ಕಸ್ಟಮ್ಸ್ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಧಿಕಾರಿಗಳಿಗೆ ಆರೋಪಿಗಳನ್ನು ಬಂಧಿಸುವ ಅಧಿಕಾರ ಒದಗಿಸುವ ನಿಯಮಾವಳಿಗಳ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಗುರುವಾರ ಎತ್ತಿಹಿಡಿದಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಹಾಗೂ ಎಂ ಎಂ ಸುಂದರೇಶ್ ಅವರಿದ್ದ ಪೀಠ ಈ ತೀರ್ಪುನೀಡಿದೆ.
“ಜಿಎಸ್‌ಟಿ ವಿಧಿಸುವುದು, ಸಂಗ್ರಹಿಸುವುದು ಮತ್ತು ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿ ಶಿಕ್ಷೆ ಅಥವಾ ಅಭಿಯೋಜನೆಗೆ ಮುಂದಾಗುವ ಪ್ರಕ್ರಿಯೆಯು ಶಾಸನಾತ್ಮಕ ಅಧಿಕಾರವಾಗಿದೆ. ಜಿಎಸ್‌ಟಿ ಕಾಯಿದೆಗಳು, ಮೂಲಭೂತವಾಗಿ, ಸಂವಿಧಾನದ 246-ಎ ವಿಧಿಗೆ ಸಂಬಂಧಿಸಿದ್ದು ಸಮನ್ಸ್ ನೀಡುವುದು, ಬಂಧನ ಮತ್ತು ತನಿಖೆ ನಡೆಸುವ ಅಧಿಕಾರಗಳು ಸರಕು ಮತ್ತು ಸೇವಾ ತೆರಿಗೆಯನ್ನು ವಿಧಿಸುವ ಮತ್ತು ಸಂಗ್ರಹಿಸುವ ಅಧಿಕಾರಕ್ಕೆ ಪೂರಕ ಮತ್ತು ಪ್ರಾಸಂಗಿಕವಾಗಿವೆ. ಈ ದೃಷ್ಟಿಯಿಂದ, ಜಿಎಸ್‌ಟಿ ಕಾಯಿದೆಗಳ ಸೆಕ್ಷನ್ 69 ಮತ್ತು 70ರನ್ನು ಪ್ರಶ್ನಿಸಿರುವ ಸವಾಲು ವಿಫಲವಾಗಬೇಕು. ಹಾಗಾಗಿ ಅದನ್ನು ತಿರಸ್ಕರಿಸಲಾಗಿದೆ" ಎಂದು ನ್ಯಾಯಾಲಯ ವಿವರಿಸಿದೆ.
2017 ರ ಸಿಜಿಎಸ್‌ಟಿ ಕಾಯಿದೆಯ ಸೆಕ್ಷನ್ 69 ಮತ್ತು 70ರ ಸಾಂವಿಧಾನಿಕ ಸಿಂಧುತ್ವಕ್ಕೆ ಸಂಬಂಧಿಸಿದಂತೆ ಅರ್ಜಿಗಳನ್ನು ಸಲ್ಲಿಸಲಾಗಿತ್ತು.
ಕಸ್ಟಮ್ಸ್ ಕಾಯ್ದೆಯಡಿಯಲ್ಲಿನ ಅಪರಾಧಗಳು ಪ್ರಾಥಮಿಕವಾಗಿ ಅಸಂಜ್ಞೇಯ ಮತ್ತು ಜಾಮೀನು ನೀಡಬಹುದಾದ ಅಪರಾಧಗಳಾಗಿದ್ದು, ಬಂಧನಕ್ಕೆ ವಾರಂಟ್ ಅಗತ್ಯವಿದೆ ಎಂದು ಹೇಳಿ ಓಂ ಪ್ರಕಾಶ್ ಪ್ರಕರಣದಲ್ಲಿ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಆದರೆ ಕಸ್ಟಮ್ಸ್ ಅಧಿಕಾರಿಗಳನ್ನು ಪೊಲೀಸ್ ಅಧಿಕಾರಿಗಳಂತೆ ಪರಿಗಣಿಸಬೇಕು ಎಂಬ ವಾದವನ್ನು ನ್ಯಾಯಾಲಯವು ದೃಢವಾಗಿ ತಿರಸ್ಕರಿಸಿತು. ಜೊತೆಗೆ ವಿಶೇಷ ಕಾಯಿದೆಗಳಿಂದ ಸ್ಪಷ್ಟವಾಗಿ ಅಥವಾ ಸೂಚ್ಯವಾಗಿ ಹೊರಗಿಡದ ಹೊರತು, ಕಸ್ಟಮ್ಸ್ ಕಾಯಿದೆ ಮತ್ತು ಜಿಎಸ್‌ಟಿ ಕಾಯಿದೆಗೆ ಸಿಆರ್‌ಪಿಸಿ ಅನ್ವಯಿಸುತ್ತದೆ ಎಂದು ಅದು ಹೇಳಿದೆ.
ಕಸ್ಟಮ್ಸ್ ಕಾಯಿದೆ ಮತ್ತು ಜಿಎಸ್‌ಟಿ ಕಾಯಿದೆ ಅಡಿಯಲ್ಲಿ ಬಂಧನದ ಅಧಿಕಾರವನ್ನು ಸೂಕ್ತ ಎಚ್ಚರಿಕೆಯಿಂದ ಮತ್ತು ಸಂವಿಧಾನದ 21 (ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು) ಮತ್ತು 22ನೇ ವಿಧಿ (ಬಂಧನ ಮತ್ತು ಬಂಧನದ ವಿರುದ್ಧ ರಕ್ಷಣೆ) ಅಡಿಯಲ್ಲಿ ಒದಗಿಸಲಾದ ಸಾಂವಿಧಾನಿಕ ಸುರಕ್ಷತೆಗಳನ್ವಯ ಚಲಾಯಿಸಬೇಕು ಎಂದು ನ್ಯಾಯಾಲಯ ಒತ್ತಿ ಹೇಳಿದೆ.
ತೆರಿಗೆದಾರರನ್ನು ಬಂಧಿಸುವುದಾಗಿ ಬೆದರಿಕೆಯೊಡ್ಡಿ ಸ್ವಯಂಪ್ರೇರಿತ ಪಾವತಿಗೆ ಒತ್ತಾಯಿಸಲಾಗುತ್ತಿದೆ ಎಂಬ ಕಳವಳವನ್ನು ನ್ಯಾಯಾಲಯ ಪರಿಹರಿಸಿದೆ. ಜಿಎಸ್‌ಟಿ ಕಾಯಿದೆಗಳ ಸೆಕ್ಷನ್ 74(5) ರ ಅಡಿಯಲ್ಲಿ ಸ್ವಯಂಪ್ರೇರಿತ ಪಾವತಿಗಳಿಗೆ ಅನುಮತಿಸಲಾಗಿದ್ದರೂ, ಅವುಗಳನ್ನು ಒತ್ತಡದಿಂದ ಮಾಡುವಂತಿಲ್ಲ ಎಂದು ಅದು ಸ್ಪಷ್ಟಪಡಿಸಿರುವುದಾಗಿ ನ್ಯಾಯಾಲಯ ತಿಳಿಸಿದೆ.