ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಪ್ರಕರಣಗಳು ವ್ಯಾಪವಾಗಿರುವ ಹಿನ್ನೆಲೆಯಲ್ಲಿ ವಕೀಲರ ಪರಿಷತ್ ಸದಸ್ಯರ ಜೊತೆ ಸಭೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ಒಂದು ವಾರ ಮುಂಚಿತವಾಗಿ ಸುಪ್ರೀಂ ಕೋರ್ಟ್‌ನ ಬೇಸಿಗೆ ರಜಾ ಕಾಲದ ಅವಧಿ ಆರಂಭಿಸಬೇಕು ಎನ್ನುವ ಮನವಿಯನ್ನು ಪರಿಶೀಲಿಸಲು ಸಮ್ಮತಿಸಿದ್ದಾರೆ.
ಸುಪ್ರೀಂ ಕೋರ್ಟ್ ಬೇಸಿಗೆ ರಜಾ ಕಾಲದ ಅವಧಿಯು ಮೇ 8ರಿಂದ ಆರಂಭವಾಗುವ ಸಾಧ್ಯತೆ ಇದ್ದು, ಜೂನ್ 27ರವರೆಗೆ ಮುಂದುವರಿಯಲಿದೆ. ಜೂನ್ 28ರಿಂದ ನ್ಯಾಯಾಲಯ ಪುನಾರಂಭವಾಗಲಿದೆ.
ಸುಪ್ರೀಂ ಕೋರ್ಟ್ ವಕೀಲರ ಪರಿಷತ್ (ಎಸ್‌ಸಿಬಿಎ), ಸುಪ್ರೀಂ ಕೋರ್ಟ್ ದಾಖಲೆಯಲ್ಲಿರುವ ವಕೀಲರ ಸಂಘ (ಎಸ್‌ಸಿಎಒಆರ್‌ಎ) ಮತ್ತು ಭಾರತೀಯ ವಕೀಲರ ಪರಿಷತ್ ಪ್ರತಿನಿಧಿಗಳೊಂದಿಗೆ ತುರ್ತು ಸಭೆ ನಡೆಸಿದ ಬಳಿಕ ಈ ಬೆಳವಣಿಗೆ ಸಂಭವಿಸಿದೆ. ಮನವಿಯನ್ನು ಪೂರ್ಣಪೀಠದ ಮುಂದಿರಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.
60 ಹಾಸಿಗೆಗಳ ವೈದ್ಯಕೀಯ ವ್ಯವಸ್ಥೆ ಕಲ್ಪಿಸಲು ಹಾಗೂ ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸಲು, ಕೋವಿಡ್ ಲಸಿಕೆ ಇತ್ಯಾದಿಗಾಗಿ ಸೂಕ್ತ ಸ್ಥಳ ನೀಡುವಂತೆ ಕೋರಿದ್ದ ಮನವಿಯನ್ನು ಪರಿಶೀಲಿಸಲೂ ಸಹ ಸಿಜೆಐ ಸಮ್ಮತಿಸಿದ್ದಾರೆ. ಕೋವಿಡ್ ಕೇರ್ ಘಟಕಕ್ಕೆ ವಕೀಲರ ಚೇಂಬರ್ ಬ್ಲಾಕ್ ಬಳಸುವ ಬಗೆಗಿನ ಕೋರಿಕೆಯ ಪರಿಶೀಲನೆಗೂ ಸಿಜೆಐ ಸಮ್ಮತಿಸಿದ್ದಾರೆ ಎಂದು ಎಸ್‌ಸಿಬಿಎ ಅಧ್ಯಕ್ಷ ವಿಕಾಸ್ ಸಿಂಗ್ ಹೇಳಿದ್ದಾರೆ.
ಸ್ಥಳವನ್ನು ಬಳಸುವ ಸಂಬಂಧ ಪರಿಶೀಲನೆ ನಡೆಸಲು ಹಾಗೂ ವ್ಯವಸ್ಥೆ ಕಲ್ಪಿಸಲು ಚಾಣಕ್ಯಪುರಿ ತಹಶೀಲ್ದಾರ್‌ಗೆ ವಿವರಿಸಲಾಗಿದೆ. ಕೊರೊನಾ ಸೋಂಕಿತ ವಕೀಲರು, ನ್ಯಾಯಾಲಯದ ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರಿಗೆ ಚಿಕಿತ್ಸೆ ನೀಡಲು ಕೋವಿಡ್ ಕೇರ್ ಘಟಕ ಆರಂಭಿಸಲು ಅಪ್ಪು ಘಾಟ್ ಸಮುಚ್ಚಯದಲ್ಲಿರುವ ನೂತನವಾಗಿ ನಿರ್ಮಿಸಲಾಗಿರುವ ವಕೀಲರ ಚೇಂಬರ್ ಬಳಸಲು ಅನುಮತಿಸುವಂತೆ ಮುಖ್ಯ ನ್ಯಾಯಮೂರ್ತಿಗೆ ಎಸ್‌ಸಿಬಿಎ ಪತ್ರ ಬರೆದಿತ್ತು.
ಕೊರೊನಾ ಎರಡನೇ ಅಲೆಯು ಮೇ ತಿಂಗಳ ಮಧ್ಯಭಾಗದಲ್ಲಿ ಉತ್ತುಂಗಕ್ಕೆ ತಲುಪಲಿದ್ದು, ಈ ಕಾರಣಕ್ಕಾಗಿ ದೆಹಲಿ ಸರ್ಕಾರವು ಮೇ 1ರವರೆಗೆ ಲಾಕ್‌ಡೌನ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಬೇಸಿಗೆ ರಜಾ ಕಾಲವನ್ನು ಒಂದು ವಾರ ಮುಂಚಿತವಾಗಿ ಆರಂಭಿಸುವಂತೆ ಸಲಹೆ ನೀಡಲಾಗಿದೆ.
ನೂತನ ಸಮುಚ್ಚಯದಲ್ಲಿನ ಖಾಲಿ ಇರುವ ವಕೀಲರ ಚೇಂಬರ್ ಅನ್ನು ಕೋವಿಡ್ ಕೇರ್ ಘಟಕವನ್ನಾಗಿ ಪರಿವರ್ತಿಸಲು ಅನುಮತಿಸಿದರೆ ಇದೇ ಕೋರಿಕೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಎಸ್‌ಸಿಬಿಎ ಪತ್ರದಲ್ಲಿ ತಿಳಿಸಲಾಗಿದೆ. ಸದರಿ ವ್ಯವಸ್ಥೆಯನ್ನು ಎಸ್‌ಸಿಬಿಎ ಸದಸ್ಯರುಗಳು, ಅವರ ಕುಟುಂಬ, ರಿಜಿಸ್ಟ್ರಿ ಮತ್ತು ಸುಪ್ರೀಂ ಕೋರ್ಟ್ ಸಿಬ್ಬಂದಿಯ ಕುಟುಂಬದ ಸದಸ್ಯರಿಗೆ ಬಳಸಲು ಅನುವು ಮಾಡಿಕೊಡಲಾಗುವುದು ಎಂದು ಹೇಳಲಾಗಿತ್ತು.