Supreme Court 
ಸುದ್ದಿಗಳು

ಮಾರ್ಚ್ 15ರಿಂದ ಸೀಮಿತ ರೂಪದಲ್ಲಿ ಹೈಬ್ರಿಡ್ ಭೌತಿಕ ವಿಚಾರಣೆ ಆರಂಭಿಸಲಿರುವ ಸುಪ್ರೀಂಕೋರ್ಟ್

ಭೌತಿಕ ವಿಚಾರಣೆಗೆ ಪಟ್ಟಿ ಮಾಡಲಾದ ಪ್ರಕರಣದಲ್ಲಿ ವಾದ ಮಂಡಿಸಲು ಕಕ್ಷೀದಾರರು ಭೌತಿಕ ಅಥವಾ ವೀಡಿಯೊ ಕಲಾಪದ ಮೂಲಕ ಕಾಣಿಸಿಕೊಳ್ಳುವ ಆಯ್ಕೆಯನ್ನು ಹೈಬ್ರಿಡ್ ವಿಧಾನದಲ್ಲಿ ನೀಡಲಾಗಿರುತ್ತದೆ.

Bar & Bench

ಮಾರ್ಚ್ 15ರಿಂದ ಸುಪ್ರೀಂಕೋರ್ಟ್‌ ಸೀಮಿತ ರೂಪದಲ್ಲಿ ಹೈಬ್ರಿಡ್‌ ಭೌತಿಕ ವಿಚಾರಣೆ ಆರಂಭಿಸಲಿದೆ. ಮಂಗಳವಾರ, ಬುಧವಾರ ಮತ್ತು ಗುರುವಾರಗಳಂದು ಅಂತಿಮ/ ನಿಯಮಿತ ವಿಚಾರಣೆಗೆ ಪಟ್ಟಿ ಮಾಡಲಾದ ಪ್ರಕರಣಗಳನ್ನು ಈ ವಿಧಾನದ ಮೂಲಕ ಆಲಿಸಲಾಗುತ್ತದೆ. ಭೌತಿಕ ವಿಚಾರಣೆಗೆ ಪಟ್ಟಿ ಮಾಡಲಾದ ಪ್ರಕರಣದಲ್ಲಿ ವಾದ ಮಂಡಿಸಲು ಕಕ್ಷೀದಾರರು ಭೌತಿಕ ಅಥವಾ ವೀಡಿಯೊ ಕಲಾಪದ ಮೂಲಕ ಕಾಣಿಸಿಕೊಳ್ಳುವ ಆಯ್ಕೆಯನ್ನು ಹೈಬ್ರಿಡ್‌ ವಿಧಾನದಲ್ಲಿ ನೀಡಲಾಗಿರುತ್ತದೆ.

ಪ್ರಾಯೋಗಿಕ ಆಧಾರದ ಮೇಲೆ ಪರೀಕ್ಷಾರ್ಥ ಯೋಜನೆಯಂತೆ ಹೈಬ್ರಿಡ್‌ ಭೌತಿಕ ವಿಧಾನ ಜಾರಿಗೆ ಬರಲಿದೆ. ವಿಚಾರಣೆಯಲ್ಲಿ ಪಾಲ್ಗೊಳ್ಳುವ ಪಕ್ಷಗಳು ಮತ್ತು ಕೊಠಡಿಗಳ ಸಾಮರ್ಥ್ಯ ಆಧರಿಸಿ ಅಂತಿಮ/ ನಿಯಮಿತ ವಿಚಾರಣೆಗೆ ಪಟ್ಟಿ ಮಾಡಲಾದ ಪ್ರಕರಣಗಳನ್ನು ಮಂಗಳವಾರ, ಬುಧವಾರ ಮತ್ತು ಗುರುವಾರ ವಿಚಾರಣೆ ನಡೆಸಲಾಗುತ್ತದೆ. ಸೋಮವಾರ ಮತ್ತು ಶುಕ್ರವಾರದಂದು ಪಟ್ಟಿ ಮಾಡಲಾದ ಪ್ರಕರಣಗಳು ಸೇರಿದಂತೆ ಉಳಿದ ಎಲ್ಲಾ ಪ್ರಕರಣಗಳನ್ನು ವೀಡಿಯೊ / ಟೆಲಿ-ಕಾನ್ಫರೆನ್ಸಿಂಗ್ ವಿಧಾನದಲ್ಲಿ ವಿಚಾರಣೆ ನಡೆಸಲಾಗುವುದು” ಎಂದು ಶುಕ್ರವಾರ ಬಿಡುಗಡೆ ಮಾಡಲಾಗಿರುವ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್‌ಒಪಿ) ತಿಳಿಸಿದೆ.

