ನಿಶಿತ್ ಪ್ರಾಮಾಣಿಕ್ ಮತ್ತು ಸುಪ್ರೀಂ ಕೋರ್ಟ್
ನಿಶಿತ್ ಪ್ರಾಮಾಣಿಕ್ ಮತ್ತು ಸುಪ್ರೀಂ ಕೋರ್ಟ್ ಫೇಸ್‌ಬುಕ್‌
ಸುದ್ದಿಗಳು

ಕೇಂದ್ರ ಸಚಿವ ನಿಶಿತ್‌ ನಿರೀಕ್ಷಣಾ ಜಾಮೀನು ಅರ್ಜಿ: ಪಶ್ಚಿಮ ಬಂಗಾಳ ಸರ್ಕಾರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ

Bar & Bench

ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಕ್ರೀಡೆ ಮತ್ತು ಗೃಹ ಖಾತೆ ರಾಜ್ಯ ಸಚಿವ ನಿಶಿತ್ ಪ್ರಮಾಣಿಕ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಈ ಸಂಬಂಧ ನೋಟಿಸ್‌ ನೀಡಿದ ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಂಕಜ್ ಮಿತ್ತಲ್‌ ಅವರಿದ್ದ ಪೀಠ ನಾಳೆ (ಜನವರಿ 12) ವಿಚಾರಣೆ ನಡೆಸುವುದಾಗಿ ತಿಳಿಸಿತು.

ಬಿಜೆಪಿ ನಾಯಕ ನಿಶಿತ್‌ ಅವರ ಅಣತಿಯಂತೆ ಕೂಚ್ ಬೆಹಾರ್ ನಿವಾಸಿಯೊಬ್ಬರ ಮೇಲೆ 2018ರಲ್ಲಿ ಗುಂಡು ಹಾರಿಸಿದ್ದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಪೊಲೀಸರು ಶಸ್ತ್ರಾಸ್ತ್ರ ಕಾಯಿದೆ ಮತ್ತು ಕೊಲೆ ಯತ್ನದ ಅಪರಾಧಗಳಿಗಾಗಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ನಂತರ ನಿಶಿತ್‌ ಅವರು ಕಲ್ಕತ್ತಾ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು ನ್ಯಾಯಾಲಯ ಜನವರಿ 4ರಂದು ಪ್ರಕರಣ ಮುಂದೂಡಿತ್ತು. ಈ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯದೆದುರು ಪ್ರಸ್ತುತ ಮೇಲ್ಮನವಿ ಸಲ್ಲಿಸಲಾಗಿತ್ತು.

ಇಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ತ್ರಿವೇದಿ ಅವರು ಆರಂಭದಲ್ಲಿಯೇ ಸಚಿವ ನಿಶಿತ್‌ ಅವರು ಜಾಮೀನು ಕೋರಿ ಹೈಕೋರ್ಟ್‌ಗೆ ಏಕೆ ಹೋಗಲಿಲ್ಲ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದ ಭಯವೇಕೆ ಎಂದು ಕೇಳಿದರು.

ಬಿಜೆಪಿ ನಾಯಕನ ಪರ ಹಿರಿಯ ವಕೀಲ ಪಿ ಎಸ್ ಪಟ್ವಾಲಿಯಾ ಅವರು, ರಾಜ್ಯ ಸರ್ಕಾರ ತನ್ನ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡುವುದಕ್ಕಾಗಿ ಹೈಕೋರ್ಟ್‌ ಸರ್ಕೀಟ್‌ ಪೀಠ ಪದೇ ಪದೇ ಪ್ರಕರಣ ಮುಂದೂಡುತ್ತಿದೆ ಎಂದರು. ಅಲ್ಲದೆ ಟಿಎಂಸಿಯಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ ನಂತರ ತನ್ನ ಕಕ್ಷಿದಾರ ನಿಶಿತ್‌ ಅವರ ಮೇಲೆ ರಾಜಕೀಯ ಕಾರಣಕ್ಕೆ ಸಂಚು ರೂಪಿಸಲಾಗಿದೆ ಎಂದು ವಾದಿಸಿದರು.

ಅರ್ಜಿಯ ಪ್ರತಿಯನ್ನು ರಾಜ್ಯ ಸರ್ಕಾರಕ್ಕೆ ನೀಡುವಂತೆ ನಿರ್ದೇಶಿಸಿದ ಪೀಠ ಆರಂಭದಲ್ಲಿ ಪ್ರಕರಣವನ್ನು ಸೋಮವಾರ ಪಟ್ಟಿ ಮಾಡುವುದಾಗಿ ತಿಳಿಸಿತ್ತು.

ಆದರೆ, ಅಲ್ಲಿಯವರೆಗೆ ಮಧ್ಯಂತರ ರಕ್ಷಣೆ ನೀಡುವಂತೆ ಪಟ್ವಾಲಿಯಾ ಅವರು ಒತ್ತಾಯಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಪಶ್ಚಿಮ ಬಂಗಾಳ ರಾಜ್ಯಕ್ಕೆ ನೋಟಿಸ್ ನೀಡಿ ಪ್ರಕರಣವನ್ನು ನಾಳೆ ವಿಚಾರಣೆ ನಡೆಸಲು ನಿರ್ಧರಿಸಿತು.