ಸರ್ವೋಚ್ಚ ನ್ಯಾಯಾಲಯ 
ಸುದ್ದಿಗಳು

ಕಾಗ್ನಿಜೆಂಟ್‌ 2,956 ಕೋಟಿ ತೆರಿಗೆ ಬಾಕಿ ಪಾವತಿ: ಮದ್ರಾಸ್ ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂ

ಕಾಗ್ನಿಜೆಂಟ್‌ 2,956 ಕೋಟಿ ರೂ. ಮಧ್ಯಂತರ ಮೊತ್ತ ಪಾವತಿಸಲು ಮುಂದಾದ ಹಿನ್ನೆಲೆಯಲ್ಲಿ ಕಂಪೆನಿ ವಿರುದ್ಧ ಐಟಿ ಇಲಾಖೆ ಆರಂಭಿಸಿದ್ದ ವಸೂಲಿ ಪ್ರಕ್ರಿಯೆಗಳನ್ನು ಮದ್ರಾಸ್ ಹೈಕೋರ್ಟ್ 2023ರ ಡಿ. 21ರಂದು ತಾತ್ಕಾಲಿಕವಾಗಿ ತಡೆಹಿಡಿದಿತ್ತು.

Bar & Bench

ಅಮೆರಿಕ ಮೂಲದ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪೆನಿ ಕಾಗ್ನಿಜೆಂಟ್ ಟೆಕ್ನಾಲಜಿ ಸಲ್ಯೂಷನ್ಸ್‌ ಸಂಸ್ಥೆಯು ಆದಾಯ ತೆರಿಗೆ ಇಲಾಖೆಗೆ ಭಾಗಶಃ ತೆರಿಗೆ ಬಾಕಿ ಮೊತ್ತ 2,956 ಕೋಟಿ ರೂಪಾಯಿ ಪಾವತಿಸುವಂತೆ ಮದ್ರಾಸ್‌ ಹೈಕೋರ್ಟ್‌ ಕಳೆದ ಡಿಸೆಂಬರ್‌ನಲ್ಲಿ ನೀಡಿದ್ದ ಮಧ್ಯಂತರ ಆದೇಶವನ್ನು ಸುಪ್ರೀಂ ಕೋರ್ಟ್ ಬುಧವಾರ ಎತ್ತಿಹಿಡಿದಿದೆ.

ಹೈಕೋರ್ಟ್‌ನಲ್ಲಿ ಕಾಗ್ನಿಜೆಂಟ್‌ ಸಲ್ಲಿಸಿದ್ದ ಮೇಲ್ಮನವಿ ಪರವಾಗಿ ತೀರ್ಪು ಬಂದರೆ ಆಗ ಕಂಪೆನಿಗೆ ಅಷ್ಟೂ ಹಣವನ್ನು ಬಡ್ಡಿ ಸಹಿತ ಮರುಪಾವತಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಅರವಿಂದ್ ಕುಮಾರ್ ಅವರಿದ್ದ ಪೀಠ ಅಂತಹ ಮೊತ್ತ ಪಡೆಯಲು ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿತು.

ಇದೇ ವೇಳೆ ಮೇಲ್ಮನವಿಯ ಬಗ್ಗೆ ಆರು ವಾರಗಳಲ್ಲಿ ನಿರ್ಧರಿಸುವಂತೆ ಹೈಕೋರ್ಟ್‌ಗೆ ಪೀಠ ನಿರ್ದೇಶನ ನೀಡಿತು.

ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಐಟಿಎಟಿ) ಸೆಪ್ಟೆಂಬರ್ 2023ರಲ್ಲಿ ಹೊರಡಿಸಿದ ಆದೇಶ ಹಾಗೂ 2017 ಮತ್ತು 2018ರ ನಡುವೆ ₹ 19,000 ಕೋಟಿಗಿಂತ ಹೆಚ್ಚಿನ ಮೌಲ್ಯದ ಷೇರು ಮರುಖರೀದಿಗೆ ಸಂಬಂಧಿಸಿದಂತೆ ಕಂಪನಿ ₹ 9,400 ಕೋಟಿ ತೆರಿಗೆ ಪಾವತಿಸಬೇಕೆಂದು ಸೂಚಿಸಿದ್ದ ನೋಟಿಸ್‌ಗಳನ್ನು ಪ್ರಶ್ನಿಸಿ ಕಳೆದ ವರ್ಷ ಕಾಗ್ನಿಜೆಂಟ್‌ ಮದ್ರಾಸ್‌ ಹೈಕೋರ್ಟ್‌ ಮೊರೆ ಹೋಗಿತ್ತು.

