Supreme court 
ಸುದ್ದಿಗಳು

ಲೈಂಗಿಕ ಉದ್ದೇಶದ ಮಾನವ ಕಳ್ಳಸಾಗಣೆ: ಸಂತ್ರಸ್ತರ ಪುನರ್ವಸತಿಗೆ ರೂಪುರೇಷೆ ಸಿದ್ಧಪಡಿಸಲು ಕೇಂದ್ರಕ್ಕೆ ಸುಪ್ರೀಂ ಆಗ್ರಹ

ಸಮಾಜದ ದುರ್ಬಲ ವರ್ಗಗಳ ಮೇಲೆ ಮಾನವ ಮತ್ತು ಲೈಂಗಿಕ ಕಳ್ಳಸಾಗಣೆಯ ವಿನಾಶಕಾರಿ ಪರಿಣಾಮದ ಬಗ್ಗೆ ಅವಲೋಕಿಸಿದ ನ್ಯಾಯಾಲಯವು ಈ ಸಮಸ್ಯೆಯನ್ನು 'ಅತ್ಯಂತ ಸೂಕ್ಷ್ಮವಾದದ್ದು' ಎಂದಿತು.

Bar & Bench

ಲೈಂಗಿಕ ಶೋಷಣೆಗಾಗಿ ನಡೆಸುವ ಅಕ್ರಮ ಮಾನವ ಕಳ್ಳಸಾಗಣೆಯಲ್ಲಿ ಸಿಲುಕುವ ಸಂತ್ರಸ್ತರ ಸಮಗ್ರ ಪುನರ್ವಸತಿಗೆ ರೂಪುರೇಷೆಯು ಅಗತ್ಯವಿರುವುದನ್ನು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಒತ್ತಿ ಹೇಳಿದೆ. ಈ ನೆಲೆಗಟ್ಟಿನಲ್ಲಿ ಶಾಸನಾತ್ಮಕವಾಗಿ ಇರುವ ನಿರ್ವಾತದ ಬಗ್ಗೆ ಅದು ಕಳವಳ ವ್ಯಕ್ತಪಡಿಸಿದೆ [ಪ್ರಜ್ವಲ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಮತ್ತು ಇತರರು].

ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಪಂಕಜ್ ಮಿತ್ತಲ್ ಅವರ ಪೀಠವು ಸಮಾಜದ ದುರ್ಬಲ ವರ್ಗಗಳ ಮೇಲೆ ಮಾನವ ಮತ್ತು ಲೈಂಗಿಕ ಕಳ್ಳಸಾಗಣೆಯ ವಿನಾಶಕಾರಿ ಪರಿಣಾಮದ ಬಗ್ಗೆ ಕಟುವಾದ ಅವಲೋಕನವನ್ನು ಮಾಡಿತು. ಈ ಸಮಸ್ಯೆಯನ್ನು 'ಅತ್ಯಂತ ಸೂಕ್ಷ್ಮ' ಎಂದು ಕರೆದ ನ್ಯಾಯಾಲಯ, ಮಹಿಳೆಯರು ಮತ್ತು ಮಕ್ಕಳ ಮೇಲೆ ಕಳ್ಳಸಾಗಣೆಯ ಅತೀವ ಪರಿಣಾಮವನ್ನು ಒತ್ತಿಹೇಳಿತು.

