Swiggy 
ಸುದ್ದಿಗಳು

ರೆಸ್ಟರಂಟ್‌ ಒಕ್ಕೂಟದೊಂದಿಗೆ ಗೌಪ್ಯ ಮಾಹಿತಿ ಹಂಚಿಕೊಳ್ಳುವ ಸಿಸಿಐ ಅದೇಶದ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ ಸ್ವಿಗ್ಗಿ

ಸ್ವಿಗ್ಗಿ ಮತ್ತು ಜೊಮ್ಯಾಟೊ ಸ್ಪರ್ಧಾ ವಿರೋಧಿ ಚಟುವಟಿಕೆಯಲ್ಲಿ ತೊಡಗಿವೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಸಿಐನ ಮಹಾನಿರ್ದೇಶಕರಿಗೆ (ತನಿಖೆ) ಸ್ವಿಗ್ಗಿಯು ಮಾಹಿತಿ ನೀಡಿತ್ತು.

Bar & Bench

ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ಭಾರತೀಯ ರಾಷ್ಟ್ರೀಯ ರೆಸ್ಟರಂಟ್‌ ಒಕ್ಕೂಟದ (ಎನ್‌ಆರ್‌ಎಐ) ಪ್ರತಿನಿಧಿಗಳೊಂದಿಗೆ ಆಹಾರ ಪೂರೈಕೆ ಅಪ್ಲಿಕೇಶನ್‌ ಸ್ವಿಗ್ಗಿಯ ಗೋಪ್ಯ ಮಾಹಿತಿ ಹಂಚಿಕೊಳ್ಳಲು ನಿರ್ಧರಿಸಿದ್ದ ಏಪ್ರಿಲ್‌ 24ರ ಆದೇಶವನ್ನು ಆಕ್ಷೇಪಿಸಿ ಸ್ವಿಗ್ಗಿಯು ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದೆ.

ಸ್ವಿಗ್ಗಿ ಮತ್ತು ಜೊಮ್ಯಾಟೊ ಸ್ಪರ್ಧಾ ವಿರೋಧಿ ಚಟುವಟಿಕೆಯಲ್ಲಿ ತೊಡಗಿವೆ ಎಂಬ ಎನ್‌ಆರ್‌ಎಐ ಆರೋಪದ ಭಾಗವಾಗಿ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಸಿಸಿಐನ ಮಹಾನಿರ್ದೇಶಕರಿಗೆ (ತನಿಖೆ) ಸ್ವಿಗ್ಗಿಯು ಗೌಪ್ಯ ಮಾಹಿತಿ ನೀಡಿತ್ತು.  

ಅತ್ಯಂತ ಗೌಪ್ಯವಾದ ಮಾಹಿತಿಯು ಸಿಸಿಐಯು ಎನ್‌ಆರ್‌ಎಐಗೆ ನೀಡಲು ಮುಂದಾಗಿರುವುದು ಸ್ವೇಚ್ಛೆ, ಅಸಮರ್ಥನೀಯವಾಗಿದೆ. ಅಲ್ಲದೇ, ಇದು ಸ್ಪರ್ಧಾ ಕಾಯಿದೆ ವಿರೋಧಿ ನಡೆಯಾಗಿದ್ದು, ಇದು ಸ್ವಿಗ್ಗಿಗೆ ಸರಿಪಡಿಸಲಾಗದ ಸಮಸ್ಯೆ ಉಂಟು ಮಾಡಲಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಪ್ರಕರಣದ ವಿಚಾರಣೆಯನ್ನು ಮಂಗಳವಾರ ನ್ಯಾಯಮೂರ್ತಿ ಎಂ ಜಿ ಎಸ್‌ ಕಮಲ್‌ ಅವರ ರಜಾಕಾಲೀನ ಏಕಸದಸ್ಯ ಪೀಠವು ಕೆಲಕಾಲ ನಡೆಸಿತು. ಈ ಪ್ರಕರಣವನ್ನು ದೆಹಲಿಯಲ್ಲಿ ಸಿಸಿಐ ನಡೆಸಿರುವುದರಿಂದ ಅದರ ವಿಚಾರಣಾ ವ್ಯಾಪ್ತಿ ಕರ್ನಾಟಕ ಹೈಕೋರ್ಟ್‌ಗೆ ಇದೆಯೇ ಎಂದು ಪೀಠ ಪ್ರಶ್ನಿಸಿತು.

