಿತಕ್ಕೆ ಕಾರಣವಾಗುತ್ತದೆ.
ಹಿಂದಿನ ವಿಚಾರಣೆ ವೇಳೆ ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳ ನಿಷ್ಕ್ರಿಯತೆ ಬಗ್ಗೆ ತಾನು ತಿಳಿಸಿದ್ದರೂ ಕೃಷಿತ್ಯಾಜ್ಯ ಸುಡುವ ಘಟನೆಗಳಿಗೆ ಸಂಬಂಧಿಸಿದಂತೆ ಒಂದೇ ಒಂದು ವಿಚಾರಣೆ ನಡೆದಿಲ್ಲ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ, ಅಹ್ಸಾನುದ್ದೀನ್ ಅಮಾನುಲ್ಲಾ ಹಾಗೂ ಅಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿತು.
"ಇದು ರಾಜಕೀಯ ವಿಚಾರವಲ್ಲ, ಮುಖ್ಯ ಕಾರ್ಯದರ್ಶಿ ಯಾರದೋ ಇಚ್ಛೆಯಂತೆ ವರ್ತಿಸಿದರೆ, ಅವರ ವಿರುದ್ಧವೂ ಸಮನ್ಸ್ ನೀಡುತ್ತೇವೆ. ಮುಂದಿನ ಬುಧವಾರ ಮುಖ್ಯ ಕಾರ್ಯದರ್ಶಿಗಳು ಖುದ್ದು ಹಾಜರಿರಬೇಕೆಂದು ಸಮನ್ಸ್ ನೀಡುತ್ತಿದ್ದು ಆಗ ಎಲ್ಲವನ್ನೂ ವಿವರಿಸಲಿದ್ದೇವೆ. ಪಂಜಾಬ್ ವಿಚಾರದಲ್ಲಿಯೂ ಹೀಗೇ ಆಗಿದೆ. ಈ ವರ್ತನೆ ಸಂಪೂರ್ಣ ಅವಿಧೇಯತೆಯಿಂದ ಕೂಡಿದೆ” ಎಂದು ನ್ಯಾಯಾಲಯ ಕಿಡಿಕಾರಿತು.
ಈವರೆಗೆ 17 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂಬ ಹರಿಯಾಣ ಸರ್ಕಾರಿ ವಕೀಲರ ಹೇಳಿಕೆಗೆ ಪ್ರತಿಕ್ರಿಯಿಸಿದ ನ್ಯಾಯಾಲಯ “ಬಿಎನ್‌ಎಸ್‌ನ ಕೆಲವು ಸೆಕ್ಷನ್‌ಗಳನ್ನು ವಿಧಿಸಲಾಗಿದೆ. ನಾವು ನಿಮಗೆ ಸ್ಪಷ್ಟವಾಗಿ ಹೇಳುತ್ತಿದ್ದೇವೆ. 1 ವಾರ ಕಾಲಾವಕಾಶ ನೀಡುತ್ತೇವೆ ಮತ್ತೂ ಆದೇಶ ಪಾಲಿಸದಿದ್ದರೆ ಮುಖ್ಯ ಕಾರ್ಯದರ್ಶಿ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುತ್ತೇವೆ. ಜನರ ವಿರುದ್ಧ ಕಾನೂನು ಕ್ರಮ ಜರುಗಿಸಲು ನಿಮಗೇಕೆ ಹಿಂಜರಿಕೆ? " ಎಂದು ಪ್ರಶ್ನಿಸಿತು.
ಅಧಿಕಾರಿಗಳ ವರ್ತನೆ ಸಂಪೂರ್ಣ ಅವಿಧೇಯತೆಯಿಂದ ಕೂಡಿದೆ. ಜನರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅವರಿಗೇಕೆ ಹಿಂಜರಿಕೆ?ಸುಪ್ರೀಂ ಕೋರ್ಟ್
ಹರಿಯಾಣ ಸರ್ಕಾರ ಕೃಷಿತ್ಯಾಜ್ಯ ಸುಡುವವರಿಗೆ ನೆಪಮಾತ್ರದ ದಂಡ ವಿಧಿಸಿದೆ ಎಂದು ಅದು ಟೀಕಿಸಿತು.