"ಈ ದಾವೆಯು ಒಳಗೊಂಡಿರುವ ವಿಷಯಗಳು ಅತ್ಯಂತ ಸೂಕ್ಷ್ವವೂ ಹಾಗೂ ಪ್ರಮುಖವು ಆಗಿವೆ. ಲೈಂಗಿಕ ಕಳ್ಳಸಾಗಣೆಗೆ ತುತ್ತಾದ ಸಂತ್ರಸ್ತರಿಗೆ ನೀಡಬೇಕಾದ ರಕ್ಷಣೆಗೆ ಅವು ಸಂಬಂಧಿಸಿವೆ. ಮಾನವ ಮತ್ತು ಲೈಂಗಿಕ ಕಳ್ಳಸಾಗಣೆಯು ಸಂತ್ರಸ್ತರನ್ನು ಅಮಾನವೀಯಗೊಳಿಸುವ ಮತ್ತು ಅವರ ಹಕ್ಕನ್ನು ಉಲ್ಲಂಘಿಸುವ ಅಪರಾಧಗಳಾಗಿವೆ. ಸಮಾಜದ ದುರ್ಬಲ ವರ್ಗಗಳು, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಇಂತಹ ಅಪರಾಧಗಳು ಅತೀವ ಪರಿಣಾಮ ಬೀರುತ್ತವೆ," ಎಂದು ನ್ಯಾಯಾಲಯವು ಅವಲೋಕಿಸಿತು.

ಇಂತಹ ದುರ್ಬಲ ಗುಂಪುಗಳ ಹಕ್ಕುಗಳು ಮತ್ತು ಘನತೆಯನ್ನು ಸಮರ್ಥವಾಗಿ ರಕ್ಷಿಸುವ ಹಾಗೂ ಅವರಿಗೆ ಬೆಂಬಲವಾಗುವಂತಹ ವ್ಯವಸ್ಥೆಯನ್ನು ರೂಪಿಸುವ ಅಗತ್ಯವನ್ನು ಈ ಕಟು ವಾಸ್ತವವು ಒತ್ತಿಹೇಳುತ್ತದೆ ಎಂದು ನ್ಯಾಯಾಲಯವು ತಿಳಿಸಿತು.

ಸಂಘಟಿತ ಅಪರಾಧ ತನಿಖಾ ಸಂಸ್ಥೆಯ (OCIA) ರಚನೆ ಮತ್ತು ಮಾನವ ಮತ್ತು ಲೈಂಗಿಕ ಕಳ್ಳಸಾಗಣೆಯ ಸಂತ್ರಸ್ತರ ಸಂರಕ್ಷಣೆಯ ಶಿಷ್ಟಾಚಾರವನ್ನು ಬಲಪಡಿಸುವ ಕುರಿತಾಗಿ ಕೇಂದ್ರವು 2015ರ ನ್ಯಾಯಾಲಯದ ಆದೇಶವೊಂದರ ವೇಳೆ ತೆಗೆದುಕೊಂಡಿದ್ದ ನಿಲುವಿನ ಅನುಪಾಲನೆಗೆ ಆಗ್ರಹಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು ಮೇಲಿನ ಅವಲೋಕನಗಳನ್ನು ಮಾಡಿತು.

ಆ ಆದೇಶದಲ್ಲಿ, ಮಾನವ ಕಳ್ಳಸಾಗಣೆಗೆ ತುತ್ತಾಗುವ ಸಂತ್ರಸ್ತರ ಪುನರ್ವಸತಿಗಾಗಿ ಸಮಗ್ರ ಚೌಕಟ್ಟನ್ನು ಜಾರಿಗೊಳಿಸುವ ಬಗ್ಗೆ ಪರಿಗಣಿಸುವಂತೆ ನ್ಯಾಯಾಲಯವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು.

ಒಸಿಐಎ ರಚನೆಯ ವಿಷಯವಾಗಿ ಕೇಂದ್ರವು ತನ್ನ ಈ ಹಿಂದಿನ ಅಫಿಡವಿಟ್‌ನಲ್ಲಿ ನ್ಯಾಯಾಲಯಕ್ಕೆ ಮಾಹಿತಿ ನೀಡಿತ್ತು. ಅಂತಹ ಸಂಸ್ಥೆಯ ರಚನೆಯ ಬದಲಿಗೆ, ಈ ವಿಷಯವನ್ನು ನಿರ್ವಹಿಸಲು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕಾಯಿದೆ, 2008 ಗೆ ತಿದ್ದುಪಡಿಗಳನ್ನು ಮಾಡಲಾಗಿದೆ ಎಂದು ಅದು ಹೇಳಿತ್ತು.

ಆದಾಗ್ಯೂ, ಎನ್‌ಐಎ ಕಾಯಿದೆಗೆ ತರಲಾದ ತಿದ್ದುಪಡಿಗಳು ಸಂತ್ರಸ್ತರ ರಕ್ಷಣೆಯನ್ನು ಸಮರ್ಪಕವಾಗಿ ಮಾಡದಿರಬಹುದು ಎಂದು ನ್ಯಾಯಾಲಯವ ಆತಂಕವನ್ನು ವ್ಯಕ್ತಪಡಿಸಿತು. ಹೆಚ್ಚೆಂದರೆ ಈ ತಿದ್ದುಪಡಿಗಳು ಕಳ್ಳಸಾಗಣೆ ಅಪರಾಧಿಗಳನ್ನು ಸಮರ್ಥವಾಗಿ ವಿಚಾರಣೆಗೆ ಒಳಪಡಿಸಬಹುದು ಆದರೆ ಸಂತ್ರಸ್ತರ ಸಂರಕ್ಷಣೆ ಇದರಿಂದ ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

ನ್ಯಾಯಾಲಯದ ಈ ಹಿಂದಿನ ಆದೇಶದ ವಿಚಾರದಲ್ಲಿ ಕೇಂದ್ರವು ಅನುಪಾಲನೆ ತೋರದಿರುವುದನ್ನು ಗಮನಿಸಿದ ನ್ಯಾಯಾಲಯವು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರಿಗೆ ಈ ವಿಷಯದಲ್ಲಿ ಕೇಂದ್ರ ಸರ್ಕಾರದಿಂದ ಹೆಚ್ಚಿನ ಸೂಚನೆಗಳನ್ನು ಪಡೆಯಲು ಮತ್ತು ಅದು ತೆಗೆದುಕೊಳ್ಳಲು ಉದ್ದೇಶಿಸಿರುವ ಕ್ರಮಗಳ ಕುರಿತಾಗಿ ಹೊಸ ಅಫಿಡವಿಟ್ ಸಲ್ಲಿಸಲು ಸಮಯಾವಕಾಶ ನೀಡಿತು.

ಅಂತರ್ಜಾಲ ಪ್ರೇರಿತ ಕಾರಣದಿಂದಾಗಿ ಲೈಂಗಿಕ ಉದ್ದೇಶದ ಮಾನವ ಕಳ್ಳಸಾಗಣೆಯಲ್ಲಿ ಅಸಾಧಾರಣ ಹೆಚ್ಚಳವಾಗಿರುವುದು ಹಾಗೂ ಶಾಸನಾತ್ಮಕವಾಗಿ ಈ ವಿಚಾರದಲ್ಲಿ ನಿರ್ವಾತವಿರುವುದನ್ನು ಮನಗಂಡು ಕೇಂದ್ರವು ಈ ವಿಚಾರಗಳನ್ನು ತಕ್ಷಣವೇ ಪರಿಹರಿಸಬೇಕೆಂದು ನ್ಯಾಯಾಲಯವು ಸೂಚಿಸಿತು.

ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 10ಕ್ಕೆ ನಿಗದಿಪಡಿಸಿತು.

ಅರ್ಜಿದಾರ ಸಂಸ್ಥೆ ಪ್ರಜ್ವಲ ಪರವಾಗಿ ಹಿರಿಯ ವಕೀಲೆ ಅಪರ್ಣಾ ಭಟ್ ವಾದ ಮಂಡಿಸಿದರು. ಅವರಿಗೆ ವಕೀಲರಾದ ರಾಜಕುಮಾರಿ ಬಂಜು ಮತ್ತು ಕರಿಷ್ಮಾ ಮಾರಿಯಾ ಸಹಾಯ ಮಾಡಿದರು.