Madras HC, Delhi and Tamil Nadu 
ಸುದ್ದಿಗಳು

ಜನಸಂಖ್ಯೆ ನಿಯಂತ್ರಿಸಿದ ಕಾರಣಕ್ಕೆ ಲೋಕಸಭಾ ಸ್ಥಾನಗಳ ಕಳೆದುಕೊಂಡ ತಮಿಳುನಾಡಿಗೆ ಪರಿಹಾರ ನೀಡಬೇಕು: ಮದ್ರಾಸ್‌ ಹೈಕೋರ್ಟ್

‘ಒಬ್ಬ ವ್ಯಕ್ತಿ, ಒಂದು ಮತ’ ಎನ್ನುವುದನ್ನು ಅನುಸರಿಸಿದರೆ ಉತ್ತರ ಪ್ರದೇಶ, ಬಿಹಾರದಂತಹ ರಾಜ್ಯಗಳು ಹೆಚ್ಚು ಸ್ಥಾನಗಳನ್ನು ಪಡೆಯುತ್ತವೆ ಹಾಗೂ ಜನಸಂಖ್ಯೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿರುವ ದಕ್ಷಿಣದ ರಾಜ್ಯಗಳು ಕಡಿಮೆ ಸ್ಥಾನಗಳ ಪಡೆಯುತ್ತವೆ.

Bar & Bench

ಯಶಸ್ವಿ ಕುಟುಂಬ ಕಲ್ಯಾಣ ಯೋಜನೆಯ ಮೂಲಕ ಜನಸಂಖ್ಯೆಯನ್ನು ತಹಬದಿಗೆ ತಂದ ತಮಿಳುನಾಡು ರಾಜ್ಯವು 1967ರಲ್ಲಿ ರಾಜಕೀಯ ಪ್ರಾತಿನಿಧ್ಯವನ್ನು ಕಳೆದುಕೊಳ್ಳಬೇಕಾಗಿ ಬಂದದ್ದು ಅನ್ಯಾಯಯುತವೂ, ಅವಿವೇಚನಾಪೂರ್ಣವೂ ಆದ ಸಂಗತಿ ಎಂದು ಇತ್ತೀಚೆಗೆ ಮದ್ರಾಸ್‌ ಹೈಕೋರ್ಟ್ ಅಭಿಪ್ರಾಯಪಟ್ಟಿತು.

ನ್ಯಾ. ಎನ್‌ ಕಿರುಕುಬಾಕರನ್‌ ಮತ್ತು ನ್ಯಾ. ಬಿ ಪುಗಳೇಂದಿ ಅವರಿದ್ದ ಪೀಠವು ಇತ್ತೀಚೆಗೆ ನ್ಯಾ. ಎನ್‌ ಕಿರುಬಾಕರನ್‌ ಅವರ ನಿವೃತ್ತಿಯ ಕೊನೆಯ ದಿನದಂದು ಪ್ರಕರಣವೊಂದರ ವಿಚಾರಣೆ ವೇಳೆ ಮೇಲಿನಂತೆ ಅಭಿಪ್ರಾಯಪಟ್ಟಿತು.

“ಕೇಂದ್ರ ಸರ್ಕಾರದ ಯೋಜನೆಯೊಂದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಕಾರಣಕ್ಕೆ ಸಂಸತ್ತಿನಲ್ಲಿ ಆ ರಾಜ್ಯದ ಪ್ರಾತಿನಿಧ್ಯವನ್ನು ಕಡಿಮೆಗೊಳಿಸುವ ಮೂಲಕ ಆ ರಾಜ್ಯದ ಜನತೆಯ ವಿರುದ್ಧದ ನಡೆಯನ್ನು ಅನುಸರಿಸಬಹುದೇ?” ಎಂದು ನ್ಯಾಯಾಲಯವು ಪ್ರಶ್ನಿಸಿತು. ಕೇವಲ ಪರಿಶಿಷ್ಟ ಜಾತಿಗೆ ಮಾತ್ರವೇ ಮೀಸಲಾಗಿರುವ ತಮಿಳುನಾಡಿನ ತೆಂಕಾಸಿ ಲೋಕಸಭಾ ಸ್ಥಾನವನ್ನು ಮೀಸಲಾತಿರಹಿತಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು ಮೇಲಿನಂತೆ ಅಭಿಪ್ರಾಯಪಟ್ಟಿತು.

ಆದರ್ಶಯುತವಾಗಿ ನೋಡುವುದಾದರೆ ಲೋಕಸಭಾ ಕ್ಷೇತ್ರಗಳ ಮೀಸಲಾತಿಯು ಆವರ್ತನೀಯವಾಗಿರಬೇಕೆ ಹೊರತು ಯಾವುದೇ ಒಂದು ಕ್ಷೇತ್ರವನ್ನು ಹಲವು ವರ್ಷಗಳ ಕಾಲ ಮೀಸಲಿರಿಸಲಾಗದು ಎಂದ ನ್ಯಾಯಾಲಯವು, ಸಾಮಾನ್ಯ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದಿರುವ ಪರಿಸ್ಥಿತಿ ಇರುವ ಬಗ್ಗೆ ಬೇಸರಿಸಿತು.

ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯವು ಜನಸಂಖ್ಯೆಯನ್ನು ನಿಯಂತ್ರಿಸಿರುವ ಕಾರಣಕ್ಕೆ ಲೋಕಸಭಾ ಸ್ಥಾನಗಳಿಂದ ವಂಚಿತವಾಗಬೇಕಾದ ತಮಿಳುನಾಡಿನ ವಿಚಾರದತ್ತ ಗಮನಹರಿಸಿ ಸ್ವಯಂಪ್ರೇರಿತವಾಗಿ ತಮಿಳುನಾಡಿನ ಹತ್ತು ಪ್ರಮುಖ ರಾಜಕೀಯ ಪಕ್ಷಗಳಿಗೆ ಈ ವಿಚಾರವಾಗಿ ಮಧ್ಯಪ್ರವೇಶಕ್ಕೆ ಆಸ್ಪದ ಕಲ್ಪಿಸಿತು.

ನ್ಯಾಯಾಲಯವು ಮುಂದಿನ ವಿಚಾರಣೆ ವೇಳೆ ಈ ರಾಜಕೀಯ ಪಕ್ಷಗಳು ಎಂಟು ಪ್ರಶ್ನೆಗಳಿಗೆ ಉತ್ತರಿಸುವಂತೆ ಸೂಚಿಸಿತು. ನ್ಯಾಯಾಲಯವು ಈ ಪಕ್ಷಗಳಿಗೆ ಉತ್ತರಿಸುವಂತೆ ಎತ್ತಿರುವ ಪ್ರಮುಖ ಪ್ರಶ್ನೆಗಳೆಂದರೆ:

1. ಜನಸಂಖ್ಯಾ ನಿಯಂತ್ರಣದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ತಮಿಳುನಾಡು ಹಾಗೂ ಅದೇ ರೀತಿಯ ರಾಜ್ಯಗಳು ಇದೇ ಕಾರಣಕ್ಕಾಗಿ ಲೋಕಸಭಾ ಕ್ಷೇತ್ರಗಳನ್ನು ಕಳೆದುಕೊಳ್ಳುವುದು ಅವುಗಳ ಹಕ್ಕುಗಳ ಉಲ್ಲಂಘನೆಯಲ್ಲವೇ?

2. ಯಾವ ರಾಜ್ಯಗಳು ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿಲ್ಲವೋ ಆ ರಾಜ್ಯಗಳು ಇದೇ ಕಾರಣಕ್ಕಾಗಿ ಹೆಚ್ಚು ರಾಜಕೀಯ ಪ್ರಾತಿನಿಧ್ಯದ ಅನುಕೂಲ ಪಡೆಯಬಹುದೇ?

3. ಮುಂದಿನ ಜನಗಣತಿಯ ಆಧಾರದಲ್ಲಿ ತಮಿಳುನಾಡಿನ ಲೋಕಸಭಾ ಕ್ಷೇತ್ರಗಳನ್ನು ಕಡಿಮೆಗೊಳಿಸುವಂತಹ ಭವಿಷ್ಯದ ಕ್ರಮಗಳನ್ನು ಪ್ರತಿವಾದಿ ಸಂಸ್ಥೆಗಳು ಕೈಗೊಳ್ಳದಂತೆ ಈ ನ್ಯಾಯಾಲಯವು ನಿಷೇಧಿಸಬಾರದೇಕೆ?

4. 1962ರ ಚುನಾವಣೆಯವರೆಗೆ ಇದ್ದಂತೆಯೇ ತಮಿಳುನಾಡಿನ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು 41ಕ್ಕೇ ಏಕೆ ಮರಳಿಸಬಾರದು?

5. 1962ರಿಂದ ಇಲ್ಲಿಯವರೆಗೆ 28 ಸಂಸದರನ್ನು (ಮರುವಿಂಗಡಣೆಯ ಕಾರಣದಿಂದಾಗಿ) ಕಳೆದುಕೊಂಡಿರುವ ತಮಿಳುನಾಡಿಗೆ ರೂ.5,600 ಕೋಟಿ ಹಣವನ್ನು ಕೇಂದ್ರ ಸರ್ಕಾರವು ಏಕೆ ನೀಡಬಾರದು?

ತನ್ನದಲ್ಲದ ತಪ್ಪಿನ ಕಾರಣದಿಂದಾಗಿ ಲೋಕಸಭಾ ಕ್ಷೇತ್ರಗಳನ್ನು ಕಳೆದುಕೊಂಡ ತಮಿಳುನಾಡಿಗೆ ಬೇರೆ ರೀತಿಯ ಪರಿಹಾರವನ್ನು ನೀಡಬೇಕು ಅಥವಾ ರಾಜ್ಯಸಭೆಯಲ್ಲಿ ಹೆಚ್ಚಿನ ಸ್ಥಾನವನ್ನು ಕಲ್ಪಿಸಬೇಕು ಎಂದೂ ಸಹ ಒಂದು ಹಂತದಲ್ಲಿ ನ್ಯಾಯಾಲಯವು ಅಭಿಪ್ರಾಯಪಟ್ಟಿತು.