ಸುದ್ದಿಗಳು

ಟ್ರೇಡ್‌ಮಾರ್ಕ್‌ ಉಲ್ಲಂಘನೆ: ʼವಿಸ್ತಾರ ನ್ಯೂಸ್‌ʼ ವಿರುದ್ಧ ಮಧ್ಯಂತರ ಪ್ರತಿಬಂಧಕಾದೇಶ ಮಾಡಿದ ದೆಹಲಿ ಹೈಕೋರ್ಟ್‌

Bar & Bench

ಟಾಟಾ ಸಿಯಾ ಏರ್‌ಲೈನ್ಸ್‌ ಲಿಮಿಟೆಡ್‌ನ ನೋಂದಾಯಿತ ಮತ್ತು ಜನಜನಿತ ʼವಿಸ್ತಾರʼ ಟ್ರೇಡ್‌ಮಾರ್ಕ್‌ ಅನ್ನು ಮುಂದಿನ ವಿಚಾರಣೆಯವರೆಗೆ ಬಳಕೆ ಮಾಡದಂತೆ ನಿರ್ಬಂಧಿಸಿ ಕನ್ನಡದ ಸುದ್ದಿ ವಾಹಿನಿ ಮತ್ತು ಡಿಜಿಟಲ್‌ ಮಾಧ್ಯಮ ʼವಿಸ್ತಾರ ನ್ಯೂಸ್‌ʼನ ಮಾತೃ ಸಂಸ್ಥೆಯಾದ ವಿಸ್ತಾರ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ ವಿರುದ್ಧ ಏಕಪಕ್ಷೀಯ ಮಧ್ಯಂತರ ಪ್ರತಿಬಂಧಕಾದೇಶವನ್ನು ದೆಹಲಿ ಹೈಕೋರ್ಟ್‌ ಈಚೆಗೆ ಹೊರಡಿಸಿದೆ.

ತನ್ನ ನೋಂದಾಯಿತ ಟ್ರೇಡ್‌ಮಾರ್ಕ್‌ ʼವಿಸ್ತಾರʼವನ್ನು ಬಳಕೆ ಮಾಡದಂತೆ ವಿಸ್ತಾರ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ ವಿರುದ್ಧ ಶಾಶ್ವತ ಪ್ರತಿಬಂಧಕಾದೇಶ ಮಾಡುವಂತೆ ಸಿಂಗಪೋರ್ ಏರ್‌ಲೈನ್ಸ್‌ ಲಿಮಿಟೆಡ್‌ ಜೊತೆಗೆ ಜಂಟಿ ಸಹಭಾಗಿತ್ವ ಹೊಂದಿರುವ ಟಾಟಾ ಸಮೂಹದ ಟಾಟಾ ಸನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಜ್ಯೋತಿ ಸಿಂಗ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

“ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಬಳಿಕ ಮೇಲ್ನೋಟಕ್ಕೆ ಏಕಪಕ್ಷೀಯ ಮಧ್ಯಂತರ ಪ್ರತಿಬಂಧಕಾದೇಶ ಮಾಡಬಹುದಾಗಿದೆ. ಪ್ರಯೋಜನಗಳ ಸಂತುಲಿತತೆಯನ್ನು ಪರಿಗಣಿಸಿದಲ್ಲಿ ಅದು ಫಿರ್ಯಾದಿಯ ಪರವಾಗಿದ್ದು, ಪ್ರತಿಬಂಧಕಾದೇಶ ಮಾಡದಿದ್ದರೆ ಫಿರ್ಯಾದಿಗೆ ಸರಿಪಡಿಸಲಾಗದ ಸಮಸ್ಯೆಯಾಗಲಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಹೀಗಾಗಿ, “ಮುಂದಿನ ವಿಚಾರಣೆಯವರೆಗೆ ಪ್ರತಿವಾದಿಗಳು ಮತ್ತು ಸಂಬಂಧಿತರು ಯಾವುದೇ ಕಾರಣಕ್ಕೂ ಪ್ರಾದೇಶಿಕ ಭಾಷೆ ಕನ್ನಡ ಸೇರಿದಂತೆ ಎಲ್ಲಿಯೂ ʼವಿಸ್ತಾರʼ ಟ್ರೇಡ್‌ಮಾರ್ಕ್‌ ಬಳಸದಂತೆ ಹಾಗೂ ಫಿರ್ಯಾದಿಯ ಸೇವೆ ಅಥವಾ ಉತ್ಪನ್ನ ಒದಗಿಸದಂತೆ ನಿರ್ಬಂಧಿಸಲಾಗಿದೆ. ಅಲ್ಲದೇ, ತಕ್ಷಣದಿಂದಲೇ www.vistaranews.com ವೆಬ್‌ಸೈಟ್‌ ನಿರ್ಬಂಧಿಸಲು ಪ್ರತಿವಾದಿಗಳಿಗೆ ಆದೇಶಿಸಲಾಗಿದೆ” ಎಂದು ಪೀಠವು ಹೇಳಿದೆ.

