Supreme Court
Supreme Court 
ಸುದ್ದಿಗಳು

ಕಡಪ ಸಂಸದ ಅವಿನಾಶ್ ರೆಡ್ಡಿ ಜಾಮೀನು ಅರ್ಜಿ ನಿರ್ಧರಿಸಲು ತೆಲಂಗಾಣ ಹೈಕೋರ್ಟ್ ವಿಫಲ: ಸುಪ್ರೀಂ ಅಸಮಾಧಾನ

Bar & Bench

ಆಂಧ್ರಪ್ರದೇಶದ ಕಡಪ ಕ್ಷೇತ್ರದ ಮಾಜಿ ಸಂಸದ ಹಾಗೂ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ ಅವರ ಚಿಕ್ಕಪ್ಪ ವಿವೇಕಾನಂದ ರೆಡ್ಡಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಪ ಸಂಸದ ವೈ ಎಸ್ ಅವಿನಾಶ್ ರೆಡ್ಡಿ ಅವರ ನಿರೀಕ್ಷಣಾ ಜಾಮೀನು ಅರ್ಜಿ ನಿರ್ಧರಿಸುವಂತೆ ತೆಲಂಗಾಣ ಹೈಕೋರ್ಟ್‌ನ ರಜಾಕಾಲೀನ ಪೀಠಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.

ಸುಪ್ರೀಂ ಕೋರ್ಟ್‌ ಈ ಹಿಂದೆ ನೀಡಿದ್ದ ನಿರ್ದೇಶನಗಳ ಹೊರತಾಗಿಯೂ ಹೈಕೋರ್ಟ್‌ ಅರ್ಜಿ ಸಂಬಂಧ ತೀರ್ಪು ನೀಡಲು ವಿಫಲವಾಗಿರುವುದಕ್ಕೆ ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ಪಿ ಎಸ್ ನರಸಿಂಹ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿತು. ಅಂತೆಯೇ ಸಿಬಿಐ ಎದುರು ಹಾಜರಾಗದ ಅವಿನಾಶ್‌ ರೆಡ್ಡಿ ನಡೆ ಬಗ್ಗೆಯೂ ಸರ್ವೋಚ್ಚ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.

“ನಮ್ಮ ಆದೇಶದ ಬಳಿಕವೂ ಹೈಕೋರ್ಟ್‌ ತೀರ್ಪು ನೀಡದಿರುವುದು ನಮಗೆ ಸಂತೋಷ ತಂದಿಲ್ಲ. ನಿರೀಕ್ಷಣಾ ಜಾಮೀನು ನೀಡಲು ಎಷ್ಟು ಸಮಯ ಬೇಕಾಗುತ್ತದೆ? ಇನ್ನೊಂದು ವಿಷಯ ಎಂದರೆ ಸಿಬಿಐ ನೋಟಿಸ್‌ ನೀಡಿದ್ದರೂ ಅರ್ಜಿದಾರ ಅವಿನಾಶ್‌ ರೆಡ್ಡಿ ಹಾಜರಾಗದೇ ಇರುವುದರಿಂದ ನಮಗೆ ಸಂತೋಷವಾಗದು” ಎಂದು ಹಿರಿಯ ವಕೀಲ ವಿ ಗಿರಿ ಅವರನ್ನುದ್ದೇಶಿಸಿ ನ್ಯಾ ನರಸಿಂಹ ಅವರು ಹೇಳಿದರು.

ತೆಲಂಗಾಣ ಹೈಕೋರ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಳಂಬ ಮಾಡುತ್ತಿರುವುದನ್ನು ಪ್ರಶ್ನಿಸಿ ಹತ್ಯೆಗೀಡಾದ ಕಡಪ ಮಾಜಿ ಸಂಸದ ವೈ ಎಸ್ ವಿವೇಕಾನಂದ ರೆಡ್ಡಿ ಅವರ ಪುತ್ರಿ ಸುನೀತಾ ರೆಡ್ಡಿ ಅವರು ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರ ಸೋದರ ಸಂಬಂಧಿ ವೈ ಎಸ್ ಅವಿನಾಶ್ ರೆಡ್ಡಿ ಅವರ ಜಾಮೀನು ಅರ್ಜಿ ಆಲಿಸಲು ಹೈಕೋರ್ಟ್‌ನ ರಜಾಕಾಲೀನ ಪೀಠಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆಯೂ ನಡೆಯುತ್ತಿದೆ.

ಕೊಲೆ ಆರೋಪಿ ಅವಿನಾಶ್ ರೆಡ್ಡಿಯ ವಿಚಾರಣೆ ವೇಳೆ ಸಿಬಿಐಗೆ ವಿವಿಧ ನಿರ್ಬಂಧ ಹೇರಿದ್ದ ತೆಲಂಗಾಣ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಏಪ್ರಿಲ್‌ನಲ್ಲಿ ರದ್ದುಗೊಳಿಸಿತ್ತು.

ಮಂಗಳವಾರ ಸುನೀತಾ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ, ಆರೋಪಿಗಳು ವಿಚಾರಣೆಗೆ ಹಾಜರಾಗದೆ ಕಾನೂನು ಸುವ್ಯವಸ್ಥೆ ಹದಗೆಡಿಸಿದ್ದಾರೆ ಎಂದು ದೂರಿದರು.

ಆದರೆ ತಮ್ಮ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮುಂದುವರಿಸುವ ಹಕ್ಕು ಅವಿನಾಶ್‌ ರೆಡ್ಡಿ ಅವರಿಗೆ ಇದೆ ಎಂದು ನ್ಯಾಯಮೂರ್ತಿ ನರಸಿಂಹ ಹೇಳಿದರು. ಇಷ್ಟಾದರೂ ಸಿಬಿಐ ಸಮನ್ಸ್ ವಿರುದ್ಧ ಅವಿನಾಶ್ ರೆಡ್ಡಿಗೆ ಯಾವುದೇ ಮಧ್ಯಂತರ ರಕ್ಷಣೆ ನೀಡಲು ಪೀಠ ನಿರಾಕರಿಸಿತು.