Bengaluru Karaga procession 
ಸುದ್ದಿಗಳು

ಭಕ್ತರ ಭಾವನೆಗಳ ಜೊತೆ ತಹಶೀಲ್ದಾರ್‌ ಚೆಲ್ಲಾಟಕ್ಕೆ ಹೈಕೋರ್ಟ್‌ ಕಿಡಿ: ರಮೇಶ್‌ಗೆ ಆನೇಕಲ್‌ ಕರಗ ಹೊರುವ ಅವಕಾಶ

ಉಭಯ ಬಣಗಳ ಮುಸುಕಿನ ಗುದ್ದಾಟವು ಅಹಿತಕರ ಬೆಳವಣಿಗೆಗೆ ಅವಕಾಶವಾಗದಂತೆ ಸ್ಥಳೀಯ ಪೊಲೀಸರು ಕರಗಕ್ಕೆ ಭದ್ರತೆ ಒದಗಿಸಬೇಕು ಎಂದಿರುವ ನ್ಯಾಯಾಲಯ.

Bar & Bench

ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲ್ಲೂಕಿನಲ್ಲಿ ಏಪ್ರಿಲ್‌ 12ರಂದು ನಡೆಯುವ ಕರಗ ಮಹೋತ್ಸವವನ್ನು ಪೂಜಾರಿ ಅರ್ಜುನಪ್ಪ ಪುತ್ರ ರಮೇಶ್‌ ನಡೆಸಲು ಅನುಮತಿಸಿ ಕರ್ನಾಟಕ ಹೈಕೋರ್ಟ್‌ ಬುಧವಾರ ಆದೇಶಿಸಿದೆ. ನ್ಯಾಯಾಲಯದ ಆದೇಶಗಳಿಗೆ ವಿರುದ್ಧವಾದ ನಿಲುವು ಕೈಗೊಂಡಿದ್ದ ಆನೇಕಲ್‌ ತಹಶೀಲ್ದಾರ್‌ ನಿಲುವನ್ನು ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.

ಪ್ರಸಕ್ತ ಸಾಲಿನ ಕರಗ ಮಹೋತ್ಸವ ಮುನ್ನಡೆಸಲು ತನಗೆ ಅನುಮತಿಸಬೇಕು ಎಂದು ಕೋರಿ ಚಂದ್ರಪ್ಪ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಸಾರಸಗಟಾಗಿ ತಿರಸ್ಕರಿಸಿದೆ.

“ಈ ಹಿಂದೆ ಮಾಡಿರುವ ಎಲ್ಲಾ ಆದೇಶಗಳನ್ನು ನೋಡಿಯೂ ತಹಶೀಲ್ದಾರ್‌ ಅದಕ್ಕೆ ವಿರುದ್ಧವಾದ ಆದೇಶ ಮಾಡಿದ್ದಾರೆ. ಹಿಂದೆ ಕರಗ ನಡೆಸಲು ರಮೇಶ್‌ಗೆ ಅವಕಾಶ ನೀಡಲಾಗಿದ್ದು, ಯಶಸ್ವಿಯಾಗಿ ನಿಭಾಯಿಸಲು ಅವರು ವಿಫಲರಾಗಿದ್ದಾರೆ ಎಂದು ತಹಶೀಲ್ದಾರ್‌ ಹೇಳಿದ್ದಾರೆ. ರಮೇಶ್‌ರಿಂದ ಹಕ್ಕು ಕಸಿಯಲು ಅದೊಂದು ಆಧಾರವಾಗಬಹುದು. ಆದರೆ, ಆ ಸಂದರ್ಭದಲ್ಲಿ ಅಹಿತಕರ ಘಟನೆ ನಡೆದು, ಸಾರ್ವಜನಿಕರಿಗೆ ಸಮಸ್ಯೆಯಾದರೆ ಅದಕ್ಕೆ ರಮೇಶ್‌ ಜವಾಬ್ದಾರರಾಗುತ್ತಾರೆ. ಸಮರ್ಥನೀಯ ಕಾರಣ ನೀಡದಿದ್ದರೆ ಮುಂದೆ ಕರಗ ನಡೆಸುವ ಹಕ್ಕನ್ನು ರಮೇಶ್‌ ಕಳೆದುಕೊಳ್ಳುತ್ತಾರೆ” ಎಂದಿರುವ ನ್ಯಾಯಾಲಯವು ಉಭಯ ಬಣಗಳ ಮುಸುಕಿನ ಗುದ್ದಾಟವು ಅಹಿತಕರ ಬೆಳವಣಿಗೆಗೆ ಅವಕಾಶವಾಗದಂತೆ ಸ್ಥಳೀಯ ಪೊಲೀಸರು ಕರಗಕ್ಕೆ ಭದ್ರತೆ ಒದಗಿಸಬೇಕು ಎಂದು ಆದೇಶಿಸಿದೆ.