ನೀವು ಹೆಸರಿಗೆ ಮಾತ್ರ ದಂಡ ವಿಧಿಸಿದ್ದೀರಿ. ಎಲ್ಲಿ ಬೆಂಕಿ ಉರಿಯುತ್ತಿದೆ ಎಂಬುದನ್ನು ಇಸ್ರೋ ನಿಮಗೆ ಹೇಳಿದರೂ ಅದು ಅರಿವಿಗೆ ಬಂದಿಲ್ಲ ಎಂದು ಹೇಳುತ್ತಿದ್ದೀರಿ. ನಿಯಮ ಉಲ್ಲಂಘಿಸಿದ್ದಕ್ಕೆ ಕೇವಲ 191 ಪ್ರಕರಣಗಳನ್ನು ದಾಖಲಿಸಲಾಗಿದ್ದು ಹೆಸರಿಗಷ್ಟೇ ದಂಡ ವಿಧಿಸಲಾಗಿದೆ. ದೆಹಲಿ ಪ್ರದೇಶದಲ್ಲಿ ವಾಯು ಗುಣಮಟ್ಟ ನಿರ್ವಹಣಾ ಆಯೋಗ ಕಾಯಿದೆ 2021ರ ಸೆಕ್ಷನ್ 12ಅನ್ನು ಹರಿಯಾಣ ಸರ್ಕಾರ ಸಂಪೂರ್ಣ ಉಲ್ಲಂಘಿಸಿದೆ” ಎಂದು ಅದು ಬೇಸರ ವ್ಯಕ್ತಪಡಿಸಿತು. ಈ ಹಂತದಲ್ಲಿ ಸಮಸ್ಯೆ ಪರಿಶಿಲನೆಗಾಗಿ ಖುದ್ದು ಹಾಜರಿರುವಂತೆ ಎರಡೂ ರಾಜ್ಯ ಸರ್ಕಾರಗಳ ಅಧಿಕಾರಿಗಳಿಗೆ ಅದು ತಾಕೀತು ಮಾಡಿತು.
“ನಿಯಮ ಉಲ್ಲಂಘಿಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರಗಳಿಂದ ಏನು ಸಾಧಿಸಿದಂತಾದೀತು? ಬಹುಶಃ ಅವು ಯಾರದೋ ನೆರವಿಗೆ ನಿಂತಿರಬೇಕು. ನಮಗೆ ಅದು ಬೇಕಾಗಿಲ್ಲ. ವಿಚಾರಣೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ಪಂಜಾಬ್‌ನ ಅಡ್ವೊಕೇಟ್ ಜನರಲ್ ಹಲವು ವಿಧದಲ್ಲಿ ಹೇಳಿದ್ದಾರೆ. ಹಾಗಿದ್ದರೆ ಜನ ಹೆಸರಿಗೆ ದಂಡ ಕಟ್ಟಿ ತಮ್ಮ ಕೃತ್ಯ ಮುಂದುವರೆಸುತ್ತಿರುತ್ತಾರೆ… ಬುಧವಾರ ಮುಖ್ಯ ಕಾರ್ಯದರ್ಶಿಗಳು ಹಾಜರಾಗಲಿ. ರಾಜ್ಯಗಳು ನಿರ್ದೇಶನಗಳಿಗೆ ಬದ್ಧವಾಗಿರಬೇಕು" ಎಂದು ಪೀಠ ಆದೇಶಿಸಿತು.
ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಕೃಷಿ ತ್ಯಾಜ್ಯ ಸುಡುವುದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ನ್ಯಾಯಾಲಯ ಕಳೆದ ಕೆಲವು ವರ್ಷಗಳಿಂದ ಹೇಳುತ್ತಲೇ ಬಂದಿದೆ.