hospital beds 
ಸುದ್ದಿಗಳು

ಮೊಬೈಲ್ ಬೆಳಕಿನಲ್ಲಿ ಶಸ್ತ್ರಚಿಕಿತ್ಸೆ: ಎನ್ಎಂಸಿ ತನಿಖಾ ಸಮಿತಿಗೆ ಬಾಂಬೆ ಹೈಕೋರ್ಟ್ ನೋಟಿಸ್

ವಿದ್ಯುತ್ ಇಲ್ಲದೆ ಕತ್ತಲಾವರಿಸಿದ್ದ ಸಂದರ್ಭದಲ್ಲಿ ಮೊಬೈಲ್‌ ಫ್ಲ್ಯಾಷ್‌ ಬೆಳಕಿನಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಗರ್ಭಿಣಿ ಸಾವನ್ನಪ್ಪಿದ್ದ ಪ್ರಕರಣ ಇದಾಗಿದೆ.

Bar & Bench

ಸರ್ಕಾರಿ ಹೆರಿಗೆ ಆಸ್ಪತ್ರೆಯೊಂದರಲ್ಲಿ ಮೊಬೈಲ್ ಬೆಳಕಿನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಗೃಹಿಣಿಯೊಬ್ಬರು ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ವೈದ್ಯಕೀಯ ಮಂಡಳಿ (ಎನ್‌ಎಂಸಿ), ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ನಡೆಸುವ ಜೆಜೆ ಆಸ್ಪತ್ರೆಗೆ ಬಾಂಬೆ ಹೈಕೋರ್ಟ್ ಪ್ರತಿಕ್ರಿಯೆ ಕೇಳಿ ನೋಟಿಸ್‌ ನೀಡಿದೆ.

ಮುಂಬೈನ ಭಾಂಡುಪ್‌ನಲ್ಲಿರುವ ಸುಷ್ಮಾ ಸ್ವರಾಜ್ ಸ್ಮಾರಕ ಹೆರಿಗೆ ಆಸ್ಪತ್ರೆಯಲ್ಲಿ ಪತ್ನಿ ಸಾವಿಗೀಡಾದ ಸಂಬಂಧ ಪರಿಹಾರ ನೀಡಬೇಕು ಜೊತೆಗೆ ಪ್ರಕರಣದ ಸಮಗ್ರ ತನಿಖೆಯಾಗಬೇಕು ಎಂದು ಕೋರಿ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಶಸ್ತ್ರಚಿಕಿತ್ಸೆ ವೇಳೆ ಮಗು ಕೂಡ ಬದುಕುಳಿಯಲಿಲ್ಲ.

ಗರ್ಭಿಣಿ ಹಾಗೂ ಮಗು ಸಾವನ್ನಪ್ಪಿರುವ ಬಗ್ಗೆ ತನಿಖೆ ನಡೆಸುವ ಸಮಿತಿಯಲ್ಲಿ ಜೆಜೆ ಆಸ್ಪತ್ರೆಯ ವೈದ್ಯರು ಇದ್ದಾರೆ. ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಪೃಥ್ವಿರಾಜ್ ಕೆ ಚವಾಣ್ ಅವರಿದ್ದ ಪೀಠಕ್ಕೆ ಸಮಿತಿ ವಿಚಾರಣೆ ಮುಗಿಯುವ ದಿನದ ಕುರಿತು ಮಾಹಿತಿ ನೀಡುವ ನಿರೀಕ್ಷೆ ಇದೆ.

ವೈದ್ಯಕೀಯ ನೀತಿ ನಿಯಮಗಳನ್ನು ಗಾಳಿಗೆ ತೂರುತ್ತಿರುವ ಬಗ್ಗೆ ಎನ್‌ಎಂಸಿ ಪ್ರತಿಕ್ರಿಯೆ ನೀಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಹಲವು ಬಾರಿ ಮನವಿ ಮಾಡಿದ್ದರೂ ತಮ್ಮ ಪತ್ನಿಗೆ ಸಂಬಂಧಿಸಿದ ವೈದ್ಯಕೀಯ ದಾಖಲೆಗಳನ್ನು ನೀಡದ ಆಸ್ಪತ್ರೆಯ ಬಗ್ಗೆ ಅರ್ಜಿದಾರ ಖುಸ್ರುದ್ದೀನ್ ಅನ್ಸಾರಿ ಕಳವಳ ವ್ಯಕ್ತಪಡಿಸಿದ್ದರು. ವೈದ್ಯಕೀಯ ನಿಯಮಗಳ ಪ್ರಕಾರ, ವಿನಂತಿ ಮಾಡಲಾದ 72 ಗಂಟೆಗಳ ಒಳಗೆ ವೈದ್ಯಕೀಯ ದಾಖಲೆಗಳನ್ನು ಒದಗಿಸಬೇಕು ಎಂದಿದ್ದರು.

ಅಲ್ಲದೆ ಆಸ್ಪತ್ರೆಯಲ್ಲಿ ಸಾಕಷ್ಟು ಸೌಲಭ್ಯಗಳ ಕೊರತೆಯಿತ್ತು. ಅಲ್ಲಿ ಯಾವುದೇ ಇನ್‌ವರ್ಟರ್‌ ಅಥವಾ ಜನರೇಟರ್‌ಗಳು ಲಭ್ಯವಿರಲಿಲ್ಲ. ವಿದ್ಯುತ್ ಸ್ಥಗಿತಗೊಂಡ ಪರಿಣಾಮ ವೈದ್ಯರು ಮೊಬೈಲ್ ಟಾರ್ಚ್‌ ಬೆಳಕಿನಲ್ಲಿ ಶಸ್ತ್ರಚಿಕಿತ್ಸೆ  ನಡೆಸಿದರು ಎಂದು ಅನ್ಸಾರಿ ದೂರಿದರು.

ಮಗು ಮತ್ತು ತಾಯಿ ಆರೋಗ್ಯದಿಂದಿದ್ದರೂ ಶಸ್ತ್ರಚಿಕಿತ್ಸೆ ಬಳಿಕ ಸಾವು ಸಂಭವಿಸಿದ್ದು ತಮ್ಮ ಪತ್ನಿ ಶಹೀದುನಿಸ್ಸಾ ಮರಣಕ್ಕೆ ಸಂಬಂಧಿಸಿದಂತೆ ಪರಿಹಾರ ನೀಡಬೇಕು. ಜೊತೆಗೆ ಘಟನೆಯ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಕೋರಿದ್ದಾರೆ.

ಸರ್ಕಾರಿ ಹೆರಿಗೆ ಆಸ್ಪತ್ರೆಗಳಲ್ಲಿ  ಕನಿಷ್ಠ ಮೂಲ ಸೌಕರ್ಯ ಕಲ್ಪಿಸುವ ಅಗತ್ಯವಿದೆ ಎಂದ ನ್ಯಾಯಾಲಯ ಪಾಲಿಕೆ ತೆಗೆದುಕೊಂಡ ಕ್ರಮಗಳನ್ನು ಪ್ರಶ್ನಿಸಿತು. ಆಗಸ್ಟ್ 28 ರಂದು ಮುಂದಿನ ವಿಚಾರಣೆ ವೇಳೆ ಈ ಕುರಿತು ಪಾಲಿಕೆ ಉತ್ತರ ನೀಡುವ ಸಾಧ್ಯತೆಗಳಿವೆ.