“ಅರ್ಜುನಪ್ಪ ಕುಟುಂಬ ಕರಗ ನಡೆಸುವ ಹಕ್ಕನ್ನು ಪ್ರಥಮ ಮೇಲ್ಮನವಿ ನ್ಯಾಯಾಲಯ ಪರಿಗಣಿಸಿದ್ದು, ಅದನ್ನು ವಿಭಾಗೀಯ ಪೀಠವು ಪುರಸ್ಕರಿಸಿದೆ. ವಿಭಾಗೀಯ ಪೀಠವು ದೇವಸ್ಥಾನದ ಶ್ರೇಣೀಕೃತ ಅರ್ಚಕರು ಅರ್ಜಿ ಸಲ್ಲಿಸಿದರೆ ಪರಿಗಣಿಸಬೇಕು ಎಂದು ಆದೇಶಿಸಿದೆ. ಇದರ ಅನ್ವಯ ಅರ್ಜುನಪ್ಪ ಕುಟುಂಬದವರು ಅರ್ಜಿ ಸಲ್ಲಿಸಿದರೂ ಪರಿಗಣಿಸದ ಸಕ್ಷಮ ಪ್ರಾಧಿಕಾರವು ಸಿವಿಲ್‌ ನ್ಯಾಯಾಲಯ, ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಆದೇಶಕ್ಕೆ ವಿರುದ್ಧವಾಗಿ ಆದೇಶ ಮಾಡುವ ಮೂಲಕ ದಾವೆಗೆ ನಾಂದಿ ಹಾಡಿ ಭಕ್ತರ ಭಾವನೆಗಳ ಜೊತೆ ಆಟವಾಡುತ್ತಿದೆ” ಎಂದು ನ್ಯಾಯಾಲಯವು ಸಕ್ಷಮ ಪ್ರಾಧಿಕಾರಿಯಾದ ತಹಶೀಲ್ದಾರ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.

ಅರ್ಜುನಪ್ಪ ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ವಿವೇಕ್‌ ಸುಬ್ಬರೆಡ್ಡಿ ಮತ್ತು ಡಿ ಆರ್‌ ರವಿಶಂಕರ್‌ ಅವರು “ಕರಗ ನಡೆಸಲು ಚಂದ್ರಪ್ಪಗೆ ಯಾವುದೇ ಅಧಿಕಾರವಿಲ್ಲ. ಚಂದ್ರಪ್ಪ ವಂಶಪಾರಂಪರ್ಯ ಅರ್ಚಕರಲ್ಲ ಮತ್ತು ಅರ್ಜುನಪ್ಪನ ನಂತರದವರೂ ಅಲ್ಲ. ಅರ್ಜುನಪ್ಪ ಪುತ್ರರಾದ ರಮೇಶ್‌ ಅಥವಾ ಮನೋಜ್‌ ಕುಮಾರ್‌ ಕರಗ ನಡೆಸಲು ಅರ್ಹರಾಗಿದ್ದಾರೆ. 2011ರಿಂದ ಕರಗ ನಡೆಸುವ ಅವಕಾಶವನ್ನು ಚಂದ್ರಪ್ಪಗೆ ನೀಡಿರುವುದು ದೋಷಪೂರಿತ ಕ್ರಮ. ಕರಗಕ್ಕೆ ತನ್ನದೇ ಆದ ಮಹತ್ವ ಇದ್ದು, ವಂಶಪಾರಂಪರ್ಯವಾಗಿ ನಡೆಸಿಕೊಂಡು ಬರಬೇಕಿದೆ. ಸಿವಿಲ್‌ ಕೋರ್ಟ್‌, ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಅರ್ಜುನಪ್ಪ ಅವರ ಹಕ್ಕನ್ನು ಎತ್ತಿ ಹಿಡಿದಿವೆ. ತಹಶೀಲ್ದಾರ್‌ ಅವರನ್ನು ವಂಚಿಸಿ, ಚಂದ್ರಪ್ಪ ಕರಗ ನಡೆಸುವ ಅವಕಾಶ ಪಡೆದುಕೊಂಡಿದ್ದಾರೆ” ಎಂದು ಆಕ್ಷೇಪಿಸಿದರು.

