ಟಾಟಾ ಸನ್ಸ್ ಜೊತೆಗಿನ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ 2021ರ ಮಾರ್ಚ್‌ನಲ್ಲಿ ನೀಡಿದ್ದ ತೀರ್ಪಿನಲ್ಲಿ ತಮ್ಮ ವಿರುದ್ಧ ಮಾಡಲಾಗಿದ್ದ ಟೀಕೆಗಳನ್ನು ತೆಗೆದುಹಾಕುವಂತೆ ಶಾಪೂರ್‌ಜಿ ಪಲ್ಲೊಂಜಿ ಸಮೂಹದ ಮುಖ್ಯಸ್ಥ ಸೈರಸ್ ಮಿಸ್ತ್ರಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಮಿಸ್ತ್ರಿ ಅವರ ಖ್ಯಾತಿ, ಘನತೆ ಹಾಗೂ ಚಾರಿತ್ರ್ಯದ ಮೇಲೆ ಪರಿಣಾಮ ಬೀರುವ ಕೆಲವು ಟೀಕೆಗಳನ್ನು ತೆಗೆದುಹಾಕುವಂತೆ ಅವರ ಪರ ಹಾಜರಾದ ಹಿರಿಯ ವಕೀಲ ಜನಕ್ ದ್ವಾರಕಾದಾಸ್ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ, ವಿ ರಾಮಸುಬ್ರಮಣಿಯನ್ ಅವರಿದ್ದ ತ್ರಿಸದಸ್ಯ ಪೀಠವನ್ನು ಸೋಮವಾರ ಕೋರಿದರು.
ಅರ್ಜಿಯನ್ನು ಆಲಿಸುವುದಕ್ಕೆ ಟಾಟಾ ಪರ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ ಆಕ್ಷೇಪ ವ್ಯಕ್ತಪಡಿಸಿದರು. 10 ದಿನಗಳ ನಂತರ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಲಿದೆ ಎಂದ ಸಿಜೆಐ ರಮಣ ತಿಳಿಸಿ ಅರ್ಜಿ ಮುಂದೂಡಿದರು. ಮರುಪರಿಶೀಲನಾ ಅರ್ಜಿಯ ವಿಚಾರಣೆ ಮಾರ್ಚ್ 9 ರಂದು ನಡೆಯಲಿದೆ.
ಟಾಟಾ ಸನ್ಸ್ ಉಚ್ಚಾಟಿತ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರನ್ನು ಮರುನೇಮಕ ಮಾಡುವಂತೆ ಆದೇಶ ನೀಡಿದ್ದ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ ಆದೇಶವನ್ನು ಸುಪ್ರೀಂಕೋರ್ಟ್ ಮಾರ್ಚ್ 26, 2021ರಂದು ವಜಾಗೊಳಿಸಿತ್ತು.
ಟಾಟಾ ಸನ್ಸ್‌ನಲ್ಲಿ ತಮ್ಮ ಪಾಲಿನ ಷೇರುಗಳ ಹಂಚಿಕೆಯಲ್ಲಿ ನ್ಯಾಯಯುತ ಪರಿಹಾರ ಕೊಡಬೇಕು ಎಂಬ ಶಾಪೂರ್ಜಿ ಪಲ್ಲೋನ್‌ಜಿ ಸಮೂಹದ (ಎಸ್ ಪಿ ಗ್ರೂಪ್) ಅರ್ಜಿಯನ್ನು ಪೀಠ ತಿರಸ್ಕರಿಸಿತ್ತು. ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ಪೀಠ ತೀರ್ಪು ನೀಡಿತ್ತು. ಆಗ ನೀಡಿದ್ದ ಕೆಲ ಹೇಳಿಕೆಗಳನ್ನು ತೆಗೆದು ಹಾಕಬೇಕೆಂಬುದು ಮಿಸ್ತ್ರಿ ಅವರ ಕೋರಿಕೆ.