Kerala HC, Gold, UAPA 
ಸುದ್ದಿಗಳು

ಚಿನ್ನ ಕಳ್ಳಸಾಗಣೆಯಿಂದ ಆರ್ಥಿಕ ಭದ್ರತೆಗೆ ಬೆದರಿಕೆ; ಆದರೆ ಯುಎಪಿಎ ಅಡಿ ಭಯೋತ್ಪಾದಕ ಕೃತ್ಯವಲ್ಲ ಎಂದ ಕೇರಳ ಹೈಕೋರ್ಟ್

ಚಿನ್ನದ ಕಳ್ಳಸಾಗಣೆ ರಾಷ್ಟ್ರದ ಆರ್ಥಿಕ ಭದ್ರತೆಗೆ ಅಪಾಯವನ್ನುಂಟುಮಾಡುತ್ತದೆ. ಆದರೆ ಯುಎಪಿಎ ವ್ಯಾಪ್ತಿಗೆ ಇದು ಒಳಪಡುತ್ತದೆಯೇ ಎಂಬ ಬಗ್ಗೆ ಸಂಸತ್ತು ಆಲೋಚಿಸಿರಲಿಲ್ಲ ಎಂದು ನ್ಯಾಯಾಲಯ ಹೇಳಿದೆ.

Bar & Bench

ದೇಶದ ಆರ್ಥಿಕ ಭದ್ರತೆಗೆ ಚಿನ್ನ ಕಳ್ಳಸಾಗಣೆ ಅಪಾಯ ಉಂಟು ಮಾಡಬಹುದಾದರೂ ಅದು ಕಾನೂನುಬಾಹಿರ ಚಟುವಟಿಕೆಗಳತಡೆ ಕಾಯಿದೆಯ (ಯುಎಪಿಎ) ನಿಯಮಗಳಿಗೆ ಒಳಪಡುವುದಿಲ್ಲ ಎಂದು ಕೇರಳ ಹೈಕೋರ್ಟ್‌ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ.

2020ರ ಕುಖ್ಯಾತ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಪ್ನಾ ಸುರೇಶ್ ಮತ್ತು ಇತರ ಏಳು ಆರೋಪಿಗಳಿಗೆ ಜಾಮೀನು ನೀಡುವ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಕೆ ವಿನೋದ್ ಚಂದ್ರನ್ ಮತ್ತು ಸಿ ಜಯಚಂದ್ರನ್ ಅವರಿದ್ದ ವಿಭಾಗೀಯ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಚಿನ್ನದ ಕಳ್ಳಸಾಗಣೆಯಿಂದ ರಾಷ್ಟ್ರದ ಆರ್ಥಿಕ ಭದ್ರತೆಗೆ ಅಪಾಯ ಉಂಟಾಗುತ್ತದೆ. ಆದರೆ ಯುಎಪಿಎ ವ್ಯಾಪ್ತಿಗೆ ಇದು ಒಳಪಡುತ್ತದೆಯೇ ಎಂಬುದನ್ನು ಕಾಯಿದೆಗೆ ತಿದ್ದುಪಡಿ ತಂದು 15 (1) (ಎ) (iii ಎ) ಸೆಕ್ಷನ್‌ ಅನ್ನು ಸೇರಿಸುವ ಸಂದರ್ಭದಲ್ಲಿ ಸಂಸತ್ತು ಆಲೋಚಿಸಿರಲಿಲ್ಲ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಾಲಯದ ಪ್ರಮುಖ ಅವಲೋಕನಗಳು

  • ವಾಸ್ತವವಾಗಿ ನಮ್ಮ ವಿನಮ್ರ ದೃಷ್ಟಿಯಲ್ಲಿ ಆರ್ಥಿಕತೆ ಅಸ್ಥಿರಗೊಳಿಸುವ ಗುರಿಯುಳ್ಳ ಚಿನ್ನ ಮತ್ತಿತರ ಬೆಲೆ ಬಾಳುವ ಲೋಹಗಳ ಕಳ್ಳಸಾಗಣೆ ಆರ್ಥಿಕ ಭದ್ರತೆಗೆ ಬೆದರಿಕೆ ಒಡ್ಡುತ್ತದೆ ಎಂದು ಸಾಮಾನ್ಯವಾಗಿ ಅರ್ಥಮಾಡಿಕೊಳ್ಳಲಾಗಿದೆ. ಮಸೂದೆ ಮಂಡಿಸುವಾಗ ಈ ಅಂಶವನ್ನು (ಭಯೋತ್ಪಾದನಾ ಕೃತ್ಯ) ಸಂಸತ್ತು ಆಲೋಚಿಸಿಲ್ಲ, ಇದು ಚರ್ಚೆಗಳಿಂದ ಸ್ಪಷ್ಟವಾಗಿದೆ…

