ಪಶ್ಚಿಮ ಬಂಗಾಳ ಸಿಂಗೂರು ಜಿಲ್ಲೆಯಲ್ಲಿ ನ್ಯಾನೋ ಕಾರು ತಯಾರಿಸುವ ಯೋಜನೆ ರದ್ದುಪಡಿಸಿದ್ದರಿಂದ ಉಂಟಾದ ನಷ್ಟ ಸರಿದೂಗಿಸಲು ಪಶ್ಚಿಮ ಬಂಗಾಳ ಸರ್ಕಾರ ಟಾಟಾ ಮೋಟಾರ್ಸ್‌ಗೆ ₹766 ಕೋಟಿ ಪರಿಹಾರ ನೀಡಬೇಕೆಂದು ಮಧ್ಯಸ್ಥಿಕೆ ನ್ಯಾಯಮಂಡಳಿ ಈಚೆಗೆ ನಿರ್ದೇಶಿಸಿದೆ.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ ಎಸ್ ಸಿರ್ಪುರ್ಕರ್ ಮತ್ತು ಕಲ್ಕತ್ತಾ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿಗಳಾದ ಅಲೋಕೆ ಚಕ್ರವರ್ತಿ ಮತ್ತು ಜಯಂತ ಕುಮಾರ್ ಬಿಸ್ವಾಸ್ ಅವರನ್ನೊಳಗೊಂಡ ನ್ಯಾಯಮಂಡಳಿ ಈ ತೀರ್ಪು ನೀಡಿದೆ.
ಟಾಟಾ ಮೋಟಾರ್ಸ್ ₹765.78 ಕೋಟಿ ರೂಪಾಯಿ ಮೊತ್ತ ಪಡೆಯಲು ಅರ್ಹವಾಗಿದೆ. ಪಶ್ಚಿಮ ಬಂಗಾಳದ ಕೈಗಾರಿಕಾ ಅಭಿವೃದ್ಧಿ ನಿಗಮ ಸೆಪ್ಟೆಂಬರ್ 1, 2016 ರಿಂದ ಅನ್ವಯವಾಗುವಂತೆ ಪೂರ್ಣ ಹಣ ಪಾವತಿಯಾಗುವವರೆಗೆ ವಾರ್ಷಿಕ ಶೇಕಡಾ 11ರ ಬಡ್ಡಿಯನ್ನು ಪಾವತಿಸಬೇಕು. ಅಲ್ಲದೆ ಪಶ್ಚಿಮ ಬಂಗಾಳದ ಕೈಗಾರಿಕಾ ಅಭಿವೃದ್ಧಿ ನಿಗಮ ಮಧ್ಯಸ್ಥಿಕೆ ಪ್ರಕ್ರಿಯೆ ವೆಚ್ಚಕ್ಕಾಗಿ ಟಾಟಾ ಮೋಟಾರ್ಸ್‌ಗೆ ₹ 1 ಕೋಟಿ ನೀಡಬೇಕು ಎಂದು ತೀರ್ಪಿನಲ್ಲಿ ಸೂಚಿಸಲಾಗಿದೆ.
ಹಿನ್ನೆಲೆ
ಪ. ಬಂಗಾಳದ ಅಂದಿನ ಸಿಪಿಎಂ ಸರ್ಕಾರ ಸಿಂಗೂರಿನಲ್ಲಿ ಯೋಜನೆಗಾಗಿ ಭೂಮಿ ಸ್ವಾಧೀನಪಡಿಸಿಕೊಂಡು ಟಾಟಾಗೆ ಹಸ್ತಾಂತರಿಸಿತ್ತು.
ಆದರೆ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಡೆದಿದ್ದ ಭೂಸ್ವಾಧೀನ ವಿರೋಧಿ ಆಂದೋಲನದಿಂದಾಗಿ ಟಾಟಾ 2008 ರಲ್ಲಿ ಕಾರ್ ಕಾರ್ಖಾನೆ ನಿರ್ಮಾಣ ಯೋಜನೆ ಕೈಬಿಟ್ಟು ಯೋಜನೆಯನ್ನು ಗುಜರಾತ್‌ಗೆ ಸ್ಥಳಾಂತರಿಸಿತ್ತು. ಇತ್ತ ಮಮತಾ ಅವರು ಈ ಹೋರಾಟಗಳ ಫಲವಾಗಿ 2011ರಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದರು.
ಅಧಿಕಾರಕ್ಕೆ ಬಂದ ನಂತರ ತೃಣಮೂಲ ಕಾಂಗ್ರೆಸ್ ಪಕ್ಷ ನೇತೃತ್ವದ ಪ. ಬಂಗಾಳ ಸರ್ಕಾರ ತನ್ನ ನಿಲುವು ಬದಲಿಸಿ ಹಿಂದಿನ ಸರ್ಕಾರ ನಡೆಸಿದ್ದ ಭೂಸ್ವಾಧೀನ ಕಾನೂನುಬಾಹಿರ ಎಂದು ವಾದಿಸಿತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಭೂಸ್ವಾಧೀನ ಕಾಯಿದೆಯ ನಿಬಂಧನೆಗಳನ್ನು ಪಾಲಿಸದಿರುವ ಕಾರಣ ಭೂಸ್ವಾಧೀನವು ಅಕ್ರಮ ಮತ್ತು ಅನೀತಿಯುಕ್ತ ಎಂದು 2016 ರಲ್ಲಿ ತೀರ್ಪು ನೀಡಿತ್ತು.
ಈ ಹಿನ್ನೆಲೆಯಲ್ಲಿ ಟಾಟಾ ಮಧ್ಯಸ್ಥಿಕೆ ನ್ಯಾಯಮಂಡಳಿಯ ಮೆಟ್ಟಿಲೇರಿತ್ತು. ಮಂಡಳಿ ಈಗ ಟಾಟಾ ಮೋಟಾರ್ಸ್ ಪರವಾಗಿ ತೀರ್ಪಿತ್ತಿದೆ.