Surrogacy  
ಸುದ್ದಿಗಳು

ಎರಡನೇ ಮಗುವಿಗಾಗಿ ಬಾಡಿಗೆ ತಾಯ್ತನ ಚಿಕಿತ್ಸೆಗೆ ಒಳಗಾಗಲು ಮನವಿ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್‌ ನೋಟಿಸ್‌

ಕಾಯಿದೆಯು ಅಧಿಕೃತವಾಗಿ 2022ರ ಜ.25ರಿಂದ ಜಾರಿಗೆ ಬಂದಿದೆ. ಇದರಲ್ಲಿ ಎರಡನೇ ಮಗುವಿಗೆ ಬಾಡಿಗೆ ತಾಯ್ತನ ಚಿಕಿತ್ಸೆ ಅವಕಾಶವಿಲ್ಲ. ಆದರೆ, ಕಾಯಿದೆ ಜಾರಿಗೆ ಬರುವುದಕ್ಕೆ ಮೊದಲೇ ಚಿಕಿತ್ಸೆ ಪಡೆದಿದ್ದೇವೆ ಎಂಬುದು ಅರ್ಜಿದಾರರ ವಾದ.

Bar & Bench

ಎರಡನೇ ಮಗುವಿಗಾಗಿ ಬಾಡಿಗೆ ತಾಯ್ತನದ ಚಿಕಿತ್ಸೆ ಪಡೆಯಲು ಅವಕಾಶ ನೀಡದ ಬಾಡಿಗೆ ತಾಯ್ತನ (ನಿಯಂತ್ರಣ) ಕಾಯಿದೆ-2021ರ ಸೆಕ್ಷನ್ 4 (iii) ಸಿ (II)) ರದ್ದುಪಡಿಸುವಂತೆ ಕೋರಿ ಎರಡನೇ ಮಗುವಿಗಾಗಿ ಬಾಡಿಗೆ ತಾಯ್ತನದ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ದಂಪತಿ ಸಲ್ಲಿಸಿರುವ ಅರ್ಜಿ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಬುಧವಾರ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಬೆಂಗಳೂರಿನಲ್ಲಿ ವಾಸವಾಗಿರುವ ಆಂಧ್ರಪ್ರದೇಶ ಮೂಲದ ದಂಪತಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಆರ್ ದೇವದಾಸ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ಪೀಠವು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ರಾಜ್ಯ ಆರೋಗ್ಯ ಇಲಾಖೆಯ ಬಾಡಿಗೆ ತಾಯ್ತನ ಕಾಯಿದೆಗೆ ಸಂಬಂಧಿಸಿದ ಕರ್ನಾಟಕ ರಾಜ್ಯ ಸಕ್ಷಮ ಪ್ರಾಧಿಕಾರ, ಬೆಂಗಳೂರು ಜಿಲ್ಲಾ ವೈದ್ಯಕೀಯ ಮಂಡಳಿಗೆ ನೋಟಿಸ್ ಜಾರಿಗೊಳಿಸಿತು. ಆಕ್ಷೇಪಣೆ ಸಲ್ಲಿಸಲು ಕೇಂದ್ರ ಸರ್ಕಾರದ ಪರ ವಕೀಲರು ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ಪೀಠ ವಿಚಾರಣೆಯನ್ನು ಮುಂದೂಡಿತು.

