ಬಾಬಾ ರಾಮದೇವ್, ಸುಪ್ರೀಂ ಕೋರ್ಟ್ 
ಸುದ್ದಿಗಳು

ಪತಂಜಲಿ ಜಾಹೀರಾತಿನ ಪ್ರತಿ ಸುಳ್ಳು ಪ್ರತಿಪಾದನೆಗೆ ₹1 ಕೋಟಿ ದಂಡ ವಿಧಿಸುವುದಾಗಿ ಬಾಬಾ ರಾಮದೇವ್‌ಗೆ ಸುಪ್ರೀಂ ಎಚ್ಚರಿಕೆ

ಪುರಾವೆ ಆಧರಿತ ಔಷಧಗಳ ವಿರುದ್ಧ ಸುಳ್ಳು ಹೇಳಿಕೆ ನೀಡಿದ ಬಾಬಾ ರಾಮದೇವ್‌ ಒಡೆತನದ ಕಂಪನಿಯನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು.

Bar & Bench

ರೋಗಗಳನ್ನು ಗುಣಪಡಿಸುತ್ತದೆ ಎಂದು ಹೇಳಿಕೊಳ್ಳುವ ಪತಂಜಲಿ ಆಯುರ್ವೇದ ಉತ್ಪನ್ನಗಳ ಜಾಹೀರಾತಿನಲ್ಲಿ ಮಾಡಿದ ಪ್ರತಿಯೊಂದು ಸುಳ್ಳು ಪ್ರತಿಪಾದನೆಗಳಿಗೆ ತಲಾ ₹ 1 ಕೋಟಿ ದಂಡ ವಿಧಿಸುವುದಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಎಚ್ಚರಿಕೆ ನೀಡಿದೆ.

ಇಡೀ ಪ್ರಕರಣವನ್ನು ಅಲೋಪತಿ / ಆಧುನಿಕ ಔಷಧ ಮತ್ತು ಆಯುರ್ವೇದ ಉತ್ಪನ್ನಗಳ ನಡುವಿನ ಚರ್ಚೆಗೆ ಸೀಮಿತಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಪೀಠ ನುಡಿಯಿತು.

"ಪತಂಜಲಿ ಆಯುರ್ವೇದ ತನ್ನೆಲ್ಲಾ ಸುಳ್ಳು ಮತ್ತು ದಾರಿತಪ್ಪಿಸುವ ಜಾಹೀರಾತುಗಳನ್ನು ತಕ್ಷಣ ನಿಲ್ಲಿಸಬೇಕು. ಈ ನ್ಯಾಯಾಲಯ ಅಂತಹ ಉಲ್ಲಂಘನೆಗಳನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತದೆ . ನಿರ್ದಿಷ್ಟ ರೋಗ ಗುಣಪಡಿಸಲಾಗುತ್ತದೆ ಎಂದು ಸುಳ್ಳು ಪ್ರತಿಪಾದನೆ ಮಾಡಿರುವ ಪ್ರತಿ ಉತ್ಪನ್ನದ ಮೇಲೆ ತಲಾ ₹ 1 ಕೋಟಿಯವರೆಗೆ ದಂಡ ವಿಧಿಸಬೇಕಾಗುತ್ತದೆ " ಎಂದು ನ್ಯಾ. ಅಮಾನುಲ್ಲಾ ಎಚ್ಚರಿಕೆ ನೀಡಿದರು.

ಪುರಾವೆ ಆಧರಿತ ಔಷಧಗಳ ವಿರುದ್ಧ ಸುಳ್ಳು ಹೇಳಿಕೆ ನೀಡಿದ ಬಾಬಾ ರಾಮದೇವ್‌ ಒಡೆತನದ ಕಂಪನಿಯನ್ನು ನ್ಯಾಯಾಲಯ ವಿಚಾರಣೆ ವೇಳೆ ತರಾಟೆಗೆ ತೆಗೆದುಕೊಂಡಿತು.

