Justice Hema Committee Report 
ಸುದ್ದಿಗಳು

ನ್ಯಾ. ಹೇಮಾ ಸಮಿತಿ ವರದಿ ಕುರಿತು ರಾಜ್ಯ ಸರ್ಕಾರದ ನಿಷ್ಕ್ರಿಯತೆ ದಿಗ್ಭ್ರಮೆ ಮೂಡಿಸಿದೆ: ಕೇರಳ ಹೈಕೋರ್ಟ್ ಕಿಡಿ

ಸರ್ಕಾರಕ್ಕೆ 2019ರಲ್ಲಿಯೇ ಸಲ್ಲಿಸಲಾದ ನ್ಯಾ. ಹೇಮಾ ಸಮಿತಿಯ ವರದಿ ಕಳೆದ ತಿಂಗಳಷ್ಟೇ ಸಾರ್ವಜನಿಕವಾಗಿ ಪ್ರಕಟವಾಗಿತ್ತು. ಮಲಯಾಳಂ ಚಿತ್ರೋದ್ಯಮದಲ್ಲಿ ಎಸಗಲಾಗುತ್ತಿರುವ ದೊಡ್ಡ ಪ್ರಮಾಣದ ಲೈಂಗಿಕ ಕಿರುಕುಳದ ಕೃತ್ಯವನ್ನು ಬಿಚ್ಚಿಟ್ಟಿತ್ತು.

Bar & Bench

ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳೆಯರ ಕೆಲಸದ ಸ್ಥಿತಿಗತಿಯು ರೋಗಗ್ರಸ್ತವಾಗಿರುವ ಕುರಿತು ನ್ಯಾಯಮೂರ್ತಿ ಕೆ ಹೇಮಾ ಸಮಿತಿಯ ವರದಿ ತೆರೆದಿಟ್ಟಿರುವ ಸಂಗತಿಗಳ ಬಗ್ಗೆ ಹಾಗೂ ಅಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯಗಳ ವಿರುದ್ಧ ಕೇರಳ ಸರ್ಕಾರ ತ್ವರಿತವಾಗಿ ಏಕೆ ಕ್ರಮ ಕೈಗೊಂಡಿಲ್ಲ ಎಂದು ಕೇರಳ ಹೈಕೋರ್ಟ್‌ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ.

ವರದಿಯನ್ನು 2019ರಲ್ಲೇ ಸಲ್ಲಿಸಲಾಗಿದ್ದರೂ ರಾಜ್ಯ ಸರ್ಕಾರ ನಾಲ್ಕು ವರ್ಷಗಳು ನಿಷ್ಕ್ರಿಯವಾಗಿದ್ದು ಬಿಟ್ಟರೆ ಬೇರೇನೂ ಮಾಡಲಿಲ್ಲ ಎಂದು ನ್ಯಾಯಮೂರ್ತಿಗಳಾದ  ಎ ಕೆ ಜಯಶಂಕರನ್ ನಂಬಿಯಾರ್  ಮತ್ತು  ಸಿ ಎಸ್ ಸುಧಾ ಅವರಿದ್ದ ವಿಶೇಷ ಪೀಠ ಕಿಡಿಕಾರಿತು.

2019ರಲ್ಲೇವರದಿ ಬಂದರೂ ರಾಜ್ಯ ಸರ್ಕಾರ ಇಲ್ಲಿಯವರೆಗೆ ನಿಷ್ಕ್ರಿಯವಾಗಿದ್ದು ಏಕೆ ? ಎಂದು ನ್ಯಾಯಮೂರ್ತಿ ನಂಬಿಯಾರ್ ಪ್ರಶ್ನಿಸಿದರು ಇದಕ್ಕೆ ಉತ್ತರಿಸಿದ ಅಡ್ವೊಕೇಟ್ ಜನರಲ್ (ಎಜಿ) ಗೋಪಾಲಕೃಷ್ಣ ಕುರುಪ್, ಸಮಿತಿಯು ವರದಿ ಪ್ರಕಟಿಸಬಾರದು ಎಂದು ಶಿಫಾರಸು ಮಾಡಿತ್ತು ಎಂದರು. ಆದರೆ ಇದರಿಂದ ತೃಪ್ತವಾಗದ ಪೀಠ ಸರ್ಕಾರ ನಿಷ್ಕ್ರಿಯತೆ ಮತ್ತು ಮೌನ ದಿಗ್ಭ್ರಮೆ ಮೂಡಿಸಿದೆ ಎಂದಿತು.

