ಬಿಜೆಪಿ 
ಸುದ್ದಿಗಳು

ರಾಘವ್ ಚಡ್ಡಾ ಅಮಾನತಿಗೆ ಪ್ರತಿಕ್ರಿಯೆಯಾಗಿ ತಮ್ಮ ಅಮಾನತು: ಬಿಜೆಪಿ ಶಾಸಕರ ಅಳಲು; ಸ್ಪೀಕರ್‌ ಭೇಟಿಗೆ ಹೈಕೋರ್ಟ್ ಸೂಚನೆ

ರಾಘವ್ ಚಡ್ಡಾ ಅವರನ್ನು ಸಂಸತ್ತಿನಿಂದ ಅಮಾನತುಗೊಳಿಸಿದ್ದಕ್ಕೆ ತಮ್ಮ ಅಮಾನತನ್ನು ಹೋಲಿಸಲಾಗುತ್ತಿದ್ದು ಎಎಪಿ ಇದನ್ನು ರಾಜಕೀಯಗೊಳಿಸುತ್ತಿದೆ ಎಂದು ಬಿಜೆಪಿ ಶಾಸಕರು ಹೇಳಿದ್ದಾರೆ.

Bar & Bench

ಎಎಪಿ ಸಂಸದ ರಾಘವ್ ಚಡ್ಡಾ ಅವರನ್ನು ಸಂಸತ್ತಿನಿಂದ ಅಮಾನತುಗೊಳಿಸಿದ್ದಕ್ಕೆ ಹೋಲಿಸುವ ಮೂಲಕ ಆಡಳಿತಾರೂಢ ಎಎಪಿ ತಮ್ಮನ್ನು ಅಮಾನತುಗೊಳಿಸಿರುವ ಘಟನೆಗೆ ರಾಜಕೀಯ ಬಣ್ಣ ನೀಡುತ್ತಿದೆ ಎಂದು ದೆಹಲಿ ವಿಧಾನಸಭೆಯಿಂದ ಅಮಾನತುಗೊಂಡಿರುವ ಬಿಜೆಪಿ ಶಾಸಕರು ಬುಧವಾರ ದೆಹಲಿ ಹೈಕೋರ್ಟ್‌ ಮುಂದೆ ಅಲವತ್ತುಕೊಂಡಿದ್ದಾರೆ.

70 ಸದಸ್ಯರಿರುವ ದೆಹಲಿ ವಿಧಾನಸಭೆಯಲ್ಲಿ ಬಿಜೆಪಿ ಎಂಟು ಶಾಸಕರನ್ನು ಹೊಂದಿದೆ. ಲೆಫ್ಟಿನೆಂಟ್ ಗವರ್ನರ್ ಅವರ ಭಾಷಣಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಏಳು ಬಿಜೆಪಿ ಶಾಸಕರನ್ನು ಅಮಾನತುಗೊಳಿಸಲಾಗಿದೆ.

ವಿಜೇಂದರ್ ಗುಪ್ತಾ, ಅಜಯ್ ಕುಮಾರ್ ಮಹಾವರ್, ಅನಿಲ್ ಕುಮಾರ್ ಬಾಜಪೇಯಿ, ಓಂ ಪ್ರಕಾಶ್ ಶರ್ಮಾ, ಜಿತೇಂದರ್ ಮಹಾಜನ್, ಮೋಹನ್ ಸಿಂಗ್ ಬಿಶ್ತ್ ಮತ್ತು ಅಭಯ್ ವರ್ಮಾ ಅವರನ್ನು ಅಮಾನತು ಮಾಡಲಾಗಿದೆ.

ಕೆಲ ಬಿಜೆಪಿ ಶಾಸಕರ ಪರವಾಗಿ ಹಿರಿಯ ವಕೀಲರಾದ ಜಯಂತ್ ಮೆಹ್ತಾ ಮತ್ತು ಕೀರ್ತಿ ಉಪ್ಪಲ್ ಅವರು ವಾದ ಮಂಡಿಸಿದರು. ಲೆಫ್ಟಿನೆಂಟ್‌ ಗವರ್ನರ್‌ ಅವರ ಭಾಷಣಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ತಮ್ಮನ್ನು ಅಮಾನತು ಮಾಡಲಾಗಿದೆ ಎಂದು ಹೇಳಲಾಗಿದೆಯಾದರೂ ಆಪ್‌ನ ಕೆಲವು ಶಾಸಕರು ಈ ಘಟನೆಯನ್ನು ಲೋಕಸಭೆಯಲ್ಲಿ ಆಪ್‌ನ ಸಂಸದ ರಾಘವ್‌ ಚಡ್ಡಾ ಅವರನ್ನು ಅಮಾನತು ಮಾಡಿದ್ದ ಘಟನೆಗೆ ಹೋಲಿಸಿದ್ದಾರೆ. ಅಲ್ಲದೆ, ಚಡ್ಡಾಗೆ ಆದದ್ದು ತನ್ನ ಶಾಸಕರಿಗೆ ಆದಾಗ ಬಿಜೆಪಿ ಏಕೆ ವಿಚಲಿತವಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ ಎಂದು ನ್ಯಾಯಾಲಯದ ಗಮನ ಸೆಳೆಯುವ ಪ್ರಯತ್ನ ಮಾಡಿದರು.

ವಾದ ಆಲಿಸಿದ ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ಅವರು ಇಂದು ಸ್ಪೀಕರ್‌ ಅವರನ್ನು ಭೇಟಿಯಾಗುವಂತೆ ಬಿಜೆಪಿ ಶಾಸಕರಿಗೆ ಸೂಚನೆ ನೀಡಿದರು.

ಸಭೆಯ ಸ್ವರೂಪ ಅಥವಾ ಚರ್ಚೆಯ ಬಗ್ಗೆ ತಾನು ಏನನ್ನೂ ಹೇಳುವುದಿಲ್ಲ. ಆದರೆ ಶಾಸಕರು ಹೋಗಿ ಸ್ಪೀಕರ್ ಅವರನ್ನು ಭೇಟಿ ಮಾಡಬೇಕು ಎಂದು ಏಕಸದಸ್ಯ ಪೀಠ ಸ್ಪಷ್ಟಪಡಿಸಿತು.

ಒಂದು ವೇಳೆ ಸಮಸ್ಯೆ ಬಗೆಹರಿಯದಿದ್ದರೆ, ನಾಳೆ (ಗುರುವಾರ) ಮಧ್ಯಾಹ್ನ 12 ಗಂಟೆಗೆ ಪ್ರಕರಣ ಆಲಿಸುವುದಾಗಿ ನ್ಯಾಯಮೂರ್ತಿ ಪ್ರಸಾದ್ ತಿಳಿಸಿದರು.