High Court of Karnataka
High Court of Karnataka 
ಸುದ್ದಿಗಳು

ಸಿಡಬ್ಲ್ಯುಸಿಗೆ ಮಕ್ಕಳನ್ನು ಒಪ್ಪಿಸುವುದರ ಕುರಿತಾದ ನಿಯಮಾವಳಿ ರೂಪಿಸಲು ಸರ್ಕಾರಕ್ಕೆ ಕೊನೆ ಅವಕಾಶ ನೀಡಿದ ಹೈಕೋರ್ಟ್‌

Siddesh M S

ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ 2015ರ ಅಡಿ ಪೋಷಕರು ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ (ಸಿಡಬ್ಲುಸಿ) ಒಪ್ಪಿಸುವುದಕ್ಕೆ ಸಂಬಂಧಿಸಿದಂತೆ ಸಮಿತಿಯು ತನಿಖೆ ಮತ್ತು ಕೌನ್ಸೆಲಿಂಗ್‌ಗೆ ಅನುಸರಿಸಬೇಕಾದ ನಿಯಮಗಳನ್ನು ರೂಪಿಸಿ ನ್ಯಾಯಾಲಯದ ಮುಂದೆ ಇಡಲು ರಾಜ್ಯ ಸರ್ಕಾರಕ್ಕೆ ಸೋಮವಾರ ಕರ್ನಾಟಕ ಹೈಕೋರ್ಟ್‌ ಕೊನೆಯ ಅವಕಾಶ ನೀಡಿದೆ.

ಲಿವ್‌-ಇನ್‌ ಸಂಬಂಧ ಹೊಂದಿದ್ದ ಜೋಡಿ ತಮ್ಮ 12 ದಿನಗಳ ಹಸುಗೂಸನ್ನು ಸಿಡಬ್ಲುಸಿಗೆ ಒಪ್ಪಿಸಿದ್ದರ ಕುರಿತಾದ ಮಾಧ್ಯಮ ವರದಿ ಆಧರಿಸಿ ಸರ್ಕಾರೇತರ ಸಂಸ್ಥೆ ಲೆಟ್ಜ್‌ಕಿಟ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರಿದ್ದ ವಿಭಾಗೀಯ ಪೀಠ ನಡೆಸಿತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲ ವಿಜಯಕುಮಾರ್‌ ಎ. ಪಾಟೀಲ್‌ ಅವರು “ಮಹಿಳಾ ಮತ್ತು ಕಲ್ಯಾಣ ಇಲಾಖೆಯ ನಿರ್ದೇಶಕರು ನ್ಯಾಯಾಲಯದ ಮುಂದೆ ಇದ್ದಾರೆ. ಕೌನ್ಸೆಲಿಂಗ್‌ಗೆ ಅನುಸರಿಸಬೇಕಾದ ಕ್ರಮಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸಲು ಕಾಲಾವಕಾಶ ನೀಡಬೇಕು. ಈ ಹಿಂದೆ ನಿಯಮವನ್ನು ರೂಪಿಸಿ ಸಂಪುಟ ಸಭೆಯ ಮುಂದಿಡಲಾಗಿತ್ತು. ಇದನ್ನು ಸಂಪುಟ ಒಪ್ಪಿರಲಿಲ್ಲ. ಹೀಗಾಗಿ, ನಿಯಮ ರೂಪಿಸಲು ತಜ್ಞರ ಸಮಿತಿ ರಚಿಸಲಾಗಿತ್ತು. ಅದನ್ನು ಪರಿಗಣಿಸಲಾಗುತ್ತಿದೆ. ಕಾನೂನು ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಭಿಪ್ರಾಯ ಪಡೆಯಬೇಕಾಗಿದೆ. ಹೀಗಾಗಿ, ಕೊನೆಯ ಬಾರಿಗೆ ಕಾಲಾವಕಾಶ ನೀಡಬೇಕು” ಎಂದು ಕೋರಿದರು.

ಇದಕ್ಕೆ ಪೀಠವು “ಬಹಳ ದಿನಗಳ ಕಾಲ ನಾವು ಈ ಮನವಿಯನ್ನು ಬಾಕಿ ಉಳಿಸಿಕೊಳ್ಳಲಾಗದು. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ನ್ಯಾಯಾಲಯದ ಮುಂದೆ ಬರಲಿ. ವಿನಾ ಕಾರಣ ಕಾಲಹರಣ ಮಾಡಲಾಗುತ್ತಿದೆ. ನೀವು ಏನನ್ನೂ ಮಾಡದೇ ಸಮಯ ಕೇಳುತ್ತಿದ್ದೀರಿ. ಹಿಂದೆ ನಾಲ್ಕು ವಾರ ಸಮಯ ಕೇಳಿದ್ದಿರಿ, ಅದನ್ನೂ ನೀಡಲಾಗಿದೆ. ಈಗಲೂ ಅದೇ ಪರಿಸ್ಥಿತಿ ಇದೆ. ಇದಕ್ಕೆ ಅವಕಾಶ ನೀಡಲಾಗದು” ಎಂದಿತು.

ಆಗ ಎಜಿಎ ಅವರು “ಕೊನೆಯ ಬಾರಿಗೆ ದಯವಿಟ್ಟು ಕಾಲಾವಕಾಶ ನೀಡಿ. ಈ ವಿಚಾರವನ್ನು ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಗಮನಕ್ಕೂ ತರಲಾಗುವುದು. ಆದೇಶ ಪಾಲನೆಯಾಗದಿದ್ದರೆ ಪ್ರಧಾನ ಕಾರ್ಯದರ್ಶಿ ಪೀಠದ ಮುಂದೆ ಹಾಜರಾಗಬೇಕು ಎಂದು ಆದೇಶಿಸಿ” ಎಂದು ಕೋರಿದರು.

ಇದನ್ನು ಪರಿಗಣಿಸಿದ ಪೀಠವು ತಿದ್ದುಪಡಿ ಮಾಡಲಾದ ನೂತನ ನಿಯಮಗಳನ್ನು ನ್ಯಾಯಾಲಯದ ಮುಂದೆ ಇಡಲು ಕೊನೆಯ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಆದೇಶದಲ್ಲಿ ಹೇಳಿದ್ದು, ವಿಚಾರಣೆಯನ್ನು ಏಪ್ರಿಲ್‌ 15ಕ್ಕೆ ಮುಂದೂಡಲಾಗಿದೆ.