Tattoo  
ಸುದ್ದಿಗಳು

ಸಿಎಪಿಎಫ್, ಅಸ್ಸಾಂ ರೈಫಲ್ಸ್‌ನಲ್ಲಿ ಅಭ್ಯರ್ಥಿಯ ಅನರ್ಹತೆಗೆ ಹಚ್ಚೆ ಅಳಿಸಿದ ಗಾಯ ಕಾರಣವಾಗಬಾರದು: ರಾಜಸ್ಥಾನ ಹೈಕೋರ್ಟ್

Bar & Bench

ಮೈ ಮೇಲೆ ಟ್ಯಾಟೂ (ಹಚ್ಚೆ) ಅಳಿಸಿದ ಗಾಯದ ಗುರುತಿದೆ ಎಂಬ ಏಕೈಕ ಆಧಾರದಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ಮತ್ತು ಅಸ್ಸಾಂ ರೈಫಲ್ಸ್‌ನ ಅಭ್ಯರ್ಥಿಗಳನ್ನು ವೈದ್ಯಕೀಯವಾಗಿ ಅನರ್ಹಗೊಳಿಸುವಂತಿಲ್ಲ‌ ಎಂದು ರಾಜಸ್ಥಾನ ಹೈಕೋರ್ಟ್‌ ಈಚೆಗೆ ತೀರ್ಪು ನೀಡಿದೆ [ಭಾರತ ಒಕ್ಕೂಟ ಮತ್ತು ಸಂಯೋಗಿತಾ ನಡುವಣ ಪ್ರಕರಣ].

ಕೇವಲ ಹಚ್ಚೆ ಇದ್ದ ಮಾತ್ರಕ್ಕೆ ಅನರ್ಹತೆಗೆ ಆಧಾರವಾಗಬಾರದು. ಬದಲಿಗೆ ವೈದ್ಯಕೀಯ ಅನರ್ಹತೆಯ ಅಂಶ ನಿರ್ಧರಿಸಲು ಹಚ್ಚೆಯ ಗಾತ್ರ ಮತ್ತು ಅದನ್ನು ಹಾಕಿಸಿಕೊಂಡ ದೇಹದ ಭಾಗವೂ ಮುಖ್ಯವಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಮನೀಂದ್ರ ಮೋಹನ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಮುನ್ನೂರಿ ಲಕ್ಷ್ಮಣ್ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

ಬಲ ಮುಂದೋಳಿನ ಒಳ ಭಾಗದಲ್ಲಿ ಹಚ್ಚೆ ಅಳಿಸಿದ ಗಾಯದ ಗುರುತು ಇದ್ದ ಮಾತ್ರಕ್ಕೆ ವೈದ್ಯಕೀಯವಾಗಿ ಅನರ್ಹರೆಂದು ಪರಿಗಣಿಸಬೇಕಿಲ್ಲ. ಬೇರೆ ರೀತಿಯಲ್ಲಿ ಹೇಳುವುದಾದರೆ ಟ್ಯಾಟೂ ಅಳಿಸಿದ ಗಾಯದ ಗುರುತು ಅಥವಾ ಬೇರೆ ಗಾಯದ ಕಾರಣಕ್ಕಾಗಿ ಉಳಿದ ಗಾಯವನ್ನು ಭಿನ್ನವಾಗಿ ಪರಿಗಣಿಸುವಂತಿಲ್ಲ ಎಂದು ನ್ಯಾಯಾಲಯ ನುಡಿದಿದೆ.

ತನ್ನ ಬಲ ಮುಂದೋಳಿನ ಒಳಭಾಗದಲ್ಲಿ ಹಚ್ಚೆ ತೆಗೆಸಿದ ಗಾಯದ ಗುರುತಿದ್ದರೂ ಮಹಿಳೆಯೊಬ್ಬರನ್ನು ಸೇನೆಯ ಪೇದೆಯಾಗಿ ನೇಮಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ.

ಟ್ಯಾಟೂ ಗುರುತುಗಳು ವೈದ್ಯಕೀಯ ಅನರ್ಹತೆಯ ಲಕ್ಷಣಗಳಾಗಿದ್ದು ಅಭ್ಯರ್ಥಿಯನ್ನು ಅನರ್ಹ ಎಂದು ಘೋಷಿಸುವ ವೈದ್ಯಕೀಯ ಮಂಡಳಿಯ ನಿರ್ಧಾರದಲ್ಲಿ ಏಕಸದಸ್ಯ ಪೀಠ ಮಧ್ಯಪ್ರವೇಶಿಸಲಾಗದು ಎಂದು ವಿಭಾಗೀಯ ಪೀಠದ ಎದುರು ಕೇಂದ್ರ ಸರ್ಕಾರ ವಾದಿಸಿತ್ತು.