  • ಹಿಂಸಾತ್ಮಕ ವಿಧ್ವಂಸಕ ಕೃತ್ಯದಿಂದ ಆರ್ಥಿಕತೆಯನ್ನು ಅಸ್ಥಿರಗೊಳಿಸುವ ಕೃತ್ಯಗಳು ಪ್ರತ್ಯೇಕಿಸಲ್ಪಟ್ಟಿದ್ದು ಅದನ್ನು ಕೂಡ ದೇಶದ ವಿರುದ್ಧದ ವಿಧ್ವಂಸಕ ಕೃತ್ಯವೆಂದು ಪರಿಗಣಿಸಬಹುದಾಗಿದೆ. ಭಯೋತ್ಪಾದನೆಯ ವ್ಯಾಖ್ಯಾನವನ್ನು ವಿಸ್ತರಿಸಿ ಆರ್ಥಿಕತೆಯನ್ನು ಅಸ್ಥಿರಗೊಳಿಸುವ ಕೃತ್ಯಗಳನ್ನು ಅದರ ವ್ಯಾಪ್ತಿಗೆ ತರಲು ಖಂಡಿತವಾಗಿಯೂ ಸಂಸತ್ತಿಗೆ ಅಧಿಕಾರವಿತ್ತು. ಆದರೆ, ಸಂಸತ್ತು 15(1)ನೇ ಸೆಕ್ಷನ್‌ನಲ್ಲಿ ಆರ್ಥಿಕ ಭದ್ರತೆಯನ್ನು ಸೇರಿಸುವ ಮೂಲಕ ಮತ್ತು ತಿದ್ದುಪಡಿ ಕಾಯಿದೆಯ ಮೂಲಕ ಷರತ್ತಿನ (ಎ) ಉಪ-ಕಲಂ (iiIA) ಅನ್ನು ಏಕಕಾಲದಲ್ಲಿ ಸೇರಿಸಿ ಖೋಟಾನೋಟು, ನಾಣ್ಯ ಚಲಾವಣೆ ಆರ್ಥಿಕತೆಯನ್ನು ಅಸ್ಥಿರಗೊಳಿಸುವ ಕೃತ್ಯಗಳನ್ನು ಮಾತ್ರವೇ ಭಯೋತ್ಪಾದನೆಯ ವ್ಯಾಖ್ಯಾನದಡಿ ತಂದಿದೆ.

  • ದೇಶದ ಆರ್ಥಿಕ ಭದ್ರತೆಗೆ ಧಕ್ಕೆ ತರುವ ಉದ್ದೇಶದಿಂದಲ್ಲದೆ ಮಾಡುವ, ಸುಂಕ ಕಾಯಿದೆಯಡಿ ಬರುವ ಚಿನ್ನ ಕಳ್ಳಸಾಗಣೆಯು ಯುಎಪಿಎ ಅಡಿ "ಭಯೋತ್ಪಾದನಾ ಕೃತ್ಯ"ದ ವ್ಯಾಪ್ತಿಗೆ ಬರುವುದಿಲ್ಲ ಎಂದು ಅಭಿಪ್ರಾಯಪಟ್ಟ ಪೀಠ.

  • ಕಾಯಿದೆಯಲ್ಲಿನ ಪ್ರಸ್ತುತ ವ್ಯಾಖ್ಯಾನವನ್ನು ವಿಸ್ತರಿಸುವುದು ಸಂಸತ್ತಿನ ಉದ್ದೇಶವನ್ನು ದುರ್ಬಲಗೊಳಿಸುತ್ತದೆ. ಹಾಗೆ ಮಾಡಿದರೆ ನಾವು ಮಥಾಯ್ ವರ್ಗೀಸ್ ಪ್ರಕರಣದ ತೀರ್ಪನ್ನು ಉಲ್ಲಂಘಿಸಿದಂತಾಗುತ್ತದೆ ಮತ್ತು ಶಾಸಕಾಂಗ ಮಾಡಬೇಕಿದ್ದ ಕಾಯಿದೆಯ ನಿಯಮಕ್ಕೆ ಹೊಸ ರೂಪ ನೀಡಬೇಕಾಗುತ್ತದೆ, ಮರು ವಿನ್ಯಾಸಗೊಳಿಸಬೇಕಾಗುತ್ತದೆ ಹಾಗೂ ಪುನಾರಚಿಸಬೇಕಾಗುತ್ತದೆ. ಅದನ್ನು ಮಾಡಲು ಈ ನ್ಯಾಯಾಲಯ, ಮತ್ತಾವುದೇ ನ್ಯಾಯಾಲಯಕ್ಕೆ ಅಧಿಕಾರವಿಲ್ಲ.

  • ಸಂಸತ್ತಿನ ಚರ್ಚೆಗಳನ್ನು ಅಧ್ಯಯನ ಮಾಡಿ ಮತ್ತು ಸೆಕ್ಷನ್‌ 15 (1)ನೇ ನಿಯಮ ಅಧ್ಯಯನ ಮಾಡಿ ಷರತ್ತುಗಳನ್ನು ಓದಿದಾಗ ಮುಹಮ್ಮದ್‌ ಶಾಫಿ ಪ್ರಕರಣಕ್ಕಿಂತ ಇದು ಭಿನ್ನವಾಗಿರಲು ಯಾವುದೇ ಕಾರಣ ಕಂಡುಬಂದಿಲ್ಲ.

ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಸ್ವಪ್ನಾ ಸುರೇಶ್‌ ಮತ್ತಿತರರ ಜಾಮೀನು ಅರ್ಜಿಗಳನ್ನು ಪುರಸ್ಕರಿಸಿತು.