Consumer Protection 
ಸುದ್ದಿಗಳು

ಗ್ರಾಹಕ ಸಂರಕ್ಷಣಾ ಕಾಯಿದೆ- 2019ರ ಆರ್ಥಿಕ ಅಧಿಕಾರ ವ್ಯಾಪ್ತಿಯ ಸೆಕ್ಷನ್‌ಗಳ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ ಕೋರ್ಟ್

ಉತ್ಪನ್ನ ಅಥವಾ ಸೇವೆಗೆ ಪಾವತಿಸಿದ ನಿಜವಾದ ಮೊತ್ತದ ಆಧಾರದ ಮೇಲೆ ಪ್ರಕರಣವನ್ನು ಆಲಿಸುವ ನ್ಯಾಯಾಲಯದ ವ್ಯಾಪ್ತಿಯನ್ನು ನಿರ್ಧರಿಸಬೇಕೇ ಹೊರತು ಪರಿಹಾರ ಕೋರಿದ ಆಧಾರದ ಮೇಲೆ ಅಲ್ಲ ಎಂಬ ಕಾಯಿದೆಯ ಸೆಕ್ಷನ್‌ಗಳನ್ನು ನ್ಯಾಯಾಲಯ ಎತ್ತಿಹಿಡಿದಿದೆ.

Bar & Bench

ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಗ್ರಾಹಕ ವೇದಿಕೆಗಳ ಅಧಿಕಾರ ವ್ಯಾಪ್ತಿ ಸೂಚಿಸುವ ಗ್ರಾಹಕ ಸಂರಕ್ಷಣಾ ಕಾಯಿದೆ, 2019ರ ಪ್ರಮುಖ ಸೆಕ್ಷನ್‌ಗಳ ಸಾಂವಿಧಾನಿಕ ಸಿಂಧುತ್ವವನ್ನು ಮಂಗಳವಾರ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ [ಋತು ಮಿಹಿರ್ ಪಂಚಲ್ ಮತ್ತಿತರರು ಹಾಗೂ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಗ್ರಾಹಕ ಆಯೋಗಗಳ ನ್ಯಾಯವ್ಯಾಪ್ತಿಯನ್ನು ಉತ್ಪನ್ನ ಅಥವಾ ಸೇವೆಗೆ ಪಾವತಿಸಿದ ನಿಜವಾದ ಮೊತ್ತದ ಆಧಾರದ ಮೇಲೆ ನಿರ್ಧರಿಸಬೇಕೇ ಹೊರತು ಬಾಧಿತ ಪಕ್ಷಕಾರರು ಪಡೆಯುವ ಪರಿಹಾರ ಕೋರಿಕೆಯ ಆಧಾರದ ಮೇಲೆ ಅಲ್ಲ ಎಂದು ಸೆಕ್ಷನ್ 34, 47 ಮತ್ತು 58ನ್ನು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠ ಎತ್ತಿಹಿಡಿದಿದೆ.

"ಪಾವತಿಸಲಾದ ಸರಕು ಮತ್ತು ಸೇವೆಗಳ ಮೌಲ್ಯವನ್ನು ಆಧರಿಸಿದ ಕ್ಲೇಮುಗಳ (ಪರಿಹಾರ ಕೋರಿಕೆಗಳ) ವರ್ಗೀಕರಣ ಎಂಬುದು ನ್ಯಾಯಮಂಡಳಿಗಳ ಮೂಲಕ ನ್ಯಾಯಾಂಗ ಪರಿಹಾರಗಳನ್ನು ನೀಡುವ ಶ್ರೇಣೀಕೃತ ವ್ಯವಸ್ಥೆಯನ್ನು ರೂಪಿಸಿರುವ ಉದ್ದೇಶದೊಂದಿಗೆ ನೇರ ಸಂಬಂಧ ಹೊಂದಿದೆ" ಎಂದು ನ್ಯಾಯಾಲಯ ಹೇಳಿದೆ.