2016ರಲ್ಲಿ ದಂಪತಿ ಮದುವೆಯಾಗಿ, 2017ರಲ್ಲಿ ಸಹಜ ಗರ್ಭಧಾರಣೆ ಮೂಲಕ ಅವರಿಗೆ ಗಂಡು ಮಗು ಜನಿಸಿತ್ತು. ವೈದ್ಯಕೀಯ ಕಾರಣಗಳಿಂದಾಗಿ ಎರಡನೇ ಗರ್ಭಧಾರಣೆ ಸಾಧ್ಯವಾಗಿಲ್ಲ. 2019ರಲ್ಲಿ ಗರ್ಭಪಾತವಾಗಿತ್ತು. 2021ರ ಜೂನ್‌ನಲ್ಲಿ ಬಾಡಿಗೆ ತಾಯ್ತನದ ಚಿಕಿತ್ಸೆ ಆರಂಭಿಸಿದ್ದರು. ಅದಕ್ಕಾಗಿ ಅಗತ್ಯ ವೈದ್ಯಕೀಯ ತಪಾಸಣೆಗಳು ಮತ್ತಿತರ ಪ್ರಕ್ರಿಯೆಗಳನ್ನು ಪೂರೈಸಿ ಹಣ ಸಹ ಪಾವತಿಸಿದ್ದರು. 2021 ಡಿಸೆಂಬರ್‌ಗೆ ಎಲ್ಲಾ ಪ್ರಕ್ರಿಯೆಗಳು ಮಗಿಸಲಾಗಿದೆ. ಈ ಮಧ್ಯೆ ಬಾಡಿಗೆ ತಾಯ್ತನ ನಿಯಂತ್ರಣ ಕಾಯಿದೆ-2021 ಅಧಿಕೃತವಾಗಿ 2022ರ ಜನವರಿ 25ರಿಂದ ಜಾರಿಗೆ ಬಂದಿದೆ. ಅದರಲ್ಲಿ ಎರಡನೇ ಮಗುವಿಗಾಗಿ ಬಾಡಿಗೆ ತಾಯ್ತನ ಚಿಕಿತ್ಸೆಗೆ ಅವಕಾಶ ಇಲ್ಲ. ಆದರೆ, ಕಾಯಿದೆ ಜಾರಿಗೆ ಬರುವುದಕ್ಕೆ ಮೊದಲೇ ನಾವು ಚಿಕಿತ್ಸೆ ಪಡೆದುಕೊಂಡಿದ್ದೇವೆ ಎಂದು ದಂಪತಿ ಅರ್ಜಿಯಲ್ಲಿ ವಿವರಿಸಿದ್ದಾರೆ.

ಆದ್ದರಿಂದ ಎರಡನೇ ಮಗುವಿಗಾಗಿ ಬಾಡಿಗೆ ತಾಯ್ತನದ ಚಿಕಿತ್ಸೆ ಪಡೆಯಲು ಅವಕಾಶ ನೀಡದ ‘ಬಾಡಿಗೆ ತಾಯ್ತನ (ನಿಯಂತ್ರಣ) ಕಾಯಿದೆ-2021ರ ಸೆಕ್ಷನ್ 4 (iii) ಸಿ (II)) ರದ್ದುಪಡಿಸಬೇಕು. ಅಲ್ಲದೆ, ಕಾಯಿದೆಯ ನಿಯಮಗಳನ್ನು ಪಾಲಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಬಾಡಿಗೆ ತಾಯ್ತನ ಪ್ರಮಾಣಪತ್ರ ಹಾಗೂ ಇತರೆ ಅರ್ಹತಾ ಪ್ರಮಾಣಪತ್ರಗಳನ್ನು ಒದಗಿಸುವಂತೆ ಸಕ್ಷಮ ಪ್ರಾಧಿಕಾರ ಹಾಗೂ ಜಿಲ್ಲಾ ವೈದ್ಯಕೀಯ ಮಂಡಳಿಗೆ ನಿರ್ದೇಶನ ನೀಡಬೇಕು. ಎರಡನೇ ಮಗು ಪಡೆದುಕೊಳ್ಳಲು ಬಾಡಿಗೆ ತಾಯ್ತನ ಚಿಕಿತ್ಸೆಗೆ ಒಳಗಾಗಲು ತಮಗೆ ಅವಕಾಶ ಮಾಡಿಕೊಡಬೇಕು ಎಂದು ಅರ್ಜಿದಾರ ದಂಪತಿ ಮನವಿ ಮಾಡಿದ್ದಾರೆ.