ಸುವಿಧಾ ಗೃಹ ನಿರ್ಮಾಣ ಅಕ್ರಮಗಳಿಗೆ ಸಂಬಂಧಿಸಿದಂತೆ ಕರಾವಳಿಯ ಉದ್ಯಮಿ ವಿಲಾಸ್ ನಾಯಕ್ ಮತ್ತು ಅವರ ತಾಯಿ ವೀಣಾ ಜೆ ನಾಯಕ್ ಅವರ ಬಂಧನಕ್ಕೆ ಉಡುಪಿಯ ಗ್ರಾಹಕ ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿದೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೂಲಕ ಬಂಧನ ವಾರೆಂಟ್ ಜಾರಿ ಮಾಡಲು ಆದೇಶಿಸಲಾಗಿದೆ.
ಉಡುಪಿಯ ಸುವಿಧಾ ಹೋಮ್ಸ್ ಎರಡನೇ ಹಂತದ ವಸತಿ ಸಮುಚ್ಚಯದ ನಿರ್ಮಾಣದಲ್ಲಿ ಉಂಟಾಗುತ್ತಿರುವ ವಿಳಂಬ, ಕಳಪೆ ಕಾಮಗಾರಿ ಮತ್ತಿತರ ದೂರಿಗೆ ಸಂಬಂಧಿಸಿದಂತೆ ಕೆಲವರು ಉಡುಪಿ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ್ದ ಉಡುಪಿ ಗ್ರಾಹಕ ನ್ಯಾಯಾಲಯ 2019ರ ನವೆಂಬರ್‌ನಲ್ಲಿ ಐದು ಮಂದಿ ಗ್ರಾಹಕರಿಗೆ ತಲಾ ಸುಮಾರು 15 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ವೀಣಾ ಜಿ. ನಾಯಕ್, ವಿಲಾಸ್ ನಾಯಕ್ ಮತ್ತಿತರಿಗೆ ಆದೇಶ ಹೊರಡಿಸಿತ್ತು.
ಆದರೆ ಈ ಬಗ್ಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸದೇ ಇದ್ದುದರಿಂದ ಐವರು ಅರ್ಜಿದಾರರು ಮತ್ತೆ ಉಡುಪಿ ನ್ಯಾಯಾಲಯದ ಮೆಟ್ಟಿಲೇರಿ ಆದೇಶ ಜಾರಿಗೊಳಿಸುವಂತೆ ಮರು ಅರ್ಜಿ ಸಲ್ಲಿಸಿದ್ದರು. ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಒಂದು ವರ್ಷ ಕಾಲ ನ್ಯಾಯಾಲಯ ಕಾರ್ಯಕಲಾಪ ವಿಳಂಬವಾಗಿತ್ತು. ಪರಿಹಾರದ ಮೊತ್ತ ನೀಡಲು ಉದ್ಯಮಿ ವಿಲಾಸ್ ನಾಯಕ್ ಮತ್ತು ವೀಣಾ ಜಿ. ನಾಯಕ್ ಅವರು ಹಿಂದೇಟು ಹಾಕಿದ್ದು, ಇದನ್ನು ಪರಿಗಣಿಸಿದ ಗ್ರಾಹಕ ನ್ಯಾಯಾಲಯ, ವಿಲಾಸ್ ನಾಯಕ್ ಹಾಗೂ ಇತರರ ಬಂಧನಕ್ಕೆ ವಾರೆಂಟ್ ಜಾರಿಗೊಳಿಸಿದೆ.
ಈ ಮಧ್ಯೆ, ವಿಲಾಸ್ ನಾಯಕ್ ಮತ್ತಿತರರು ರಾಜ್ಯ ಗ್ರಾಹಕ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದು ಇದುವರೆಗೆ ಉಡುಪಿ ನ್ಯಾಯಾಲಯದ ಕಾರ್ಯಕಲಾಪಕ್ಕೆ ತಡೆಯಾಜ್ಞೆ ಪಡೆಯಲು ಸಾಧ್ಯವಾಗಿಲ್ಲ. ಇಬ್ಬರು ಗ್ರಾಹಕರ ಪರವಾಗಿ ಮಂಗಳೂರಿನ ನ್ಯಾಯವಾದಿ ಶ್ರೀಪತಿ ಪ್ರಭು ವಾದ ಮಂಡಿಸಿದ್ದರು.