ಆದ್ದರಿಂದ, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಗ್ರಾಹಕ ಆಯೋಗಗಳ ಆರ್ಥಿಕ ನ್ಯಾಯವ್ಯಾಪ್ತಿಯನ್ನು ನಿಗದಿಪಡಿಸುವ ನಿಬಂಧನೆಗಳನ್ನು ಪ್ರಶ್ನಿಸಿದ್ದ ಅರ್ಜಿಗಳನ್ನು ಅದು ವಜಾಗೊಳಿಸಿತು.

ಸಂವಿಧಾನದ 32ನೇ ವಿಧಿಯ ಅಡಿಯಲ್ಲಿ ಸಲ್ಲಿಸಲಾದ ರಿಟ್ ಅರ್ಜಿ ಮತ್ತು ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ (ಎನ್‌ಸಿಡಿಆರ್‌ಸಿ) ಆದೇಶದಿಂದ ಉದ್ಭವಿಸಿದ ಸಿವಿಲ್ ಮೇಲ್ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ರಿಟ್ ಅರ್ಜಿಯಲ್ಲಿ, ಅರ್ಜಿದಾರರು 2019 ರ ಕಾಯಿದೆಗೆ ಮಾಡಿದ ಬದಲಾವಣೆಯನ್ನು ಪ್ರಶ್ನಿಸಿದ್ದರು.  ಆ ತಿದ್ದುಪಡಿಯ ಪ್ರಕಾರ ಹಣಕಾಸಿನ ವ್ಯಾಪ್ತಿಯನ್ನು ಪಾವತಿಸಿದ ಪರಿಗಣನೆಯ ಮೌಲ್ಯದ ಆಧಾರದ ಮೇಲೆ ನಿರ್ಧರಿಸಬೇಕು ಮತ್ತು 1986ರ ರದ್ದಾದ ಗ್ರಾಹಕ ಸಂರಕ್ಷಣಾ ಕಾಯಿದೆಯ ಅಡಿಯಲ್ಲಿನ ನಿಬಂಧನೆಯಂತೆ ಕೋರಿದ ಪರಿಹಾರದ ಮೇಲೆ ಅಲ್ಲ ಎಂಬುದಾಗಿತ್ತು.

ಅರ್ಜಿದಾರರ ಪ್ರಕಾರ, ಅವರ ಪತಿ ₹31.19 ಲಕ್ಷಕ್ಕೆ ಫೋರ್ಡ್ ಎಂಡೀವರ್ ಟಿಟಾನಿಯಂ ಕಾರನ್ನು ಖರೀದಿಸಿದ್ದರು, ಅದು ಬೆಂಕಿಗೆ ಆಹುತಿಯಾಗಿ ಅವರ ಸಾವಿಗೆ ಕಾರಣವಾಯಿತು.

ವಡೋದರಾದ ಜಿಲ್ಲಾ ಆಯೋಗದ ಮುಂದೆ ₹51.49 ಕೋಟಿ ಪರಿಹಾರ ನೀಡುವಂತೆ ಗ್ರಾಹಕ ದೂರು ದಾಖಲಾಗಿತ್ತು. 1986 ರ ಕಾಯಿದೆ ಇನ್ನೂ ಅನ್ವಯವಾಗಿದ್ದರೆ, ಪರಿಹಾರವಾಗಿ ಹೇಳಲಾದ ಮೊತ್ತವನ್ನು ನೀಡಿದರೆ ನೇರವಾಗಿ ಎನ್‌ಸಿಡಿಆರ್‌ಸಿಯನ್ನು ಸಂಪರ್ಕಿಸಬಹುದಿತ್ತು ಎಂದು ಅರ್ಜಿದಾರರು ವಾದಿಸಿದರು.

ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ, ಕೋವಿಡ್-19 ನಿಂದಾಗಿ ಪತಿ ಕಳೆದುಕೊಂಡ ಅರ್ಜಿದಾರೆ ಸಲ್ಲಿಸಿದ್ದ ಮೇಲ್ಮನವಿಯಲ್ಲಿ ತಾನು ವಿಮಾ ಪಾಲಿಸಿಯ ಅಡಿಯಲ್ಲಿ ₹14.94 ಕೋಟಿ ಪರಿಹಾರ  ಕೋರಿ ಎನ್‌ಸಿಡಿಆರ್‌ಸಿಯನ್ನು ಸಂಪರ್ಕಿಸಿದರೂ ಪಾಲಿಸಿಯ ಪರಿಗಣನೆ  ₹10 ಕೋಟಿ ಮೀರದ ಕಾರಣ ಅವರ ಹಕ್ಕನ್ನು ತಿರಸ್ಕರಿಸಲಾಗಿತ್ತು. ನ್ಯಾಯವ್ಯಾಪ್ತಿಯನ್ನು ನಿರ್ಧರಿಸುವಲ್ಲಿನ ಬದಲಾವಣೆಯು ಅಸಂಗತತೆಯನ್ನು ಸೃಷ್ಟಿಸಿದೆ ಎಂದು ಅರ್ಜಿದಾರರು ವಾದಿಸಿದ್ದರು.

ಈ ವಾದವನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಪರಿಗಣನೆಯ ಮೌಲ್ಯದ ಆಧಾರದ ಮೇಲೆ ಮಾಡಲಾಗಿರುವ ವರ್ಗೀಕರಣವು ತಾರತಮ್ಯ ಅಥವಾ ಅನಿಯಂತ್ರಿತವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿತು.

ಎನ್‌ಸಿಡಿಆರ್‌ಸಿ ಮೇಲಿನ ಪ್ರಕರಣಗಳ ಅಸಮಾನ ಹೊರೆಯನ್ನು ತಗ್ಗಿಸಲು ಮತ್ತು ಜಿಲ್ಲಾ ಮತ್ತು ರಾಜ್ಯ ಆಯೋಗಗಳ ಅಧಿಕಾರ ವ್ಯಾಪ್ತಿಯನ್ನು ಉಲ್ಲಂಘಿಸುವ ರೀತಿಯಲ್ಲಿ ಅತಿಯಾದ ಪರಿಹಾರ ಕ್ಲೇಮುಗಳನ್ನು ಕೋರುತ್ತಿದ್ದ ಪ್ರವೃತ್ತಿಯನ್ನು ತಡೆಯುವ ನಿಟ್ಟಿನಲ್ಲಿ ಶಾಸನದಲ್ಲಿ ಬದಲಾವಣೆಯನ್ನು ತರಲಾಯಿತು ಎಂದು ಅದು ವಿವರಿಸಿತು.

ಗ್ರಾಹಕರು ಯಾವುದೇ ಪ್ರಮಾಣದ ಪರಿಹಾರ ಪಡೆಯಲು ಸ್ವತಂತ್ರರಾಗಿದ್ದರೂ, ತಮ್ಮಿಷ್ಟದ ವೇದಿಕೆಯನ್ನು ಆಯ್ಕೆ ಮಾಡುವ ಸಲುವಾಗಿ ಅವರು ತಮ್ಮ ಪರಿಹಾರದ ಮೊತ್ತವನ್ನು ಅತಿಯಾಗಿ ಅಂದಾಜು ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಪುನರುಚ್ಚರಿಸಿತು.

ಪ್ರಕ್ರಿಯೆಯ ದುರುಪಯೋಗವನ್ನು ತಡೆಗಟ್ಟಲು, ಅಧಿಕ ಮೌಲ್ಯದ ಪರಿಹಾರ ಕೋರಿಕೆಗಳ ಮರುಮೌಲ್ಯಮಾಪನ ಮಾಡಲು ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳು ನ್ಯಾಯವ್ಯಾಪ್ತಿಯನ್ನು ಉಳಿಸಿಕೊಳ್ಳುತ್ತವೆ ಎಂದು ತೀರ್ಪು ನೀಡುವುದಕ್ಕಾಗಿ ನ್ಯಾಯಾಲಯ ನಂದಿತಾ ಬೋಸ್ ವರ್ಸಸ್ ರತನ್‌ಲಾಲ್ ನಹಾಟಾ ಅವರ ತೀರ್ಪನ್ನು ಅವಲಂಬಿಸಿತು.

