SIR of electoral rolls  
ಸುದ್ದಿಗಳು

'ಎಸ್ಐಆರ್ ಮೂಲಕ ಇಸಿಐ ಪೌರತ್ವ ನಿರ್ಧರಿಸಬಹುದೇ?' ಪರಿಶೀಲಿಸಲಿದೆ ಸುಪ್ರೀಂ ಕೋರ್ಟ್

ಚುನಾವಣಾ ಆಯೋಗ ಮೊದಲ ಹಂತದಲ್ಲಿ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಮತದಾರರ ಪಟ್ಟಿಯ ಆಮೂಲಾಗ್ರ ಪರಿಷ್ಕರಣೆ ಘೋಷಿಸಿದ್ದು ದೇಶದೆಲ್ಲೆಡೆ ಈ ಪ್ರಕ್ರಿಯೆ ನಡೆಸಲು ಉದ್ದೇಶಿಸಿದೆ.

Bar & Bench

ಮತದಾರರ ಪಟ್ಟಿಯ ಆಮೂಲಾಗ್ರ ಪರಿಷ್ಕ್ರಣೆ ನಡೆಸುವ ಮೂಲಕ ಮತದಾರರ ಪೌರತ್ವವನ್ನು ಭಾರತೀಯ ಚುನಾವಣಾ ಆಯೋಗ ನಿರ್ಧರಿಸಬಹುದೇ ಎಂಬುದನ್ನು ಸುಪ್ರೀಂ ಕೋರ್ಟ್‌ ಪರಿಶೀಲಿಸಲಿದೆ. 

ಬಿಹಾರದಲ್ಲಿ ಇತ್ತೀಚೆಗೆ ಕೈಗೊಂಡ ಎಸ್‌ಐಆರ್ ಅನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಈ ವಿಚಾರ ತಿಳಿಸಿತು.

ಎಸ್‌ಐಆರ್‌ ಮೂಲಕ ಪೌರತ್ವ ನಿರ್ಧರಿಸದಂತೆ ಇಸಿಐಗೆ ತಡೆ ನೀಡಬೇಕು ಎಂದು ಅರ್ಜಿದಾರರಲ್ಲಿ ಒಂದಾದ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್‌) ಕೋರಿತು. ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಮತದಾರರು ನೋಂದಣಿಯಾಗಿ ಉಳಿಯದಂತೆ ನೋಡಿಕೊಳ್ಳಲು ಡಿ-ಡೂಪ್ಲಿಕೇಶನ್ ಸಾಫ್ಟ್‌ವೇರ್‌ ಬಳಸುವಂತೆಯೂ ಅದು ಸಲಹೆ ನೀಡಿತು. ಇದು ಒಳ್ಳೆಯ ಸಲಹೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಮತದಾರರ ಪರಿಶೀಲನೆಗಾಗಿ ಬೂತ್ ಮಟ್ಟದಲ್ಲಿ ಗ್ರಾಮ ಸಭೆಯನ್ನು ನಡೆಸುವುದನ್ನು ಕಡ್ಡಾಯಗೊಳಿಸುವ ತಾನೇ ನೀಡಿದ್ದ ಕೈಪಿಡಿಯ ಮಾರ್ಗಸೂಚಿ ಅನುಸರಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಸಹ ಕೋರಲಾಯಿತು.

ಎಣಿಕೆ ನಮೂನೆಗಳನ್ನು ಸಲ್ಲಿಸುವ ಎಲ್ಲಾ ಮತದಾರರಿಗೆ ಸ್ವೀಕೃತಿ ಚೀಟಿ ನೀಡಬೇಕು ಎಂದು ಅರ್ಜಿದಾರರ ಪರವಾಗಿ ವಕೀಲ ಪ್ರಶಾಂತ್‌ ಭೂಷಣ್ ವಾದಿಸಿದರು.ಚುನಾವಣಾ ಆಯೋಗವು 2003 ರ ಮತದಾರರ ಪಟ್ಟಿಯನ್ನು ಲಭ್ಯವಾಗುವಂತೆ ಮಾಡಬೇಕು ಮತ್ತು ಅದು ತಿದ್ದುಪಡಿಗಳಿಗೆ ಆಧಾರವಾಗಿರಬೇಕು ಎಂದು ಅವರು ಹೇಳಿದರು.

ಭೂಷಣ್‌ ಅವರ ಪ್ರಸ್ತಾಪವೊಂದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ ಮತದಾರರ ಪಟ್ಟಿಯನ್ನು ಎಲ್ಲಿ ಬೇಕಾದರೂ ಹುಡುಕಬಹುದಾದ ರೂಪದಲ್ಲಿ ಇಟ್ಟರೆ ಗೌಪ್ಯತೆ ಅಥವಾ ಸುರಕ್ಷತಾ ಸಮಸ್ಯೆಗಳು ಉಂಟಾಗುತ್ತವೆಯೇ ಎಂದು ಪ್ರಶ್ನಿಸಿತು.

ನಂತರ ಅರ್ಜಿಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ಇಸಿಐಗೆ ನ್ಯಾಯಾಲಯ ಸೂಚಿಸಿತು. ಬಿಹಾರ ಎಸ್‌ಐಆರ್ ಪ್ರಕರಣದ ವಿಚಾರಣೆ ನಡೆಸಿದ ಪೀಠ, ಇಸಿಐ ಉತ್ತಮ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಾದರೂ ವಿವಿಧ ರಾಜ್ಯಗಳ ಸ್ಥಳೀಯ ಅಂಶಗಳನ್ನು ಸಹ ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿತು. ನವೆಂಬರ್ 26 ರಂದು ಮುಖ್ಯ ಪ್ರಕರಣದ ಜೊತೆಗೆ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಲಿದೆ. ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು ಕೂಡ ವಾದ ಮಂಡಿಸಿದರು.