CJI DY Chandrachud, Justices Sanjiv Khanna, BR Gavai, Surya Kant and Aniruddha Bose
CJI DY Chandrachud, Justices Sanjiv Khanna, BR Gavai, Surya Kant and Aniruddha Bose 
ಸುದ್ದಿಗಳು

ನ್ಯಾ. ಗಂಗೋಪಾಧ್ಯಾಯ ವರ್ಸಸ್‌ ನ್ಯಾ. ಸೌಮೆನ್ ಸೇನ್ ವಿವಾದ: ಸ್ವಯಂಪ್ರೇರಿತವಾಗಿ ವಿಷಯ ಪರಿಗಣಿಸಿದ ಸುಪ್ರೀಂ ಕೋರ್ಟ್

Debayan Roy

ವಿಭಾಗೀಯ ಪೀಠದ ತಡೆಯಾಜ್ಞೆಯನ್ನು ನಿರ್ಲಕ್ಷಿಸುವಂತೆ ಏಕ ಸದಸ್ಯ ಪೀಠ ಹೊರಡಿಸಿದ ವಿಲಕ್ಷಣ ಆದೇಶ ಸೇರಿದಂತೆ ಕಲ್ಕತ್ತಾ ಹೈಕೋರ್ಟ್ ಮುಂದೆ ಕಳೆದ ಎರಡು ದಿನಗಳಲ್ಲಿ ನಡೆದ ಘಟನೆಗಳನ್ನು ಭಾರತದ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಪರಿಗಣಿಸಿದೆ.

ಏಕಸದಸ್ಯ ಪೀಠದ ನೇತೃತ್ವದ ವಹಿಸಿದ್ದ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ವಿಭಾಗೀಯ ಪೀಠವನ್ನು ನಿರ್ಲಕ್ಷಿಸಿ ಆದೇಶ ಹೊರಡಿಸುವುದರ ಜೊತೆಗೆ, ವಿಭಾಗೀಯ ಪೀಠದ ಮುಖ್ಯಸ್ಥರಾಗಿದ್ದ ನ್ಯಾಯಮೂರ್ತಿ ಸೌಮೆನ್ ಸೇನ್ ಅವರು "ರಾಜ್ಯದ ರಾಜಕೀಯ ಪಕ್ಷದ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ" ಎಂದು ಆರೋಪಿಸಿದ್ದರು.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ ಆರ್ ಗವಾಯಿ, ಸೂರ್ಯಕಾಂತ್ ಮತ್ತು ಅನಿರುದ್ಧ ಬೋಸ್ ಅವರನ್ನೊಳಗೊಂಡ ಐವರು ನ್ಯಾಯಾಧೀಶರ ಪೀಠವು ಶನಿವಾರ ಬೆಳಿಗ್ಗೆ 10:30ಕ್ಕೆ ಸ್ವಯಂಪ್ರೇರಿತವಾಗಿ ಪ್ರಕರಣದ ವಿಚಾರಣೆ ನಡೆಸಲಿದೆ.

Justice Abhijit Gangopadhyay Justice Soumen Sen

ರಾಜ್ಯದಲ್ಲಿ ನಕಲಿ ಜಾತಿ ಪ್ರಮಾಣಪತ್ರಗಳ ವಿತರಣೆಯು ವ್ಯಾಪಕವಾಗಿದೆ ಮತ್ತು ವೈದ್ಯಕೀಯ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ಹಲವಾರು ವ್ಯಕ್ತಿಗಳು ಇಂತಹ ಪ್ರಮಾಣಪತ್ರಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿ ಕಲ್ಕತ್ತಾ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಬುಧವಾರ (ಜನವರಿ 24) ಬೆಳಿಗ್ಗೆ, ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸುವಂತೆ ಪಶ್ಚಿಮ ಬಂಗಾಳ ಪೊಲೀಸರಿಗೆ ಆದೇಶಿಸಿದ್ದರು.

ಈ ಆದೇಶ ಹೊರಡಿಸಿದ ಕೆಲವೇ ನಿಮಿಷಗಳಲ್ಲಿ, ಅಡ್ವೊಕೇಟ್ ಜನರಲ್ ಕಿಶೋರ್ ದತ್ತಾ ಅವರು ನ್ಯಾಯಮೂರ್ತಿಗಳಾದ ಸೌಮೆನ್ ಸೇನ್ ಮತ್ತು ಉದಯ್ ಕುಮಾರ್ ಅವರ ವಿಭಾಗೀಯ ಪೀಠದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದರು, ಅದು ಅದೇ ದಿನ ಏಕಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡಿತು.