ದಾರಿತಪ್ಪಿಸುವ ವೈದ್ಯಕೀಯ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಪರಿಹಾರ ಕಂಡುಕೊಳ್ಳುವ ಅಗತ್ಯವಿರುವುದರಿಂದ ಮುಂದೆ ಇಂತಹ ಜಾಹೀರಾತುಗಳನ್ನು ಪ್ರಕಟಿಸದಂತೆ ಮತ್ತು ಮಾಧ್ಯಮಗಳಲ್ಲಿ ಅಂತಹ ಹೇಳಿಕೆಗಳನ್ನು ನೀಡದಂತೆ ಅದು ಪತಂಜಲಿ ಆಯುರ್ವೇದಕ್ಕೆ ನಿರ್ದೇಶನ ನೀಡಿತು.

ಈ ನಿಟ್ಟಿನಲ್ಲಿ ಸಮಾಲೋಚನೆ ನಡೆಸಿ ಶಿಫಾರಸು ಮತ್ತು ಪರಿಹಾರಗಳನ್ನು ಸೂಚಿಸುವಂತೆ ಕೇಂದ್ರ ಸರ್ಕಾರಕ್ಕೆ ಅದು ಸೂಚಿಸಿತು.

ಕೋವಿಡ್‌ ಲಸಿಕೆ ಮತ್ತು ಆಧುನಿಕ ಔಷಧದ ವಿರುದ್ಧ ಅವಹೇಳನಕಾರಿ ಅಭಿಯಾನ ನಡೆಸಲಾಗುತ್ತಿದೆ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಅಡ್ವೊಕೇಟ್-ಆನ್-ರೆಕಾರ್ಡ್ ಅಮರಜೀತ್ ಸಿಂಗ್ ಅವರ ಮೂಲಕ ಸಲ್ಲಿಸಿದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಕೋವಿಡ್‌ ಸಂದರ್ಭದಲ್ಲಿ ಅಲೋಪತಿ ವೈದ್ಯಕೀಯ ಪದ್ಧತಿ ಮತ್ತು ಅದನ್ನು ಪಾಲಿಸುವ ವೈದ್ಯರಿಗೆ ಕಳಂಕ ತರುತ್ತಿದ್ದ ಬಗ್ಗೆ ಸುಪ್ರೀಂ ಕೋರ್ಟ್‌ ರಾಮದೇವ್‌ ಅವರನ್ನು ಕಳೆದ ವರ್ಷ ಪ್ರಶ್ನಿಸಿತ್ತು.

ಪತಂಜಲಿ ರಾಯಭಾರಿ ವಿರುದ್ಧ ಐಎಂಎ ಅನೇಕ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಿತ್ತು. ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 5, 2024ರಂದು ನಡೆಯಲಿದೆ.

ಐಎಂಎ ಪರವಾಗಿ ಹಿರಿಯ ವಕೀಲ ಪಿ.ಎಸ್.ಪಟ್ವಾಲಿಯಾ ಮತ್ತು ವಕೀಲ ಪ್ರಭಾಸ್ ಬಜಾಜ್ ಹಾಜರಿದ್ದರು. ಪತಂಜಲಿ ಆಯುರ್ವೇದ ಪರವಾಗಿ ಹಿರಿಯ ವಕೀಲ ಸಜ್ಜನ್‌ ಪೂವಯ್ಯ ವಾದ ಮಂಡಿಸಿದರು.

ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಹಾಜರಿದ್ದರು. ಪ್ರಕರಣದಲ್ಲಿ ಮಧ್ಯಪ್ರವೇಶ ಕೋರಿದ್ದ ನ್ಯಾಷನಲ್ ಅಸೋಸಿಯೇಷನ್ ಆಫ್ ಫಾರ್ಮಾಕಾಲಜಿ ಅಂಡ್ ಥೆರಪ್ಯೂಟಿಕ್ಸ್ ಪರವಾಗಿ ವಕೀಲ ಮೃಣ್ಮಯಿ ಚಟರ್ಜಿ ಅವರು ವಾದ ಮಂಡಿಸಿದ್ದರು.