ಸುಪ್ರೀಂ ಕೋರ್ಟ್ ಶುಕ್ರವಾರ ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ಕಾಯಿದೆ - 2020ರ (ಎಫ್‌ಆರ್‌ಸಿಎ) ಸಿಂಧುತ್ವವನ್ನು ಎತ್ತಿ ಹಿಡಿದಿದೆ. ಕಾಯಿದೆಯು ಸಂಘಸಂಸ್ಥೆಗಳ ವಿದೇಶಿ ಕೊಡುಗೆಯ ನಿರ್ವಹಣೆಯ ಮೇಲೆ ನಿರ್ಬಂಧಗಳನ್ನು ವಿಧಿಸುತ್ತದೆ (ನೀಲ್ ಹಾರ್ಪರ್ ವರ್ಸಸ್ ಭಾರತ ಸರ್ಕಾರ).
ದೇಶದಲ್ಲಿರುವ ಸಂಸ್ಥೆಗಳು ವಿದೇಶಿ ದೇಣಿಗೆಯನ್ನು ಬಳಸುತ್ತಿರುವುದಕ್ಕೆ ನಿರ್ಬಂಧ ವಿಧಿಸಿರುವ ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಕಾಯಿದೆ 2020 (ಎಫ್‌ಸಿಆರ್‌ಎ) ಅನ್ನು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಮತ್ತು ಸಿ ಟಿ ರವಿಕುಮಾರ್ ನೇತೃತ್ವದ ತ್ರಿಸದಸ್ಯ ಪೀಠ ಎತ್ತಿ ಹಿಡಿಯಿತು.
ಭಾರತದಲ್ಲಿ ದೇಣಿಗೆ ನೀಡುವವರಿಗೆ ಬರವಿಲ್ಲ ಎಂದಿರುವ ಸುಪ್ರೀಂ ಕೋರ್ಟ್, ದೇಣಿಗೆಯ ಮೂಲಕ ವಿದೇಶಗಳ ಪ್ರಭಾವವನ್ನು ನಿಯಂತ್ರಿಸಲು ದೇಶದೊಳಗೆ ದೇಣಿಗೆ ನೀಡುವವರತ್ತ ದೃಷ್ಟಿ ನೆಡುವಂತೆ ಧರ್ಮದತ್ತಿ ಸಂಸ್ಥೆಗಳಿಗೆ ಹೇಳಿದೆ.
ವಿದೇಶಿ ದೇಣಿಗೆ ಹರಿದು ಬರುವುದಕ್ಕೆ ಅನುಮತಿಸುವ ವಿಚಾರವು ಸರ್ಕಾರದ ನೀತಿಯ ಭಾಗವಾಗಿದ್ದು, ಅದಕ್ಕೆ ಕಾನೂನಿನ ಮಾನ್ಯತೆ ಇದೆ. ವಿದೇಶಿ ದೇಣಿಗೆಗೆ ಸಂಪೂರ್ಣವಾಗಿ ನಿಷೇಧ ಹೇರುವ ವಿಚಾರವು ಸರ್ಕಾರಕ್ಕೆ ಸಂಬಂಧಪಟ್ಟಿದ್ದು, ವಿದೇಶಿ ದೇಣಿಗೆ ಪಡೆಯುವುದಕ್ಕೆ ಸಂಬಂಧಿಸಿದಂತೆ ಇಲ್ಲಿನ ನಿವಾಸಿಗಳಿಗೆ ಯಾವುದೇ ಹಕ್ಕು ಇಲ್ಲ ಎಂದು ಹೇಳಿದೆ.
ಎಫ್‌ಸಿಆರ್‌ಎ ಅನುಮತಿಗೆ ಆಧಾರ್ ಸಂಖ್ಯೆ ನೀಡುವ ಅಗತ್ಯವಿಲ್ಲ. ಬದಲಿಗೆ ಅರ್ಜಿದಾರರು ಪಾಸ್‌ಪೋರ್ಟ್ ಪ್ರಸ್ತುತಪಡಿಸಲು ಅನುಮತಿಸಬೇಕು ಎಂದು ಪೀಠ ಹೇಳಿದೆ.