UGC and Supreme Court
UGC and Supreme Court 
ಸುದ್ದಿಗಳು

ಅಂತಾರಾಜ್ಯ ದೂರಶಿಕ್ಷಣಕ್ಕೆ ನಿಷೇಧ: ವಿನಾಯಿತಿ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಯುಜಿಸಿ ಮೊರೆ

Bar & Bench

ಅಂತಾರಾಜ್ಯ ದೂರಶಿಕ್ಷಣ ಕೋರ್ಸ್‌ಗಳನ್ನು ನಿಷೇಧಿಸುವ ನಿಯಮಾವಳಿಯಿಂದ ಈಗಾಗಲೇ ಪದವಿ ಪಡೆದಿರುವ ಅಥವಾ ದಾಖಲಾತಿ ಪಡೆದಿರುವ ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡುವ ಮದ್ರಾಸ್ ಹೈಕೋರ್ಟ್ ತೀರ್ಪಿನ ವಿರುದ್ಧ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಮಾಡಿದ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಬುಧವಾರ ನೋಟಿಸ್ ನೀಡಿದೆ [ಯುಜಿಸಿ ಮತ್ತು ಅಣ್ಣಾಮಲೈ ವಿಶ್ವವಿದ್ಯಾಲಯ ಇನ್ನಿತರರ ನಡುವಣ ಪ್ರಕರಣ].

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ (ಇಗ್ನೋ) ಪ್ರತಿಕ್ರಿಯೆ ಕೇಳಿದೆ.

ಜೊತೆಗೆ ತಮಿಳುನಾಡಿನ ಖಾಸಗಿ ವಿಶ್ವವಿದ್ಯಾಲಯಗಳಿಗೂ ನೋಟಿಸ್ ಜಾರಿ ಮಾಡಲಾಗಿದೆ. ಆದರೆ, ಪದವೀಧರರು ಮತ್ತು ಈಗಾಗಲೇ ಇವುಗಳಿಗೆ ದಾಖಲಾದ ವಿದ್ಯಾರ್ಥಿಗಳು ಯಾವ ರೀತಿಯ ಕೋರ್ಸ್‌ಗಳನ್ನು ವ್ಯಾಸಂಗ ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳುವ ಸೀಮಿತ ಅಂಶಕ್ಕೆ ಮಾತ್ರ ಇದು ಸಂಬಂಧಿಸಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಯುಜಿಸಿಯನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಎಂಜಿನಿಯರಿಂಗ್‌ನಂತಹ ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯಿಂದಲೂ ದೂರಶಿಕ್ಷಣದ ಮೂಲಕ ಕಲಿಸಲಾಗುವುದಿಲ್ಲ ಎಂದರು.

ವಿಶ್ವವಿದ್ಯಾನಿಲಯಗಳು ದೂರಶಿಕ್ಷಣ ಕೋರ್ಸ್‌ಗಳನ್ನು ರಾಜ್ಯದೊಳಗೆ ಮಾತ್ರ ಒದಗಿಸಬೇಕು ಎಂಬ ಯುಜಿಸಿ ನಿಯಮವನ್ನು ಜನವರಿಯಲ್ಲಿ ಹೈಕೋರ್ಟ್ ಎತ್ತಿ ಹಿಡಿದಿತ್ತು, ಆದರೆ ಈಗಾಗಲೇ ದಾಖಲಾತಿ ಪಡೆದ ವಿದ್ಯಾರ್ಥಿಗಳು ಮತ್ತು ಪದವಿ ಪಡೆದವರಿಗೆ ಈ ನಿಯಮದಿಂದ ವಿನಾಯಿತಿ ನೀಡಿತ್ತು.