ನಂತರ ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಅದೇ ದಿನ ಮತ್ತೆ ಈ ವಿಷಯವನ್ನು ಕೈಗೆತ್ತಿಕೊಂಡರು ಮತ್ತು ವಿಭಾಗೀಯ ಪೀಠವು ಹೊರಡಿಸಿದ ತಡೆಯಾಜ್ಞೆಯ ಬಗ್ಗೆ ತಮಗೆ ಮಾಹಿತಿ ನೀಡಲಾಗಿಲ್ಲ ಎಂದು ಒತ್ತಿ ಹೇಳಿ, ಪ್ರಕರಣದ ದಾಖಲೆಗಳನ್ನು ಸಿಬಿಐಗೆ ಹಸ್ತಾಂತರಿಸುವಂತೆ ಎಜಿಗೆ ಆದೇಶಿಸಿದ್ದರು.

ನಂತರ ವಿಭಾಗೀಯ ಪೀಠವು ಗುರುವಾರ ಬೆಳಿಗ್ಗೆ ಈ ವಿಷಯವನ್ನು ಮತ್ತೆ ಕೈಗೆತ್ತಿಕೊಂಡು ನ್ಯಾಯಮೂರ್ತಿ ಗಂಗೋಪಾಧ್ಯಾಯ ಹೊರಡಿಸಿದ ಆದೇಶವನ್ನು ಬದಿಗೆ ಸರಿಸಿತು. ಈ ವಿಷಯ ಅಲ್ಲಿಗೆ ಮುಗಿಯಲಿಲ್ಲ.

ಏಕಸದಸ್ಯ ಪೀಠವು ಗುರುವಾರ (ಜನವರಿ 25) ಮತ್ತೆ ಈ ವಿಷಯವನ್ನು ಕೈಗೆತ್ತಿಕೊಂಡು, ಮೇಲ್ಮನವಿ ಮೆಮೋ ಇಲ್ಲದಿದ್ದಾಗ ತಮ್ಮ ಆದೇಶಕ್ಕೆ ತಡೆಯಾಜ್ಞೆ ನೀಡಲು ವಿಭಾಗೀಯ ಪೀಠಕ್ಕೆ ಯಾವ ನಿಯಮ ಅನುಮತಿಸುತ್ತದೆ ಎಂದು ಎಜಿ ಅವರನ್ನು ಕೇಳಿದರು. ಈ ಪ್ರಶ್ನೆಗೆ ಉತ್ತರಿಸಲು ತಾನು ಜವಾಬ್ದಾರನಲ್ಲ ಎಂದು ಎಜಿ ಹೇಳಿದ್ದು, ಏಕ ನ್ಯಾಯಾಧೀಶರು "ವಿಭಾಗೀಯ ಪೀಠಕ್ಕೆ ಹೋಲಿಸಿದರೆ ಕೆಳ ನ್ಯಾಯಾಲಯವಾಗಿದ್ದಾರೆ" ಎಂದಿದ್ದನ್ನು ಆದೇಶದಲ್ಲಿ ದಾಖಲಿಸಿದರು.

ವಿಭಾಗೀಯ ಪೀಠವು ತನ್ನ ಆದೇಶವನ್ನು ತಡೆಹಿಡಿಯಲು ಯಾವುದೇ ತುರ್ತು ಇರಲಿಲ್ಲ ಎಂದು ನ್ಯಾ. ಗಂಗೋಪಾಧ್ಯಾಯ ಹೇಳಿದ್ದಾರೆ. "ತುರ್ತಿಗೆ ಕಾರಣವಾದ ಯಾವುದೇ ಅಂಶದ ಬಗ್ಗೆ ಆದೇಶದಲ್ಲಿ ಮಾಹಿತಿ ಇಲ್ಲ. ಅಂತಹ ತುರ್ತಿನ ಸಂಗತಿ ಏನಿತ್ತು? ರಾಜ್ಯದ ರಾಜಕೀಯ ಪಕ್ಷದೆಡೆಗೆ ಯಾರು ಆಸಕ್ತಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ?" ಎಂದು ಪ್ರಶ್ನಿಸಿದರು. ಈ ಆಧಾರದ ಮೇಲೆ, ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ವಿಭಾಗೀಯ ಪೀಠದ ಆದೇಶವನ್ನು ನಿರ್ಲಕ್ಷಿಸಬೇಕು ಮತ್ತು ಸಿಬಿಐ ತಕ್ಷಣ ತನಿಖೆ ಪ್ರಾರಂಭಿಸಬೇಕು ಎಂದರು.

