Supreme Court, CBI, and West Bengal Map  
ಸುದ್ದಿಗಳು

ಕೇಂದ್ರದಿಂದ ಸಿಬಿಐ ದುರ್ಬಳಕೆ: ಪ. ಬಂಗಾಳ ಮೊಕದ್ದಮೆ ನಿರ್ವಹಣಾರ್ಹವೇ ಎಂಬ ಕುರಿತು ತೀರ್ಪು ಕಾಯ್ದಿರಿಸಿದ ಸುಪ್ರೀಂ

ಕೇಂದ್ರ ಸಿಬಿಐ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿದ್ದ ಮೂಲ ದಾವೆಯ ವಿಚಾರಣೆಯನ್ನು ನ್ಯಾಯಾಲಯ ಪೂರ್ಣಗೊಳಿಸಿದೆ.

Bar & Bench

ಕೇಂದ್ರೀಯ ತನಿಖಾ ಸಂಸ್ಥೆಯಾದ ಸಿಬಿಐಯನ್ನು ದುರುಪಯೋಗಪಡಿಸಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿದ್ದ ಮೂಲ ದಾವೆ ನಿರ್ವಹಣಾ ಯೋಗ್ಯವೇ ಎಂಬ ಕುರಿತು ಸುಪ್ರೀಂ ಕೋರ್ಟ್‌ ಬುಧವಾರ ತೀರ್ಪು ಕಾಯ್ದಿರಿಸಿದೆ [ಪ. ಬಂಗಾಳ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಪಶ್ಚಿಮ ಬಂಗಾಳ ಸರ್ಕಾರದ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರ ಮರು ವಾದವನ್ನು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಇಂದು ಆಲಿಸಿತು.

ಪ್ರಕರಣಗಳ ತನಿಖೆಗೆ ಸಿಬಿಐಗೆ ನೀಡಿದ್ದ ಸಾಮಾನ್ಯ ಸಮ್ಮತಿಯನ್ನು ತಾನು ಹಿಂಪಡೆದಿದ್ದು ಸಿಬಿಐ ಇನ್ನು ಮುಂದೆ ಪಶ್ಚಿಮ ಬಂಗಾಳದಲ್ಲಿ ತನಿಖೆ ಮುಂದುವರೆಸಲು ಸಾಧ್ಯವಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಸರ್ಕಾರ ಸಲ್ಲಿಸಿರುವ ಮೊಕದ್ದಮೆ ಪ್ರತಿಪಾದಿಸಿತ್ತು.

ತನಿಖೆ ನಡೆಸಲೆಂದು ಸಿಬಿಐಗೆ ರಾಜ್ಯ ಪ್ರವೇಶಿಸಲು ಅವಕಾಶವಿತ್ತರೆ ಸಾಮಾನ್ಯವಾಗಿ ಜಾರಿ ನಿರ್ದೇಶನಾಲಯವೂ ಅದನ್ನು ಹಿಂಬಾಲಿಸಿ ಬರುತ್ತದೆ. ಇವೆಲ್ಲವೂ ಭಾರತೀಯ ರಾಜಕೀಯದ ಮೇಲೆ ಅಗಾಧ ಪರಿಣಾಮ ಬೀರುವಂತಹವು ಎಂದು ರಾಜ್ಯ ಸರ್ಕಾರ  ಹಿಂದಿನ ವಿಚಾರಣೆ ವೇಳೆ ವಾದಿಸಿತ್ತು. ವಿಚಾರಣೆ ವೇಳೆ ಸಾಲಿಸಿಟರ್‌ ಜನರಲ್‌ ಮೆಹ್ತಾ ಮತ್ತು ಸಿಬಲ್‌ ಅವರ ನಡುವೆ ಅನೇಕ ಆಸಕ್ತಿದಾಯಕ ಸಂಗತಿಗಳ ವಿನಿಮಯವಾಗಿತ್ತು.

ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿಗಳಿಂದ ವಶಪಡಿಸಿಕೊಂಡ ಅಪಾರ ಪ್ರಮಾಣದ ನಗದನ್ನು ಎಣಿಸಲಷ್ಟೇ ಇ ಡಿ ರಾಜ್ಯಕ್ಕೆ ಬರುತ್ತದೆ. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಬದಲಾಗಿ ಹೈಕೋರ್ಟ್‌ಗೆ  ಅರ್ಜಿ ಸಲ್ಲಿಸಬೇಕಿತ್ತು ಎಂದು ಇಂದಿನ ವಿಚಾರಣೆ ವೇಳೆ ಎಸ್‌ಜಿ ವಾದಿಸಿದರು.

