ನೂತನ ನಿಯಮಾವಳಿಗಳನ್ನು ಅಂತಿಮಗೊಳಿಸುವ ವೇಳೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕಿರುಕುಳ ಮತ್ತು ತಾರತಮ್ಯ ತಡೆಗಾಗಿ ಸುರಕ್ಷತಾ ಕ್ರಮ ಕೈಗೊಳ್ಳುವುದನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ವಿಶ್ವವಿದ್ಯಾಲಯಗಳ ಅನುದಾನ ಆಯೋಗಕ್ಕೆ (ಯುಜಿಸಿ) ನಿರ್ದೇಶನ ನೀಡಿದೆ [ಅಬೇದಾ ಸಲೀಂ ತಡ್ವಿ ಮತ್ತಿತರರು ಹಾಗೂ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ ].
ಇನ್ನು 8 ವಾರಗಳಲ್ಲಿ (ಸುಮಾರು 2 ತಿಂಗಳು) ನಿಯಮಗಳನ್ನು ಅಂತಿಮಗೊಳಿಸುವಂತೆ ಯುಜಿಸಿಗೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ನಿರ್ದೇಶಿಸಿತು.
ಜಾತಿ ಆಧಾರಿತ ಕಿರುಕುಳವನ್ನು ಎದುರಿಸಿ ಆತ್ಮಹತ್ಯೆ ಮಾಡಿಕೊಂಡ ಹಿಂದುಳಿದ ಸಮುದಾಯಗಳ ಇಬ್ಬರು ವಿದ್ಯಾರ್ಥಿಗಳಾದ ರೋಹಿತ್ ವೇಮುಲಾ ಮತ್ತು ಪಾಯಲ್ ತಡ್ವಿ ಅವರ ತಾಯಂದಿರು 2019ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
2012ರ ಯುಜಿಸಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಮತ್ತು ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯ ಪರಿಹರಿಸಲು ನಿರ್ದಿಷ್ಟ ಕ್ರಮ ತೆಗೆದುಕೊಳ್ಳುವಂತೆ ಅರ್ಜಿಯಲ್ಲಿ ಕೋರಲಾಗಿತ್ತು. ವಾದ ಆಲಿಸಿದ ಪೀಠ ಯುಜಿಸಿ ಪಾಲಿಸಬೇಕಾದ ನಿರ್ದೇಶನಗಳನ್ನು ನೀಡಿದೆ.
ಪೀಠ ನೀಡಿರುವ ನಿರ್ದೇಶನದ ಪ್ರಮುಖಾಂಶಗಳು
ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರಿತ ಎಲ್ಲಾ ತಾರತಮ್ಯವನ್ನು ಸಂಪೂರ್ಣವಾಗಿ ನಿಷೇಧಿಸಿ, ದೃಢ ಶಿಸ್ತಿನ ಕ್ರಮ ಜಾರಿಗೆ ತರಬೇಕು.
ತರಗತಿಗಳು, ಹಾಸ್ಟೆಲ್, ಅಥವಾ ಅಕಾಡೆಮಿಕ್ ಬ್ಯಾಚ್‌ಗಳಲ್ಲಿ ಭೇದ ಭಾವ ನಿಷೇಧ.
ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಸಕಾಲಕ್ಕೆ ತಲುಪಿಸುವುದಕ್ಕಾಗಿ ಮತ್ತು ದುರುಪಯೋಗ ತಡೆಗಾಗಿ ಡಿಜಿಟಲೀಕರಣಗೊಂಡ ವಿದ್ಯಾರ್ಥಿ ವೇತನ ವ್ಯವಸ್ಥೆ ರೂಪಿಸಬೇಕು.
ಕುಂದುಕೊರತೆ ಸಮಿತಿಗಳನ್ನು ರಚಿಸಬೇಕು. ಆ ಸಮಿತಿಗಳಲ್ಲಿ ಶೇ 50ರಷ್ಟು ಸದಸ್ಯರು ಎಸ್‌ಸಿ/ಎಸ್‌ಟಿ/ಒಬಿಸಿ ಸಮುದಾಯದಿಂದ ಬಂದಿದ್ದು ಅಧ್ಯಕ್ಷರೂ ಕೂಡ ಅಷ್ಟೇ ಸಮುದಾಯದವರಾಗಿರಬೇಕು.
ದೂರು ನೀಡುವವರಿಗೆ ರಕ್ಷಣಾ ವ್ಯವಸ್ಥೆ ಕಲ್ಪಿಸಬೇಕು. ಅವರ ಗೌಪ್ಯತೆ ಕಾಪಾಡಿಕೊಳ್ಳಬೇಕು.
ಭೇದಭಾವ ತಡೆಹಿಡಿಯುವಲ್ಲಿ ನಿರ್ಲಕ್ಷ್ಯ ಮಾಡಿದ ಸಿಬ್ಬಂದಿ ವೈಯಕ್ತಿಕವಾಗಿ ಜವಾಬ್ದಾರರು.
ತಾರತಮ್ಯಕ್ಕೊಳಗಾದ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ಆಪ್ತ ಸಮಾಲೋಚನೆ ಕೈಗೊಳ್ಳಬೇಕು.
ಸಂಸ್ಥೆಗಳು ನಿಯಮ ಪಾಲನೆ ಮೌಲ್ಯಮಾಪನ ಮಾಡಲು ನಿಯಮಿತ ಸಾಮಾಜಿಕ ಲೆಕ್ಕಪರಿಶೀಲನೆ ನಡೆಸಬೇಕು. ಎನ್‌ಎಎಸಿ (ನ್ಯಾಕ್) ವರದಿ ನೀಡಬೇಕು.
ನಿಯಮ ಪಾಲಿಸದ ಶಿಕ್ಷಣ ಸಂಸ್ಥೆಗಳ ಮೇಲೆ ಅನುದಾನ ರದ್ದುಪಡಿಸುವುದೂ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಬೇಕು.
ಹಿಂದುಳಿದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿಯದಂತೆ ತಡೆಯುವುದಕ್ಕಾಗಿ ಪೂರ್ವತಯಾರಿ ಶೈಕ್ಷಣಿಕ ನೆರವನ್ನು ಒದಗಿಸಬೇಕು.
ಅರ್ಜಿದಾರರ ಪರವಾಗಿ ಹಿರಿಯ ವಕೀಲೆ ಇಂದಿರಾ ಜೈಸಿಂಗ್, ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು.