Prisons and Supreme Court
Prisons and Supreme Court 
ಸುದ್ದಿಗಳು

ಜಾಮೀನು ನೀಡಿದ್ದರೂ ಜೈಲಿನಿಂದ ಬಿಡುಗಡೆಗೆ ವಿಳಂಬ: ಸ್ವಯಂಪ್ರೇರಿತ ವಿಚಾರಣೆಗೆ ಮುಂದಾದ ಸುಪ್ರೀಂಕೋರ್ಟ್‌

Bar & Bench

ನ್ಯಾಯಾಲಯ ಜಾಮೀನು ನೀಡಿದ ಬಳಿಕವೂ ಅಪರಾಧಿಗಳನ್ನು ಜೈಲು ಅಧಿಕಾರಿಗಳು ಬಿಡುಗಡೆ ಮಾಡಲು ವಿಳಂಬ ಮಾಡುವುದನ್ನು ಗಮನಿಸಿರುವ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತ ವಿಚಾರಣೆಗೆ ನಿರ್ಧರಿಸಿದೆ.

ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಎಲ್‌ ನಾಗೇಶ್ವರ ರಾವ್‌ ಮತ್ತು ಎ ಎಸ್‌ ಬೋಪಣ್ಣ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಲಿದೆ. ಆಗ್ರಾ ಕೇಂದ್ರ ಕಾರಾಗೃಹದಲ್ಲಿ ಅಪರಾಧಿಗಳಾಗಿ ಸೆರೆಯಾಗಿದ್ದ 13 ಮಂದಿಗೆ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ತ್ವರಿತ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.

ಜುಲೈ 8ರಂದು ನ್ಯಾಯಾಲಯ ಆದೇಶ ಹೊರಡಿಸಿದ್ದರೂ, ನಾಲ್ಕು ದಿನಗಳ ಬಳಿಕ ಅಪರಾಧಿಗಳನ್ನು ಬಿಡುಗಡೆ ಮಾಡಲಾಗಿತ್ತು. ಪ್ರಮಾಣೀಕೃತ ಆದೇಶದ ಪ್ರತಿಯನ್ನು ಅಂಚೆಯ ಮೂಲಕ ಸ್ವೀಕರಿಸಿಲ್ಲವಾದ್ದರಿಂದ ಅಪರಾಧಿಗಳನ್ನು ಬಿಡುಗಡೆ ಮಾಡಲಾಗದು ಎಂದು ಜೈಲು ಅಧಿಕಾರಿಗಳು ಹೇಳಿದ್ದರು.

ಕೃತ್ಯ ನಡೆದ ಸಂದರ್ಭದಲ್ಲಿ ಬಾಲಾಪರಾಧಿಗಳಾಗಿದ್ದರೂ ಅವರು 14ರಿಂದ 20 ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾರೆ. ಜುಲೈ 8ರಂದು 13 ಅಪರಾಧಿಗಳಿಗೆ ಸುಪ್ರೀಂ ಕೋರ್ಟ್‌ ಜಾಮೀನು ನೀಡಿತ್ತು. ಜುಲೈ 12ರಂದು ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ನೇತೃತ್ವದ ಪೀಠದ ಮುಂದೆ ಹಾಜರಾಗಿದ್ದ ವಕೀಲ ರಿಷಿ ಮಲ್ಹೋತ್ರಾ ಅವರು ಅಪರಾಧಿಗಳನ್ನು ಇನ್ನಷ್ಟೇ ಬಿಡುಗಡೆ ಮಾಡಬೇಕಿದೆ ಎಂದಿದ್ದರು. ಆ ಬಳಿಕ ಜುಲೈ 12ರಂದು ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.

ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್‌ ಅವರು ಆದೇಶ ಪ್ರತಿಯನ್ನು ಜೈಲಿನ ಮೇಲ್ವಿಚಾರಕರಿಗೆ ಇಮೇಲ್‌ ಮೂಲಕ ಕಳುಹಿಸುವುದರಿಂದ ಅದು ಬೇಗ ತಲುಪಲಿದೆ. ಇದರಿಂದ ಅಪರಾಧಿಗಳನ್ನು ತಕ್ಷಣ ಜೈಲಿನಿಂದ ಬಿಡುಗಡೆ ಮಾಡಲು ಅನುಕೂಲವಾಗುತ್ತದೆ ಎಂದು ನ್ಯಾಯಾಲಯಕ್ಕೆ ವಕೀಲ ಮಲ್ಹೋತ್ರಾ ಸಲಹೆ ನೀಡಿದ್ದರು. ಈ ಪ್ರಕರಣವನ್ನು ಆಡಳಿತಾತ್ಮಕ ವಿಭಾಗದಿಂದ ಪರಿಗಣಿಸಲಾಗುವುದು ಎಂದು ನ್ಯಾಯಮೂರ್ತಿ ಬ್ಯಾನರ್ಜಿ ಭರವಸೆ ನೀಡಿದ್ದರು.