ಇದನ್ನು ಸಿಬಲ್‌ ನಿರಾಕರಿಸಿದರು. ಹಾಗೆ ಸಾಂವಿಧಾನಿಕ ಚೌಕಟ್ಟಿಗೆ ವಿರುದ್ಧವಾಗಿ ನಡೆದುಕೊಂಡರೆ ಅದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತದೆ ಎಂದು ಅವರು ಹೇಳಿದರು.

ಮೊಕದ್ದಮೆಯಲ್ಲಿ ಹುರುಳಿಲ್ಲ ಹಾಗಾಗಿ ಅದನ್ನು ತಿರಸ್ಕರಿಸಬೇಕು ಎಂದ ಎಸ್‌ ಜಿ ಮೆಹ್ತಾ “ ಕೇಂದ್ರ ಸರ್ಕಾರ ಹೈಕೋರ್ಟ್‌ಗಳನ್ನು ಕೂಡ ಸ್ಥಾಪಿಸುತ್ತದೆ. ಇತ್ತೀಚೆಗೆ ಅದು ತೆಲಂಗಾಣ ಹೈಕೋರ್ಟನ್ನು ರಚಿಸಿತು. ಹಾಗೆಂದು ಅದು ಕೇಂದ್ರದ ಅಧೀನದಲ್ಲಿದೆ ಎಂದರ್ಥವಲ್ಲ. ಯಾರಾದರೂ ಅದನ್ನು ಸ್ಥಾಪಿಸಬಹುದು. ಹಾಗೆಂದು ಕೇಂದ್ರ ಸರ್ಕಾರದ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ನಿರ್ದೇಶಿಸಲಾಗದು” ಎಂದರು.

ಆಗ ಗರಂ ಆದ ನ್ಯಾಯಾಲಯ ಸಿಬಿಐ ರಚನೆಯಾದ ಮತ್ತು ಕಾರ್ಯನಿರ್ವಹಿಸುವ ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯಿದೆಯನ್ನು ಜಾರಿಗೊಳಿಸಲು ಯಾರು ಜವಾಬ್ದಾರರಾಗಿದ್ದರು ಎಂದು ಎಸ್‌ಜಿ ಅವರನ್ನು ತರಾಟೆಗೆ ತೆಗೆದುಕೊಂಡಿತು.

ಸಿಬಿಐ ನಿಯಂತ್ರಣ ಅದರ ನಿರ್ದೇಶಕರ ಕೈಯಲ್ಲಿದೆಯೇ ವಿನಾ ಕೇಂದ್ರದ ಬಳಿ ಅಲ್ಲ ಎಂದ ಎಸ್‌ಜಿ ಅವರು “ಸಿಬಿಐ ಸೂಕ್ತ ಕಾರಣಕ್ಕಾಗಿಯೇ ಪ್ರಕರಣದಲ್ಲಿ ಪಕ್ಷಕಾರನಾಗಿಲ್ಲ. ಹಾಗೆ ಪಕ್ಷಕಾರನಾಗುವುದು ಸಾಧ್ಯವಿಲ್ಲ ಎಂದ ಅದಕ್ಕೆ ಚೆನ್ನಾಗಿ ತಿಳಿದಿದೆ. ಸಿಬಿಐ ಕೇಂದ್ರದ ಪೊಲೀಸ್‌ ಪಡೆ ಎನ್ನುವುದು ವಿನಾಶಕಾರಿ ಹೇಳಿಕೆಯಾಗುತ್ತದೆ. ಸಿಬಿಐ ಹಾಗೆ ಇಲ್ಲ!" ಎಂದರು.

ಆದರೂ ಕೇಂದ್ರ ಸಚಿವಾಲಯಗಳಂತೆ ಸಿಬಿಐನ ನಿರ್ದೇಶಕರು ನೇಮಕಾತಿಗಳಿಗೆ ಅಧಿಸೂಚನೆಗಳನ್ನು ಹೊರಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿತು.

 ಎರಡೂ ಕಡೆಯವರು ತಮ್ಮ ಮರುವಾದಗಳ ಕುರಿತಂತೆ ಸಣ್ಣ ಲಿಖಿತ ಟಿಪ್ಪಣಿ ಸಲ್ಲಿಸಲು ಅವಕಾಶವಿತ್ತ ನ್ಯಾಯಾಲಯ ಮೊಕದ್ದಮೆಯ ನಿರ್ವಹಣಾರ್ಹತೆಗೆ ಸಂಬಂಧಿಸಿದಂತೆ ತೀರ್ಪು ಕಾಯ್ದಿರಿಸಿತು.