ಸ್ವಿಗ್ಗಿ ಪರವಾಗಿ ವಾದಿಸಿದ ಹಿರಿಯ ವಕೀಲ ಸಜನ್‌ ಪೂವಯ್ಯ ಅವರು ಸಿಸಿಐ ರಾಷ್ಟ್ರೀಯ ಸಂಸ್ಥೆಯಾಗಿರುವುದರಿಂದ ಕರ್ನಾಟಕ ಹೈಕೋರ್ಟ್‌ ವಿಚಾರಣಾ ವ್ಯಾಪ್ತಿ ಹೊಂದಿದೆ ಎಂದರು.

ಸ್ವಿಗ್ಗಿಯು ತನ್ನ ಅರ್ಜಿಯಲ್ಲಿ ತನ್ನ ನೋಂದಾಯಿತ ಕಚೇರಿಯು ಬೆಂಗಳೂರಿನಲ್ಲಿದ್ದು, ಬೆಂಗಳೂರಿನ ಮಹಾನಿರ್ದೇಶಕರ ಕಚೇರಿಯಿಂದ ಪತ್ರ ಬಂದಿದೆ. ಹೀಗಾಗಿ, ಬೆಂಗಳೂರಿನಲ್ಲಿಯೇ ಕ್ರಮಕ್ಕೆ ಮುಂದಾಗಬೇಕಿದೆ ಎಂದು ವಿವರಿಸಿದೆ.

ವಿಚಾರಣಾ ವ್ಯಾಪ್ತಿಯ ಕುರಿತಾದ ಪ್ರಶ್ನೆ ಎದ್ದಿರುವ ಹಿನ್ನೆಲೆಯಲ್ಲಿ ನಾಳೆ ಅರ್ಜಿಯ ವಿಚಾರಣೆ ಮುಂದುವರಿಯಲಿದೆ.

ಸಿಸಿಐ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎನ್‌ ವೆಂಕಟರಾಮನ್‌ ನೋಟಿಸ್‌ ಪಡೆದಿದ್ದಾರೆ. ಎನ್‌ಆರ್‌ಎಐ ಮತ್ತು ಜೊಮ್ಯಾಟೊಗೆ ಅರ್ಜಿಯ ಪ್ರತಿ ಹಂಚುವುದಾಗಿ ಸ್ವಿಗ್ಗಿ ವಕೀಲರು ತಿಳಿಸಿದರು.

ಎನ್‌ಆರ್‌ಎಐ (ರೆಸ್ಟರಂಟ್ ಒಕ್ಕೂಟ ಮತ್ತು ಕ್ಲೌಡ್ ಕಿಚೆನ್‌ಗಳು ಸ್ವಿಗ್ಗಿ ಮತ್ತು ಜೊಮ್ಯಾಟೊ ಜೊತೆ ಒಪ್ಪಂದ ಮಾಡಿಕೊಂಡಿದೆ) 2021ರಲ್ಲಿ ಸಿಸಿಐಗೆ ದೂರು ನೀಡಿತ್ತು. ಸ್ವಿಗ್ಗಿ ಮತ್ತು ಜೊಮ್ಯಾಟೊ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಿರುವುದರಿಂದ ಅವುಗಳು ನಗಣ್ಯವಾಗಿ ಪರಿಗಣಿಸಲಾಗದ ಪಾಲುದಾರರಾಗಿದ್ದಾರೆ ಎಂದು ಎನ್‌ಆರ್‌ಎಐ ವಾದಿಸಿತ್ತು.