“ವರದಿ ಇಂತಹ ಅವ್ಯವಸ್ಥೆಯನ್ನು ಬಹಿರಂಗಪಡಿಸಿದಾಗ ರಾಜ್ಯ ಸರ್ಕಾರ ಮಾಡಬೇಕಿದ್ದ ಕನಿಷ್ಠ ಕಾರ್ಯವಾದರೂ ಏನು? ರಾಜ್ಯ ಸರ್ಕಾರ ಕ್ರಮ ಕೈಗೊಳ್ಳದಿರುವುದು ನಮಗೆ ಆಘಾತ ಉಂಟುಮಾಡಿದೆ. ಮಹಿಳೆಯರ ಗೌಪ್ಯತೆ ಕಾಪಾಡುವುದು ಇನ್ನೊಂದು ವಿಚಾರ. ಸಮಿತಿಯೊಂದಿಗೆ ಮಾತನಾಡಿದವರು ಮತ್ತು ಆರೋಪ ಮಾಡಿದವರಿಗೂ ಖಾಸಗಿತನದ ಹಕ್ಕಿರಬಹುದು, ಆದರೆ ಅಂತಹ ವಿಷಯಗಳು ವರದಿಯಲ್ಲಿ ಬಹಿರಂಗವಾದಾಗ, ಸರ್ಕಾರ ಕೆಲ ಕ್ರಮಗಳನ್ನಾದರೂ ತೆಗೆದುಕೊಳ್ಳಬೇಕಲ್ಲವೇ? ಇಲ್ಲಿಯವರೆಗೂ ಸರ್ಕಾರ ಏಕೆ ಏನನ್ನೂ ಮಾಡಿಲ್ಲ? ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳುವುದು ಕಡ್ಡಾಯ. ಮೌನದಿಂದ ಇರುವುದು ಆಯ್ಕೆಯಲ್ಲ” ಎಂದು ಕಿಡಿಕಾರಿತು.

ಈ ಕಳವಳ ಕೇವಲ ಚಿತ್ರರಂಗಕ್ಕಷ್ಟೇ ಸೀಮಿತವಾಗಿಲ್ಲ. ಸಮಾಜದಲ್ಲಿ ಮಹಿಳೆಯರು ಎದುರಿಸುತ್ತಿರುವ ತಾರತಮ್ಯ ಮತ್ತು ಕಿರುಕುಳದಂತಹ ವಿಸ್ತೃತ ಸಮಸ್ಯೆಯನ್ನು ಒಳಗೊಂಡಿದೆ ಎಂದು ಪೀಠ ಹೇಳಿದೆ.

"ಸಮಾಜದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ನೀವು ಏನು ಮಾಡುತ್ತಿದ್ದೀರಿ? ... ಸಮಾಜದಲ್ಲಿ ತಿಳಿದೋ ತಿಳಿಯದೆಯೋ ಮೊದಲಿನಿಂದಲೂ ಪಕ್ಷಪಾತ ನಡೆಯುತ್ತಿದೆ. ಅಂತಹ ಮನಸ್ಥಿತಿ ಬದಲಾಗಬೇಕಿದೆಯಾದರೂ ಅದು ಸಾಧ್ಯವಾಗವುದು ಜನರೊಳಗಿನ ಬದಲಾವಣೆಯಿಂದ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಇಂತಹ ದೊಡ್ಡ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಕ್ರಮ ಕೈಗೊಳ್ಳಲು ಇದು ಸಕಾಲ ಎಂದು ಪೀಠ ಒತ್ತಿ ಹೇಳಿತು.

ಆಗಸ್ಟ್ 19ರಂದು ಬಿಡುಗಡೆಯಾದ ವರದಿ ಚಿತ್ರೋದ್ಯಮದಲ್ಲಿ ವ್ಯಾಪಕವಾಗಿರುವ ಲೈಂಗಿಕ ದೌರ್ಜನ್ಯ ಮತ್ತು ʼಪಾತ್ರಕ್ಕಾಗಿ ಪಲ್ಲಂಗʼದ ಚಟುವಟಿಕೆ ರೂಢಿಯಲ್ಲಿರುವುದನ್ನು ಬಹಿರಂಗಪಡಿಸಿತ್ತು.