ವಿಮಾ ಕಂತುಗಳು ಅಪರೂಪಕ್ಕೆ ₹1 ಕೋಟಿ ಮೀರುವುದರಿಂದ, ಹೊಸ ವ್ಯವಸ್ಥೆಯು ಜಿಲ್ಲಾ ಆಯೋಗಗಳಿಗೆ ಮಾತ್ರವೇ ದೊಡ್ಡ ಮೌಲ್ಯದ ವಿಮಾ ಕ್ಲೈಮ್‌ಗಳನ್ನು ಸೀಮಿತಗೊಳಿಸುತ್ತವೆ ಎಂಬ ಕಳವಳಗಳಿಗೂ ಕೂಡ ತೀರ್ಪು ಉತ್ತರಿಸಿದೆ.

ಇದು ಸಾಂವಿಧಾನಿಕ ದೋಷಕ್ಕಿಂತ ಹೆಚ್ಚಾಗಿ ಶಾಸನಬದ್ಧ ಕಾರ್ಯ ಮತ್ತು ನೀತಿ ಮೌಲ್ಯಮಾಪನದ ವಿಷಯವಾಗಿದೆ ಎಂದು ನ್ಯಾಯಾಲಯ ಗಮನಿಸಿದೆ. ಅಂತಹ ಕಳವಳಗಳನ್ನು ಪರಿಹರಿಸಲು, ನ್ಯಾಯಾಲಯ 2019ರ ಕಾಯಿದೆಯಡಿಯಲ್ಲಿ ಸ್ಥಾಪಿಸಲಾದ ಕೇಂದ್ರ ಗ್ರಾಹಕ ಸಂರಕ್ಷಣಾ ಮಂಡಳಿ ಮತ್ತು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರಕ್ಕೆ ಸಮೀಕ್ಷೆಗಳು, ಕಾರ್ಯಕ್ಷಮತೆ ಲೆಕ್ಕಪರಿಶೋಧನೆಗಳನ್ನು ಕೈಗೊಳ್ಳಲು ಮತ್ತು ಕಾಯಿದೆಯ ಪರಿಣಾಮಕಾರಿ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಯಾವುದೇ ಅಗತ್ಯ ಬದಲಾವಣೆಗಳ ಕುರಿತಾಗಿ ಸರ್ಕಾರಕ್ಕೆ ಸಲಹೆ ನೀಡಲು ನಿರ್ದೇಶಿಸಿತು.

ಇದಲ್ಲದೆ, ಶಾಸನಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸುವುದು ಮತ್ತು ಲೆಕ್ಕಪರಿಶೋಧಿಸುವ ಕಾರ್ಯಾಂಗದ ಕರ್ತವ್ಯವಾಗಿದ್ದು ಕಾನೂನಾತ್ಮಕ ಆಡಳಿತದ ಭಾಗವಾಗಿದೆ ಎಂದು ಅದು ಹೇಳಿದೆ.

ಕೊನೆಯಲ್ಲಿ, ಎರಡೂ ಅರ್ಜಿಗಳನ್ನು ವಜಾಗೊಳಿಸಿದ ನ್ಯಾಯಾಲಯ ಗ್ರಾಹಕ ಸಂರಕ್ಷಣಾ ಕಾಯಿದೆ, 2019ರ ಸೆಕ್ಷನ್ 34, 47 ಮತ್ತು 58 ರ ಸಿಂಧುತ್ವವನ್ನು ಎತ್ತಿಹಿಡಿಯಿತು.