"ಕಾನೂನುಬಾಹಿರ ಮೇಲ್ಮನವಿಯ ಮುಂದುವರಿಕೆಯಾಗಿ ಈ ಆದೇಶವನ್ನು ಹೊರಡಿಸಿರುವುದರಿಂದ ಈ ವಿಭಾಗೀಯ ಪೀಠದ ಆದೇಶವನ್ನು ನಿರ್ಲಕ್ಷಿಸುವುದನ್ನು ಬಿಟ್ಟು ನನಗೆ ಬೇರೆ ಆಯ್ಕೆಯಿಲ್ಲ. 'ಹಿತಾಸಕ್ತಿ ಹೊಂದಿರುವ ನ್ಯಾಯಮೂರ್ತಿ ಸೌಮೆನ್ ಸೇನ್' ಅವರ ವಿಭಾಗೀಯ ಪೀಠವು ಹೊರಡಿಸಿದ ಕಾನೂನುಬಾಹಿರ ಆದೇಶವನ್ನು ನಾನು ನಿರ್ಲಕ್ಷಿಸಿದ್ದೇನೆ" ಎಂದು ಆದೇಶದಲ್ಲಿ ಉಲ್ಲೇಖಿಸಿದ್ದರು.

ಅಲ್ಲಿಗೆ ನಿಲ್ಲಿಸದ ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ನ್ಯಾಯಮೂರ್ತಿ ಸೇನ್ ವಿರುದ್ಧ ವೈಯಕ್ತಿಕ ವಾಗ್ದಾಳಿ ನಡೆಸಿದ್ದರು. ನ್ಯಾಯಮೂರ್ತಿ ಸೇನ್ ಅವರು ಇತ್ತೀಚೆಗೆ ನ್ಯಾಯಾಲಯದ ರಜೆಯ ಹಿಂದಿನ ದಿನ ಕಲ್ಕತ್ತಾ ಹೈಕೋರ್ಟ್‌ನ ಮತ್ತೊಬ್ಬ ನ್ಯಾಯಮೂರ್ತಿ ಅಮೃತಾ ಸಿನ್ಹಾ ಅವರನ್ನು ತಮ್ಮ ಕೊಠಡಿಗೆ ಕರೆದು ತೃಣಮೂಲ ಕಾಂಗ್ರೆಸ್ ನಾಯಕ ಅಭಿಷೇಕ್ ಬ್ಯಾನರ್ಜಿಗೆ ರಾಜಕೀಯ ಭವಿಷ್ಯವಿದೆ ಮತ್ತು ಅವರಿಗೆ ತೊಂದರೆಯಾಗಬಾರದು ಎಂದು ಹೇಳಿದ್ದರು ಎಂದು ಅವರು ಆದೇಶದಲ್ಲಿ ಆರೋಪಿಸಿದ್ದಾರೆ.

ನ್ಯಾಯಮೂರ್ತಿ ಸಿನ್ಹಾ ಪ್ರಸ್ತುತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಬ್ಯಾನರ್ಜಿಗೆ ಸಂಬಂಧಿಸಿದ ವಿಷಯಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಬ್ಯಾನರ್ಜಿ ಭಾಗಿಯಾಗಿರುವ ಎರಡೂ ಪ್ರಕರಣಗಳನ್ನು ವಜಾಗೊಳಿಸುವಂತೆ ನ್ಯಾಯಮೂರ್ತಿ ಸೇನ್ ಅವರು ನ್ಯಾಯಮೂರ್ತಿ ಸಿನ್ಹಾ ಅವರಿಗೆ ತಿಳಿಸಿದ್ದಾರೆ. 2021ರಲ್ಲಿ ಸುಪ್ರೀಂ ಕೋರ್ಟ್ ಕೊಲಿಜಿಯಂ ಅವರ ವರ್ಗಾವಣೆಗೆ ಶಿಫಾರಸ್ಸು ಮಾಡಿದ್ದರೂ ನ್ಯಾಯಮೂರ್ತಿ ಸೇನ್ ಅವರು ಕಲ್ಕತ್ತಾ ಹೈಕೋರ್ಟ್‌ ನ್ಯಾಯಾಧೀಶರಾಗಿ ಏಕೆ ಮುಂದುವರೆದಿದ್ದಾರೆ ಎಂದು ನ್ಯಾಯಮೂರ್ತಿ ಗಂಗೋಪಾಧ್ಯಾಯ ಪ್ರಶ್ನಿಸಿದ್ದರು.

ಈ ಆದೇಶ ಮತ್ತು ಅವಲೋಕನಗಳನ್ನು ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ಪರಿಗಣಿಸಿದೆ.