ಭೌತಿಕ ವಿಚಾರಣೆಗೆ ಪಟ್ಟಿ ಮಾಡಲಾದ ಪ್ರಕರಣದಲ್ಲಿ ವಾದ ಮಂಡಿಸಲು ಕಕ್ಷೀದಾರರು ದೈಹಿಕ ಅಥವಾ ವೀಡಿಯೊ ಕಲಾಪದ ಮೂಲಕ ಕಾಣಿಸಿಕೊಳ್ಳುವ ಆಯ್ಕೆಯನ್ನು ಹೈಬ್ರಿಡ್‌ ವಿಧಾನದಲ್ಲಿ ನೀಡಲಾಗಿರುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಭೌತಿಕ ನ್ಯಾಯಾಲಯದಲ್ಲಿ ಪ್ರಕರಣವೊಂದರ ವಿಚಾರಣೆ ನಡೆದಾಗ ಒಂದು ಪಕ್ಷ ಭೌತಿಕವಾಗಿ ಕಾಣಿಸಿಕೊಳ್ಳಬಹುದು ಮತ್ತು ಇನ್ನೊಂದು ಪಕ್ಷ ವರ್ಚುವಲ್‌ ವಿಧಾನದಲ್ಲಿ ಹಾಜರಾಗಬಹುದು.

ಹೈಬ್ರಿಡ್ ವಿಚಾರಣೆಗೆ ಪಟ್ಟಿ ಮಾಡಲು ನ್ಯಾಯಾಲಯ ನಿರ್ದೇಶಿಸಿದ ಪ್ರಕರಣದಲ್ಲಿ ಯಾವುದೇ ಪಕ್ಷಗಳು ಭೌತಿಕ ವಿಚಾರಣೆ ಆಯ್ದುಕೊಳ್ಳದಿದ್ದರೆ, ವಿಡಿಯೋ / ಟೆಲಿ-ಕಾನ್ಫರೆನ್ಸಿಂಗ್ ಮೂಲಕ ಪ್ರಕರಣದ ವಿಚಾರಣೆ ನಡೆಸಲಾಗುತ್ತದೆ ಎಂದು ಎಸ್‌ಒಪಿ ಸ್ಪಷ್ಟಪಡಿಸಿದೆ.

ಹೈಬ್ರಿಡ್‌ ವಿಚಾರಣೆಗೆ ಪಟ್ಟಿ ಮಾಡಲಾದ ಯಾವುದೇ ಪ್ರಕರಣದಲ್ಲಿ ಒಂದು ಪಕ್ಷದ ಪರವಾಗಿ ಹಾಜರಾಗುವ ಎಲ್ಲಾ ವಕೀಲರು ಭೌತಿಕವಾಗಿ ಇಲ್ಲವೇ ವಿಡಿಯೋ / ಟೆಲಿ-ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಬಹುದು. ಭೌತಿಕವಾಗಿ ಇಲ್ಲವೇ ವಿಡಿಯೋ / ಟೆಲಿ-ಕಾನ್ಫರೆನ್ಸಿಂಗ್ ಮೂಲಕ ಹಾಜರಾಗುವ ಬಗ್ಗೆ ಅಡ್ವೊಕೇಟ್‌ ಆನ್‌ ರೆಕಾರ್ಡ್‌ ಅವರು ತಮ್ಮ ಆದ್ಯತೆಯನ್ನು 24 ಗಂಟೆಗಳ ಮೊದಲು ಅಥವಾ ಮಧ್ಯಾಹ್ನ / 1 ಗಂಟೆ ಒಳಗಾಗಿ ತಿಳಿಸಬಹುದು. ಯಾವುದೇ ವಿಧಾನವನ್ನು ವಕೀಲರು ಆಯ್ದುಕೊಳ್ಳದಿದ್ದರೆ ಆಗ ವಿಡಿಯೋ / ಟೆಲಿ ಕಾನ್ಫರೆನ್ಸಿಂಗ್ ವಿಧಾನದ ಮೂಲಕ ಹಾಜರಾಗಲು ಅವರು ಬಯಸುತ್ತಾರೆ ಎಂದು ಭಾವಿಸಲಾಗುವುದು” ಎಂದು ಎಸ್‌ಒಪಿಯಲ್ಲಿ ತಿಳಿಸಲಾಗಿದೆ.