Supreme Court of India 
ಸುದ್ದಿಗಳು

ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿ ಕಾಯಿದೆ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ ಕೋರ್ಟ್

ಸಂವಿಧಾನದ ಮೂಲಭೂತ ರಚನೆಯ ಒಂದು ಅಂಶವಾದ ಜಾತ್ಯತೀತತೆಯ ತತ್ವಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕಾಯಿದೆಯನ್ನು ರದ್ದುಗೊಳಿಸಿದ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು.

Bar & Bench

ಮದರಸಾ ಮಂಡಳಿಗಳನ್ನು ಸ್ಥಾಪಿಸಲೆಂದು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೂಲಕ ಮದರಸಾಗಳ ಆಡಳಿತ ನಡೆಸಲೆಂದು ಜಾರಿಗೆ ಬಂದ ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿ ಕಾಯಿದೆಯ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ .

ಸಂವಿಧಾನದ ಮೂಲಭೂತ ರಚನೆಯ ಒಂದು ಅಂಶವಾದ ಜಾತ್ಯತೀತತೆಯ ತತ್ವಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕಾಯಿದೆಯನ್ನು ರದ್ದುಗೊಳಿಸಿದ್ದ ಅಲಾಹಾಬಾದ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್‌ ಮಿಶ್ರಾ ಅವರಿದ್ದ ಪೀಠ ರದ್ದುಪಡಿಸಿತು.

ಸಂವಿಧಾನದ ಭಾಗ IIIರ ಅಡಿಯಲ್ಲಿ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆಯೆಂದು ಇಲ್ಲವೇ ಶಾಸಕಾಂಗ ಸಾಮರ್ಥ್ಯದ ಪರಿಧಿಗೊಳಪಟ್ಟಂತೆ ಕಾಯಿದೆಯನ್ನು ರದ್ದುಗೊಳಿಸಬಹುದೇ ವಿನಾ ಸಂವಿಧಾನದ ಮೂಲ ರಚನೆಯ ಉಲ್ಲಂಘನೆಯಾಗಿದೆ ಎಂದಲ್ಲ ಎಂಬುದಾಗಿ ನ್ಯಾಯಾಲಯ ಹೇಳಿದೆ.

ಪ್ರಭುತ್ವದ ಸಕಾರಾತ್ಮಕ ಬಾಧ್ಯತೆಗೆ ಅನುಗುಣವಾಗಿ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವುದು ಕಾಯಿದೆಯ ಉದ್ದೇಶವಾಗಿದೆ ಎಂದು ಅದು ಹೇಳಿದೆ. "ಮದರಸಾಗಳಲ್ಲಿ ಸೂಚಿಸಲಾದ ಶಿಕ್ಷಣದ ಮಟ್ಟವನ್ನು ನಿಷ್ಕರ್ಷಿಸುವುದು ಕಾಯಿದೆಯ ಯೋಜನೆಯಾಗಿದೆ. ಮದರಸಾ ಕಾಯಿದೆ ಮದರಸಾಗಳ ದೈನಂದಿನ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಇದು ಉತ್ತರ ಪ್ರದೇಶದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವುದು ಮತ್ತು ವಿದ್ಯಾರ್ಥಿಗಳು ಉತ್ತೀರ್ಣರಾಗುವುದರ ಜೊತೆಗೆ ಯೋಗ್ಯವಾದ ಜೀವನ ನಡೆಸುವಂತೆ ನೋಡಿಕೊಳ್ಳುವ ಸರ್ಕಾರದ ಸಕಾರಾತ್ಮಕ ಬಾಧ್ಯತೆಗೆ ಸಂಬಂಧಿಸಿದ್ದಾಗಿದೆ," ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಆದರೆ, ಕಾಮಿಲ್ (ಸ್ನಾತಕೋತ್ತರ ಕೋರ್ಸ್) ಮತ್ತು ಫಾಜಿಲ್ (ಕಿರಿಯ ಸಂಶೋಧನಾ ಕಾರ್ಯಕ್ರಮ) ಉನ್ನತ ಶಿಕ್ಷಣಕ್ಕಾಗಿ ಕೋರ್ಸ್‌ ಮತ್ತು ಪಠ್ಯ ಪುಸ್ತಕಗಳ ಸಲಹೆ ನೀಡಲು ಮದರಸಾ ಮಂಡಳಿಗೆ ಅಧಿಕಾರ ನೀಡುವ ಕಾಯಿದೆಯ ಸೆಕ್ಷನ್‌ಗಳನ್ನು ನ್ಯಾಯಾಲಯ ರದ್ದುಗೊಳಿಸಿತು. ಇದು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಕಾಯಿದೆಯ (ಯುಜಿಸಿ ಕಾಯಿದೆ) ಉಲ್ಲಂಘನೆಯಾಗುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ತೀರ್ಪಿನ ಪ್ರಮುಖಾಂಶಗಳು

  • ಮದರಸಾ ಕಾಯಿದೆ ಮದರಸಾಗಳ ಶಿಕ್ಷಣವನ್ನು ನಿಯಂತ್ರಿಸುತ್ತದೆ;

  • ಇದು ವ್ಯಕ್ತಿಯು ಉತ್ತಮ ರೀತಿಯಲ್ಲಿ ಜೀವಿಸಲು ಅಗತ್ಯವಾದ ಸರ್ಕಾರದ ಸಕಾರಾತ್ಮಕ ಬಾಧ್ಯತೆಗೆ ಅನುಗುಣವಾಗಿದೆ.  

  • ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಸಂಸ್ಥೆಗಳು ಶಿಕ್ಷಣ ನೀಡುವ ನಿಟ್ಟಿನಲ್ಲಿ  ಸಂವಿಧಾನದ 21ನೇ ಎ ವಿಧಿ (ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು) ಮತ್ತು ಶಿಕ್ಷಣ ಹಕ್ಕು ಕಾಯಿದೆಯ ಸಹವಾಚನ ನಡೆಯಬೇಕು.

  • ಇದು ರಾಜ್ಯದ ಶಾಸಕಾಂಗ ಸಾಮರ್ಥ್ಯದ ವ್ಯಾಪ್ತಿಯಲ್ಲಿದೆ;

  • ಉನ್ನತ ಶಿಕ್ಷಣದೊಂದಿಗೆ ವ್ಯವಹರಿಸುವ ಫಾಜಿಲ್ ಮತ್ತು ಕಾಮಿಲ್‌ಗೆ ಸಂಬಂಧಿಸಿದ ಮದರಸಾ ಕಾಯಿದೆಯ ಸೆಕ್ಷನ್‌ಗಳು ಯುಜಿಸಿ  ಕಾಯಿದೆಯೊಂದಿಗೆ ಸಂಘರ್ಷದಲ್ಲಿರುವುದರಿಂದ ಇದನ್ನು ಅಸಾಂವಿಧಾನಿಕವೆಂದು ಪರಿಗಣಿಸಿ ಬದಿಗೆ ಸರಿಸಿತು.