ಚಂದ್ರಪ್ಪ ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್‌ ಹೊಳ್ಳ ಅವರು “ಅರ್ಜುನಪ್ಪ ಪುತ್ರ ರಮೇಶ್‌ ಅವರು ಕರಗ ಹೊರಲು ಸದೃಢವಾಗಿಲ್ಲ. ಎರಡನೇ ಪುತ್ರ ಮನೋಜ್‌ ಕುಮಾರ್‌ ಕರಗ ಹೊರಲು ಅನರ್ಹರಾಗಿದ್ದಾರೆ. 2016, 2018 ಮತ್ತು 2023ರಲ್ಲಿ ರಮೇಶ್‌ಗೆ ಕರಗ ಹೊರಲು ಅವಕಾಶ ನೀಡಲಾಗಿದ್ದು, ಅದನ್ನು ನಿಭಾಯಿಸಲು ಅವರು ವಿಫಲರಾಗಿದ್ದಾರೆ. 2023ರಲ್ಲಿ ಕರಗ ನಿಯಮ ಮುರಿದಿದ್ದರಿಂದ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಚಂದ್ರಪ್ಪ ಅವರು ವಂಶಪಾರಂಪರ್ಯವಾಗಿ ಅರ್ಚಕರಾಗಿಲ್ಲ” ಎಂದು ವಾದಿಸಿದ್ದರು.

ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲೆ ಪ್ರತಿಭಾ ಅವರು “ರಮೇಶ್‌ಗೆ ಕರಗ ಹೊರಲು ಅವಕಾಶ ನೀಡಿದಾಗಲೆಲ್ಲಾ ಅವರು ವಿಫಲರಾಗಿದ್ದಾರೆ ಎಂದಾಗಲಿ, ಅನಾರೋಗ್ಯದಿಂದ ರಮೇಶ್‌ ಕರಗ ನಡೆಸಲು ವಿಫಲರಾಗಿದ್ದಾರೆ ಎಂದಾಗಲಿ ಎಲ್ಲಿಯೂ ತಹಶೀಲ್ದಾರ್‌ ದಾಖಲಿಸಿಲ್ಲ. ದೇವಸ್ಥಾನವು ಈಗ ಘೋಷಿತ ಸಂಸ್ಥೆಯಾಗಿದ್ದು, ಇದಾದ ಬಳಿಕ ಯಾರು ಪಾರಂಪರಿಕ ಅರ್ಚಕರು ಎಂದು ನಿರ್ಧರಿಸಬೇಕಿದೆ. ಈ ಸಂಬಂಧ ರಮೇಶ್‌ ಸಲ್ಲಿಸಿರುವ ಅರ್ಜಿಯು ಇನ್ನಷ್ಟೇ ನಿರ್ಧಾರವಾಗಬೇಕಿದೆ. ಈ ನೆಲೆಯಲ್ಲಿ 12-04-2025ರಂದು ಕರಗ ಹೊರಲು ರಮೇಶ್‌ಗೆ ಅವಕಾಶ ನೀಡಲಾಗದು. ಇದಕ್ಕೆ ಚಂದ್ರಪ್ಪ ಅರ್ಹರಾಗಿದ್ದಾರೆ” ಎಂದು ವಾದಿಸಿದ್ದರು.

Poojary Arjunappa Vs State of Karnataka.pdf
Preview