ಅರ್ಜಿದಾರರ ಪರ ವಕೀಲರು “ವಿಸ್ತಾರ ಟ್ರೇಡ್‌ಮಾರ್ಕ್‌ ಬಳಸಲು ಪ್ರತಿವಾದಿಗೆ ವಿಶೇಷ ಹಕ್ಕಿದ್ದು, ಮೂರನೇ ವ್ಯಕ್ತಿ ಅದನ್ನು ಬಳಸದಂತೆ ರಕ್ಷಿಸುವ ಹಕ್ಕೂ ಇದೆ. ವಿಸ್ತಾರ ಜನಜನಿತ ಟ್ರೇಡ್‌ಮಾರ್ಕ್‌ ಆಗಿರುವುದರಿಂದ ಅದು ಅತ್ಯಂತ ಹೆಚ್ಚಿನ ರಕ್ಷಣೆಗೆ ಅರ್ಹವಾಗಿದೆ. ಪ್ರತಿವಾದಿಯು ಅಪ್ರಾಮಾಣಿಕವಾಗಿ ವಿಸ್ತಾರ ಟ್ರೇಡ್‌ಮಾರ್ಕ್‌ ಅನ್ನು ನಕಲು ಮಾಡಿದ್ದು, ಅದನ್ನು ಅಳವಡಿಸಿಕೊಳ್ಳುವುದಕ್ಕೆ ಪೂರಕವಾದ ಕಾರಣಗಳನ್ನು ನೀಡಿಲ್ಲ. ಪ್ರತಿವಾದಿ ನೀಡುವ ಸೇವೆಯು ಫಿರ್ಯಾದಿಯದ್ದಾಗಿದೆ ಎಂದು ಗ್ರಾಹಕರಲ್ಲಿ ಗೊಂದಲ ಮೂಡಿಸುವುದಾಗಿದೆ. ಇದು ಕಾಯಿದೆ ಸೆಕ್ಷನ್‌ 29ರ ಅಡಿ ಸ್ಪಷ್ಟವಾದ ಉಲ್ಲಂಘನೆಯಾಗಿದೆ. ಪ್ರತಿವಾದಿಗಳು ಅನಧಿಕೃತವಾಗಿ ಟ್ರೇಡ್‌ಮಾರ್ಕ್‌ ಬಳಕೆಯಿಂದ ಅದಕ್ಕೆ ಕಳಂಕ ಉಂಟಾಗಲಿದೆ. ಹಲವು ವರ್ಷಗಳ ಸತತ ಪ್ರಯತ್ನದಿಂದ ಫಿರ್ಯಾದಿಯು ಅತ್ಯುತ್ತಮ ಹೆಸರು ಗಳಿಸಿದ್ದು, ತಪ್ಪಾಗಿ ಅದನ್ನು ಜನಸಾಮಾನ್ಯರ ಮುಂದೆ ಇಡುವುದರಿಂದ ಫಿರ್ಯಾದಿ ಗಳಿಸಿರುವ ವಿಶ್ವಾಸಕ್ಕೆ ಅಪರಿಮಿತವಾದ ನಷ್ಟ ಮತ್ತು ಸಮಸ್ಯೆ ಉಂಟು ಮಾಡಲಾಗಿದೆ. ಇಲ್ಲಿ ಪ್ರತಿವಾದಿಗಳ ಯಾವುದೇ ಚಟುವಟಿಕೆಯ ಮೇಲೆ ಫಿರ್ಯಾದಿಗೆ ನಿಯಂತ್ರಣವಿಲ್ಲ” ಎಂದು ವಾದಿಸಿದ್ದರು.

ಅರ್ಜಿದಾರರ ಆಕ್ಷೇಪವೇನು?

2021ರ ನವೆಂಬರ್‌ನಲ್ಲಿ ವಿಸ್ತಾರ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿ ಆರಂಭಿಸಿರುವ ವಿಚಾರ 2022ರ ಜುಲೈನಲ್ಲಿ ತಿಳಿದಿದ್ದು, ಅದು ಸುದ್ದಿ ಪ್ರಸರಣ ಸೇವೆಯಲ್ಲಿ ತೊಡಗಿದೆ. ವಿಸ್ತರಾ ನ್ಯೂಸ್‌ನ ಮೊಬೈಲ್‌ ಅಪ್ಲಿಕೇಶನ್‌ ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಲಭ್ಯವಿದೆ. 2021ರ ನವೆಂಬರ್‌ 15ರಂದು www.vistaranews.com ನೋಂದಾಯಿಸಲಾಗಿದೆ. ವಿಸ್ತಾರ ನ್ಯೂಸ್‌ ಹೆಸರಿನಲ್ಲಿ ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಂ, ಯೂಟ್ಯೂಬ್‌ ಇತ್ಯಾದಿಗಳ ಕಡೆ ಖಾತೆ ತೆರೆಯಲಾಗಿದೆ. ವಿಸಿಟಿಂಗ್‌ ಕಾರ್ಡ್‌ ಸೇರಿದಂತೆ ಪ್ರೊಮೇಷನಲ್‌ ಚಟುವಟಿಕೆಗಳಲ್ಲಿ ಲೋಗೊ ಬಳಸಲಾಗುತ್ತಿದೆ. ಈ ಕುರಿತು ತನಿಖೆ ನಡೆಸಿದ್ದು, ಪ್ರತಿವಾದಿಯು ಸುದ್ದಿ ಪ್ರಸಾರ ಮಾಡಲು ವಿಸ್ತಾರ ಟ್ರೇಡ್‌ಮಾರ್ಕ್‌ ಬಳಸುತ್ತಿದ್ದಾರೆ. ಪ್ರತಿವಾದಿಯ ವೆಬ್‌ಸೈಟ್‌ನಲ್ಲಿ ಫಿರ್ಯಾದಿಯ ಕುರಿತು ಉಲ್ಲೇಖಿಸಿದ್ದಾರೆ ಎಂದು ವಿವರಿಸಲಾಗಿದೆ.

Tata Sia vs Vistara Media Order.pdf
Preview