ಈ ವಿಚಾರವಾಗಿ ಗೃಹ ವ್ಯವಹಾರಗಳ ಸಚಿವಾಲಯ ಹೊರಡಿಸಿದ್ದ ಮಾರ್ಗಸೂಚಿ ಪರಿಶೀಲಿಸಿದ ನ್ಯಾಯಾಲಯ ಕೆಲ ಪ್ರಕರಣಗಳಲ್ಲಿ ವಿನಾಯಿತಿ ನೀಡಿರುವುದರಿಂದ ಹಚ್ಚೆ ಗುರುತಿದ್ದವರಿಗೆ ಸಂಪೂರ್ಣ ನಿಷೇಧ ಇಲ್ಲ ಎಂದಿತು.

“ಮೊದಲನೆಯದಾಗಿ, ಧಾರ್ಮಿಕ ಚಿಹ್ನೆ ಅಥವಾ ಆಕೃತಿ ಇರುವ ಹಚ್ಚೆ ಮತ್ತು ಹೆಸರಿಗೆ ಅನುಮತಿ ಇದೆ. ಭಾರತೀಯ ಸೇನೆಯಲ್ಲಿ ಅನುಸರಿಸುತ್ತಿರುವ ಪದ್ಧತಿಗೆ ಅನುಗುಣವಾಗಿ ಸಿಆರ್‌ಪಿಎಫ್‌ನಲ್ಲಿ ಇದನ್ನು ಅನುಮತಿಸಲಾಗುತ್ತಿದೆ. ಈ ಅಂಶವನ್ನು ನಿಬಂಧನೆಗಳಲ್ಲಿಯೇ ಸ್ಪಷ್ಟವಾಗಿ ಹೇಳಲಾಗಿದೆ. ಹೀಗಾಗಿ  ಹಚ್ಚೆ ಗುರುತಿಗೆ ಸಂಪೂರ್ಣ ನಿಷೇಧವಿಲ್ಲ” ಎಂದು ಅದು ಹೇಳಿದೆ.

ಅಭ್ಯರ್ಥಿಯನ್ನು ವೈದ್ಯಕೀಯವಾಗಿ ಅನರ್ಹಗೊಳಿಸಬಹುದಾದ ಹಚ್ಚೆಯ ಗಾತ್ರ ಮತ್ತು ಅದನ್ನು ಹಾಕಿಸಿಕೊಂಡ ದೇಹದ ಭಾಗಕ್ಕೆ ಸಂಬಂಧಿಸಿದ ಸೆಕ್ಷನ್‌ಗಳಿವೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ.

ಎಡ ಮುಂದೋಳಿನ ಒಳಭಾಗದಂತಹ ದೇಹದ  ಜಾಗಗಳಲ್ಲಿ ಅಂದರೆ ಸೆಲ್ಯೂಟ್‌ ಮಾಡಿದಾಗ ಕಾಣದ ಅಂಗ ಅಥವಾ ಅಂಗೈನ ಮೇಲ್ಭಾಗದಲ್ಲಿ ಹಾಕಿಸಿಕೊಳ್ಳುವ ಹಚ್ಚೆಗೆ ಅನುಮತಿ ಇದೆ. ಗಾತ್ರದ ವಿಚಾರದಲ್ಲಿ ದೇಹದ ನಿರ್ದಿಷ್ಟ ಭಾಗದ 1/4  ಭಾಗಕ್ಕಿಂತ ಕಡಿಮೆ ಇರುವ ಹಚ್ಚೆಗಳಿಗೆ ಅನುಮತಿ ನೀಡಲಾಗಿದೆ ಎಂದು ಅದು ಹೇಳಿದೆ

 ಹೀಗಾಗಿ ಕೆಲ ಸಂದರ್ಭಗಳಲ್ಲಷ್ಟೇ ಹಚ್ಚೆ ವೈದ್ಯಕೀಯ ಅನರ್ಹತೆಗೆ ಆಧಾರವಾಗುತ್ತದೆ ವಿನಾ ಎಲ್ಲಾ ಪ್ರಕರಣಗಳಲ್ಲೂ ಅಲ್ಲ ಎಂದು ಅದು ಅಭಿಪ್ರಾಯಪಟ್ಟಿದೆ. ಆದ್ದರಿಂದ ಈಗಾಗಲೇ ಹಚ್ಚೆ ಗುರುತು ತೆಗೆದ ಗಾಯದ ಗುರುತು ಉಳಿದಿದ್ದರೆ, ಅದು ಅನರ್ಹತೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಅದು ತಿಳಿಸಿದೆ.  ಈ ಕಾರಣಕ್ಕೆ ಏಕಸದಸ್ಯ ಪೀಠದ ತರ್ಕಕ್ಕೆ ಸಮ್ಮತಿ ಸೂಚಿಸಿದ ನ್ಯಾಯಾಲಯ ಅಭ್ಯರ್ಥಿಯನ್ನು ರದ್ದುಗೊಳಿಸಿದ್ದನ್ನು ಅದು ಸೂಕ್ತ ರೀತಿಯಲ್ಲಿಯೇ ಅಮಾನ್ಯಗೊಳಿಸಿದೆ ಎಂದಿದೆ.