ತನ್ನ ವಿರುದ್ಧ ಆರಂಭಿಸಲಾದ ಎಲ್ಲಾ ವಸೂಲಾತಿ ಪ್ರಕ್ರಿಯೆಗಳಿಗೆ ಕಳೆದ ಡಿಸೆಂಬರ್ 21ರಂದು, ಕಾಗ್ನಿಜೆಂಟ್ ಮಧ್ಯಂತರ ತಡೆಯಾಜ್ಞೆ ಕೋರಿತ್ತು. ಇದೇ ವೇಳೆ ಮೂಲ ಮೊತ್ತವಾದ 1,500 ಕೋಟಿ ರೂ.ಗಳನ್ನು ನಗದು ರೂಪದಲ್ಲಿ ಪಾವತಿಸಲು ಅದು ಮುಂದಾಗಿತ್ತು.

ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದ ನ್ಯಾಯಮೂರ್ತಿಗಳಾದ ಆರ್ ಮಹಾದೇವನ್ ಮತ್ತು ಮೊಹಮ್ಮದ್ ಶಫೀಕ್ ಅವರಿದ್ದ ಹೈಕೋರ್ಟ್‌ ಪೀಠ ಐಟಿ ಇಲಾಖೆಗೆ ಕಾಗ್ನಿಜೆಂಟ್ 1,500 ಕೋಟಿ ರೂಪಾಯಿ ಪಾವತಿಸಬೇಕು ಹಾಗೂ 1,456 ಕೋಟಿ ರೂಪಾಯಿ ಸ್ಥಿರ ಠೇವಣಿ ಇಡಬೇಕು ಎಂಬ ಷರತ್ತಿನ ಮೇಲೆ ವಸೂಲಿ ಪ್ರಕ್ರಿಯೆಗೆ ತಾತ್ಕಾಲಿಕ ತಡೆ ನೀಡಿತ್ತು.

ಈ ಮಧ್ಯಂತರ ಆದೇಶದ ವಿರುದ್ಧ ಕಾಗ್ನಿಜೆಂಟ್ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಅನುಮತಿ ಅರ್ಜಿ (ಎಸ್ಎಲ್‌ಪಿ) ಸಲ್ಲಿಸಿತ್ತು. ಆದರೆ ಮದ್ರಾಸ್‌ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ ಇದೀಗ ಎತ್ತಿಹಿಡಿದಿದೆ.

ಹಿರಿಯ ವಕೀಲರಾದ ಮುಕುಲ್ ರೋಹಟಗಿ ಮತ್ತು ಬಲ್ಬೀರ್ ಸಿಂಗ್, ವಕೀಲರಾದ ತುಷಾರ್ ಜರ್ವಾಲ್, ಅನುರಾಧಾ ದತ್, ರಾಹುಲ್ ಸತೀಜಾ, ಪ್ರಣವ್ ಬನ್ಸಾಲ್ ಮತ್ತು ಬಿ ವಿಜಯಲಕ್ಷ್ಮಿ ಮೆನನ್ ಅವರು ಕಾಗ್ನಿಜೆಂಟ್ ಪರವಾಗಿ ಹಾಜರಿದ್ದರು.

ಆದಾಯ ತೆರಿಗೆ ಇಲಾಖೆಯನ್ಗಿನು ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್.ವೆಂಕಟರಾಮನ್ , ವಕೀಲರಾದ ರಾಜ್ ಬಹದ್ದೂರ್ ಯಾದವ್, ರೂಪೇಶ್ ಕುಮಾರ್, ಅಮಿತ್ ಶರ್ಮಾ ಬಿ, ಅನಿರುದ್ಧ್ ಭಟ್ ಮತ್ತು ದೇಬೋಜ್ಯೋತಿ ಮುಖ್ಯೋಪಾಧ್ಯಾಯ ಪ್ರತಿನಿಧಿಸಿದ್ದರು.

[ಆದೇಶ ಓದಿ]

Cognizant Technology vs Assistant Commissioner.pdf
Preview