ಸುದ್ದಿಗಳು

ದಸರಾ ರಜೆ ಬಳಿಕ ಸುಪ್ರೀಂ ಕೋರ್ಟ್‌ ಬುಧವಾರದಿಂದ ಪುನಾರಂಭ; ಲಖೀಂಪುರ್‌ ಖೇರಿ ಹಾಗೂ ಸಿಬಿಎಸ್‌ಸಿ ಪ್ರಕರಣಗಳ ವಿಚಾರಣೆ

ಕೋವಿಡ್‌ ಸಾಂಕ್ರಾಮಿಕದ ಕಾರಣದಿಂದ 2020ರ ಮಾರ್ಚ್‌ನಿಂದ ರದ್ದಾಗಿದ್ದ ಭೌತಿಕ ವಿಚಾರಣೆ ಗುರುವಾರದಿಂದ ಕಡ್ಡಾಯವಾಗಿ ಆರಂಭ.

Bar & Bench

ದಸರಾ ಹಾಗೂ ಈದ್‌ ಮಿಲಾದ್‌ ರಜೆಯ ನಂತರ ಸುಪ್ರೀಂ ಕೋರ್ಟ್‌ ಬುಧವಾರದಿಂದ ಪುನಾರಂಭಗೊಳ್ಳಲಿದೆ. ಇದರೊಟ್ಟಿಗೆ ಪ್ರಮುಖ ಪ್ರಕರಣಗಳ ವಿಚಾರಣೆಯೂ ನಾಳೆಯಿಂದಲೇ (ಬುಧವಾರ) ಆರಂಭವಾಗಲಿದೆ.

ಕೋವಿಡ್ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಮಾರ್ಚ್ 2020ರಿಂದ ಭೌತಿಕ ವಿಚಾರಣೆಯನ್ನು ಸ್ಥಗಿತಗೊಳಿಸಿ ವರ್ಚುವಲ್‌ ವಿಚಾರಣೆಗೆ ಬದಲಾಗಿದ್ದ ಸುಪ್ರೀಂ ಕೋರ್ಟ್‌ ಕಲಾಪಗಳು ಗುರುವಾರದಿಂದ ಭೌತಿಕ ವಿಚಾರಣೆಗೆ ಹೊರಳಲಿರುವುದು ಮತ್ತೊಂದು ವಿಶೇಷ.

ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಪಟ್ಟಿಯಾಗಿರುವ ಪ್ರಮುಖ ಪ್ರಕರಣಗಳ ವಿವರ ಹೀಗಿದೆ:

ಲಖೀಂಪುರ್‌ ಖೇರಿ ಹಿಂಸಾಚಾರ ಪ್ರಕರಣ:

ಲಖೀಂಪುರ್‌ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರು ಸೇರಿದಂತೆ 8 ಮಂದಿಯ ಮೇಲೆ ವಾಹನ ಚಲಾಯಿಸಿ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಅರ್ಜಿಯ ವಿಚಾರಣೆ ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ. ಕೇಂದ್ರ ಸಚಿವ ಅಜಯ್‌ ಮಿಶ್ರಾ ಥೇಣಿ ಪುತ್ರ ಅಶೀಶ್‌ ಮಿಶ್ರಾ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ. ಅವರಿಗೆ ಸೇರಿದ ವಾಹನ ಕೃತ್ಯದಲ್ಲಿ ಬಳಕೆಯಾಗಿದೆ.

ಪ್ರತ್ಯಕ್ಷದರ್ಶಿಗಳು ವಾಹನವನ್ನು ಖುದ್ದು ಅಶೀಶ್‌ ಮಿಶ್ರಾ ಚಲಾಯಿಸಿರುವುದಾಗಿ ಹೇಳಿದ್ದಾರೆ. ಪ್ರಕರಣದ ಸಂಬಂಧ ಇದಾಗಲೇ ಅಶೀಶ್‌ ಮಿಶ್ರಾರರನ್ನು ಉತ್ತರ ಪ್ರದೇಶ ಪೊಲೀಸರು ಬಂದಿಸಿದ್ದು ಅವರಿಗೆ ಜಾಮೀನನ್ನು ನಿರಾಕರಿಸಲಾಗಿದೆ.

ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಕೋರಿ ಇಬ್ಬರು ವಕೀಲರು ಸಿಜೆಐ ಅವರಿಗೆ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಅರ್ಜಿ ದಾಖಲಿಸಿಕೊಂಡಿದೆ. ಸಿಜೆಐ ಎನ್‌ ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್‌ ಹಾಗೂ ಹಿಮಾ ಕೋಹ್ಲಿ ಅವರಿರುವ ತ್ರಿಸದಸ್ಯ ಪೀಠವು ಪ್ರಕರಣದ ವಿಚಾರಣೆ ನಡೆಸಿದೆ. ಅಕ್ಟೋಬರ್‌ 8ರಂದು ನಡೆದಿದ್ದ ವಿಚಾರಣೆ ವೇಳೆ ಹಿರಿಯ ವಕೀಲ ಹರೀಶ್‌ ಸಾಳ್ವೆ ಉತ್ತರ ಪ್ರದೇಶ ಸರ್ಕಾರವನ್ನು ಪ್ರತಿನಿದಿಸಿದ್ದರು. ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ತನಿಖೆ ಸಾಗುತ್ತಿರುವ ಹಾದಿಯ ಬಗ್ಗೆ ತನ್ನ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿತ್ತು.

ಉತ್ತರಪ್ರದೇಶ ಸರ್ಕಾರವು “ಬರಿದೇ ಬಾಯಿಮಾತಿನಲ್ಲಿಯೇ ಕ್ರಿಯೆ ತೋರುತ್ತಿದೆ. ಹೀಗಾದರೆ, ನಾವು ಏನು ಸಂದೇಶವನ್ನು ಕಳುಹಿಸುತ್ತೇವೆ” ಎಂದು ಸಿಜೆಐ ಕಟುವಾಗಿ ಪ್ರಶ್ನಿಸಿದ್ದರು. “ಎಲ್ಲ ಆರೋಪಿಗಳ ವಿರುದ್ಧವೂ ಕಾನೂನು ತನ್ನ ಕ್ರಮವನ್ನು ಕೈಗೊಳ್ಳಬೇಕು” ಎಂದು ನ್ಯಾ. ಕಾಂತ್‌ ಹೇಳಿದ್ದರು.

ಸಿಬಿಎಸ್‌ಸಿ ವಿದ್ಯಾರ್ಥಿಗಳ ದೂರಿನ ಪ್ರಕರಣ

ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸಿಬಿಎಸ್‌ಸಿ ವಿದ್ಯಾರ್ಥಿಗಳ ಮೌಲ್ಯಮಾಪನಕ್ಕೆ ರೂಪಿಸಿದ್ದ ನಿಯಮಾವಳಿಗಳನ್ನು ಕೆಲ ಸಿಬಿಎಸ್‌ಸಿ ಶಾಲೆಗಳು ಅನುಸರಿಸಿಲ್ಲ. ಪರಿಣಾಮವಾಗಿ ಸಾಕಷ್ಟು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ದೂರಿ ಸಿಬಿಎಸ್ಸಿ ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾ. ಎ ಎಂ ಖಾನ್ವಿಲ್ಕರ್‌ ಅವರ ನೇತೃತ್ವದ ಪೀಠವು ನಡೆಸಲಿದೆ.

ಅಂಕ ನೀಡಿಕೆಗೆ ರೂಪಿಸಲಾಗಿದ್ದ 30:30:40ರ ಸೂತ್ರವನ್ನು ಅನೇಕ ಶಾಲೆಗಳಲ್ಲಿ ಅನುಸರಿಸಲಾಗಿಲ್ಲ. ಪ್ರತಿಭಾವಂತ ವಿದ್ಯಾರ್ಥಿಗಳ ಅಂಕಗಳನ್ನೂ ಸಹ ಮನಸೋಇಚ್ಛೆ ಕಡಿತಗೊಳಿಸಲಾಗಿದೆ. ಅಲ್ಲದೆ, ಈ ಸಂಬಂಧ ಉದ್ಭವಿಸುವ ಸಮಸ್ಯೆಗಳಿಗೆ ಸರ್ಕಾರವು ರೂಪಿಸಿರುವ ಪರಿಹಾರ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಲು ಸಹ ಕೆಲ ಶಾಲೆಗಳ ವಿಫಲವಾಗಿವೆ ಎನ್ನುವ ಪ್ರಮುಖ ಆರೋಪಗಳನ್ನು ಅರ್ಜಿದಾರ ವಿದ್ಯಾರ್ಥಿಗಳು ಮಾಡಿದ್ದಾರೆ.

ಉಳಿದಂತೆ, ಮುಂದಿನ ದಿನಗಳಲ್ಲಿ ಪೆಗಸಸ್ ಹಗರಣದ ಕುರಿತಾದ ವಿಚಾರಣೆಯೂ ಆಸಕ್ತಿ ಕೆರಳಿಸಿದೆ.