ಬಳಿಕ ಹಲವು ಮಹಿಳೆಯರು ಚಿತ್ರರಂಗದ ಪ್ರಮುಖ ವ್ಯಕ್ತಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಇದರ ಪರಿಣಾಮ ಕ್ರಿಮಿನಲ್‌ ಪ್ರಕರಣಗಳು ದಾಖಲಾದವು ಹಾಗೂ ಜಾಮೀನು ಅರ್ಜಿಗಳು ಸಲ್ಲಿಕೆಯಾದವು. ಅಲ್ಲದೆ ಇಂತಹ ಕೃತ್ಯಗಳ ಬಗ್ಗೆ ಕ್ರಿಮಿನಲ್‌ ಕ್ರಮ ಕೈಗೊಳ್ಳುವಂತೆ ಕೋರಿ ಹಲವು ಅರ್ಜಿಗಳು ಸಲ್ಲಿಕೆಯಾದವು, ಈ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್‌ ವಿಶೇಷ ಪೀಠ ರಚಿಸಿತು.  

ನ್ಯಾ. ಹೇಮಾ ಸಮಿತಿ ವರದಿಯ ಯಾವುದೇ ಮರೆಮಾಚುವಿಕೆಗಳನ್ನು ಮಾಡದ ಯಥಾವತ್‌ ಪ್ರತಿಯನ್ನು ಇಂದು ನ್ಯಾಯಾಲಯಕ್ಕೆ ಹಸ್ತಾಂತರಿಸಲಾಯಿತು.

"ಎಫ್‌ಐಆರ್‌ಗಳನ್ನು ದಾಖಲಿಸದಿರುವುದು ಸೇರಿದಂತೆ ರಾಜ್ಯ ಸರ್ಕಾರದ ನಿಷ್ಕ್ರಿಯತೆ ಬಗ್ಗೆ ನಮ್ಮ ಮೊದಲ ಆತಂಕವಿದೆ ಇದೆ. ನಿಮ್ಮ ಬಳಿ ವರದಿ ಇತ್ತು, ನಿಮಗೆ ಮಾಹಿತಿ ಇತ್ತು. ನೀವು 2020ರಲ್ಲಿ ಡಿಜಿಪಿಗೆ ವರದಿ ಒಪ್ಪಿಸಿದರೂ ಡಿಜಿಪಿ ಏನನ್ನೂ ಮಾಡಲಿಲ್ಲವೇ?" ಎಂದು ನ್ಯಾಯಾಲಯ ವಿಚಾರಣೆ ವೇಳೆ ಪ್ರಶ್ನಿಸಿತು. ಇದಕ್ಕೆ ಎಜಿ ವಿವರಣೆ ನೀಡಿದರಾದರೂ ಪೀಠ ತೃಪ್ತವಾಗಲಿಲ್ಲ.

ತರಾತುರಿಯಲ್ಲಿ ಕಾರ್ಯನಿರ್ವಹಿಸುವಂತೆ ಎಸ್‌ಐಟಿಗೆ ಒತ್ತಡ ಹೇರಬಾರದು ಮತ್ತು ಪ್ರಕರಣದಲ್ಲಿ ಮಾಧ್ಯಮ ವಿಚಾರಣೆ ನಡೆಸಬಾರದು. ಮಾಧ್ಯಮಗಳಿಗೆ ಎಸ್‌ಐಟಿ ವಿವರಗಳನ್ನು ಬಹಿರಂಗಪಡಿಸಬಾರದು. ಮಾಧ್ಯಮ ಕೂಡ ಈ ವಿಚಾರವಾಗಿ ಸಂಯಮ ಕಾಯ್ದುಕೊಳ್ಳಬೇಕು. ಆದರೆ ಈ ಹಂತದಲ್ಲಿ ಮಾಧ್ಯಮಗಳಿಗೆ ತಡೆಯಾಜ್ಞೆ ವಿಧಿಸುವ ಅಗತ್ಯ ಇಲ್ಲ ಎಂದು ನ್ಯಾಯಾಲಯ ಇದೇ ವೇಳೆ ತಿಳಿಸಿತು.

ವರದಿಯಲ್ಲಿನ ಆರೋಪಗಳ ಬಗ್ಗೆ ಸಿಬಿಐ ತನಿಖೆ ಕೋರಿ ಸಲ್ಲಿಸಿರುವ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು  ಪೀಠ ಪರಿಶೀಲಿಸಲಿದೆ. ಅಲ್ಲದೆ ವರದಿ ಬಿಡುಗಡೆ  ತಡೆಯಲು ನಿರಾಕರಿಸಿದ ಏಕಸದಸ್ಯ ಪೀಠದ ಆದೇಶದ ವಿರುದ್ಧ ಚಲನಚಿತ್ರ ನಿರ್ಮಾಪಕ ಸಜಿಮೋನ್ ಪರಾಯಿಲ್ ಸಲ್ಲಿಸಿದ್ದ ಮೇಲ್ಮನವಿಯನ್ನೂ ಇದೇ ಪೀಠ ವಿಚಾರಣೆ ನಡೆಸಲಿದೆ.