ಖಲಿಸ್ತಾನಿ ಪ್ರತ್ಯೇಕತಾವಾದಿ ಮತ್ತು ಅಮೆರಿಕ-ಕೆನಡಾದ ಪ್ರಜೆ ಗುರುಪತ್ವಂತ್ ಸಿಂಗ್ ಪನ್ನುನ್ ಅವರ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ ಪ್ರಸ್ತುತ ಜೆಕ್ ಗಣರಾಜ್ಯದಲ್ಲಿ ಬಂಧನದಲ್ಲಿರುವ ಭಾರತೀಯ ಪ್ರಜೆ ನಿಖಿಲ್ ಗುಪ್ತಾ ಅವರ ಕುಟುಂಬವು ಸುಪ್ರೀಂ ಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದೆ.
ಗುಪ್ತಾ ಅವರನ್ನು ಬಿಡುಗಡೆ ಮಾಡಲು ಭಾರತ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್ ವಿ ಭಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠ ಆಲಿಸಿತು. ಅರ್ಜಿದಾರರು ಗುಪ್ತಾ ಬಂಧನದಲ್ಲಿರುವ ಜೆಕ್ ಗಣರಾಜ್ಯದ ನ್ಯಾಯಾಲಯವನ್ನು ಸಂಪರ್ಕಿಸಬೇಕಾಗುತ್ತದೆ ಎಂದು ಮೇಲ್ನೋಟಕ್ಕೆ ಪೀಠ ಅಭಿಪ್ರಾಯ ವ್ಯಕ್ತಪಡಿಸಿತು.
"ಭಾರತದ ಹೊರಗಿರುವ ನ್ಯಾಯಾಲಯದ ಮುಂದೆ ನೀವು ಹೋಗಬೇಕು. ಅಲ್ಲಿಗೆ ತೆರಳಿ. ನಾವು ಇಲ್ಲಿ ತೀರ್ಪು ನೀಡಲು ಆಗದು. ಬಂಧಿತ ವ್ಯಕ್ತಿ ಅಫಿಡವಿಟ್ ನೀಡಿಲ್ಲ. ಯಾವುದೇ ಕಾನೂನು ಉಲ್ಲಂಘನೆಯಾಗಿದ್ದರೆ ನೀವು ಅಲ್ಲಿನ ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ" ಎಂದು ನ್ಯಾಯಾಲಯ ಹೇಳಿದೆ.
ಯಾರು ಅರ್ಜಿ ಸಲ್ಲಿಸಿದ್ದಾರೆ ಎಂದು ನ್ಯಾಯಾಲಯ ಕೇಳಿತು. ಆಗ ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಆರ್ಯಮಾ ಸುಂದರಂ ಅವರು ಗುಪ್ತಾ ಅವರ ಕುಟುಂಬ ಸದಸ್ಯರು ಈ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿದರು.
"ರಜೆಯ ನಂತರ ಜನವರಿ 4 ರಂದು ಅರ್ಜಿಯನ್ನು ನಿರ್ಧರಿಸುತ್ತೇವೆ. ಅರ್ಜಿಯ ಪ್ರತಿಯನ್ನು ಕೇಂದ್ರದ ಸಂಸ್ಥೆಗೆ ನೀಡಿ" ಎಂದು ನ್ಯಾಯಾಲಯ ಹೇಳಿದೆ.
ವ್ಯವಹಾರ ಪರಿಶೋಧನೆ ಪ್ರವಾಸದಲ್ಲಿ ಜೆಕ್ ಗಣರಾಜ್ಯದಲ್ಲಿದ್ದಾಗ ಜೂನ್ 30ರಂದು ಪ್ರೇಗ್ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ತಮ್ಮನ್ನು ಬಂಧಿಸಲಾಗಿದೆ ಎಂದು ಗುಪ್ತಾ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.