Police officer 
ಸುದ್ದಿಗಳು

ಶಿಕ್ಷಕಿ ಮೇಲಿನ ಅತ್ಯಾಚಾರ ಆರೋಪ: ಮೂಡುಬಿದರೆ ಇನ್ಸ್‌ಪೆಕ್ಟರ್‌ ಸಂದೇಶ್‌ ಬಂಧನಕ್ಕೆ ತಡೆ ನೀಡಲು ಹೈಕೋರ್ಟ್‌ ನಕಾರ

“ಇನ್ಸ್‌ಪೆಕ್ಟರ್‌ ಮಾಡಿರುವುದು ಅಧಿಕಾರದ ದುರುಪಯೋಗವಲ್ಲವೇ? ದೂರು ಕೊಡಲು ಬಂದ ಮಹಿಳೆಯೊಂದಿಗೆ ಸಂಬಂಧ ಬೆಳೆಸಿದರೆ ಇನ್ನೇನಾಗುತ್ತದೆ?” ಎಂದು ಖಾರವಾಗಿ ಪ್ರಶ್ನಿಸಿತು.

Bar & Bench

ಅತ್ಯಾಚಾರ ಆರೋಪ ಎದುರಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಇನ್ಸ್‌ಪೆಕ್ಟರ್‌ ಪಿ ಜಿ ಸಂದೇಶ್‌ ಬಂಧನಕ್ಕೆ ಹೈಕೋರ್ಟ್‌ ಬುಧವಾರ ಮಧ್ಯಂತರ ತಡೆ ನೀಡಲು ನಿರಾಕರಿಸಿದೆ. ಹೀಗಾಗಿ, ಸಂದೇಶ್‌ ಬಂಧನ ಭೀತಿ ಎದುರಿಸುವಂತಾಗಿದೆ.

ಪಿ ಜಿ ಸಂದೇಶ್‌ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ಬಳಿಕ ಪೀಠವು ವಿಚಾರಣೆಯನ್ನು ಏ.6ಕ್ಕೆ ಮುಂದೂಡಿತು.

ಆಗ ಅರ್ಜಿದಾರರ ಪರ ವಕೀಲರು, ಅಲ್ಲಿಯವರೆಗೆ ಅರ್ಜಿದಾರ ಇನ್ಸಪೆಕ್ಟರ್‌ನನ್ನು ಬಂಧಿಸದಂತೆ ಮಧ್ಯಂತರ ತಡೆ ನೀಡಬೇಕು ಎಂದು ಮನವಿ ಮಾಡಿದರು. ಆದರೆ ಹೈಕೋರ್ಟ್‌ ಸ್ಪಷ್ಟವಾಗಿ ನಿರಾಕರಿಸಿತು.

“ಇನ್ಸ್‌ಪೆಕ್ಟರ್‌ ಮಾಡಿರುವುದು ಅಧಿಕಾರದ ದುರುಪಯೋಗವಲ್ಲವೇ? ದೂರು ಕೊಡಲು ಬಂದ ಮಹಿಳೆಯೊಂದಿಗೆ ಸಂಬಂಧ ಬೆಳೆಸಿದರೆ ಇನ್ನೇನಾಗುತ್ತದೆ?” ಎಂದು ಖಾರವಾಗಿ ಪ್ರಶ್ನಿಸಿತು.

ಅರ್ಜಿದಾರರ ಪರ ವಕೀಲರು “ಇನ್ಸ್‌ಪೆಕ್ಟರ್‌ ವಿರುದ್ಧದ ಅತ್ಯಾಚಾರ ಆರೋಪಕ್ಕೆ ಆಧಾರಗಳಿಲ್ಲ. ಆದರೆ, ದೂರು ನೀಡಿರುವ  ಮಹಿಳೆಯೊಂದಿಗೆ ಒಪ್ಪಿತ ಸಂಬಂಧವಿತ್ತು” ಎಂದು ವಾದಿಸಿದರು.

ಪ್ರಕರಣದ ಹಿನ್ನೆಲೆ: ಸಂತ್ರಸ್ತೆ ಶಿಕ್ಷಕಿ ನೀಡಿದ ದೂರಿನ ಮೇರೆಗೆ ಮೂಡಿಬಿದಿರೆ ಇನ್ಸ್‌ಪೆಕ್ಟರ್‌ ಆಗಿದ್ದ ಸಂದೇಶ್‌ ವಿರುದ್ದ ಬೆಳ್ತಂಗಡಿ ತಾಲ್ಲೂಕಿನ ವೇಣೂರು ಪೊಲೀಸ್‌ ಠಾಣೆಯಲ್ಲಿ ಬಿಎನ್‌ಎಸ್‌ 376(2)(ಎ)(1), 376(2)(ಎನ್‌), 384, 506 ಅಡಿ ಎಫ್‌ಐಆರ್‌ ದಾಖಲಾಗಿದೆ. ಮಹಿಳೆಯರನ್ನು ಲೈಂಗಿಕವಾಗಿ ಪೀಡಿಸಿದ ಆರೋಪ ಸಂದೇಶ್‌ ಮೇಲಿದೆ. ಇತ್ತೀಚೆಗೆ ಇಬ್ಬರು ಮಹಿಳೆಯರು ಮಾಡಿದ್ದ ಆರೋಪ ಬಾರಿ ಚರ್ಚೆಯಾಗಿತ್ತು. ಆದರೆ, ಪೊಲೀಸ್‌ ಪ್ರಾಥಮಿಕ ತನಿಖೆಯಲ್ಲಿಇದು ಪ್ರಚೋದಿತ ಹಾಗೂ ಸುಳ್ಳು ಆರೋಪ ಎಂದು ಕೇಳಿಬಂದಿತ್ತು. ಅದರ ಬೆನ್ನಲ್ಲೇ ಶಿಕ್ಷಕಿಯೊಬ್ಬರು ದೂರು ನೀಡಿದ್ದು, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.

ಬೆಳ್ತಂಗಡಿ ತಾಲ್ಲೂಕಿನಲ್ಲಿ ಸರ್ಕಲ್‌ ಇನ್ಸ್‌ಪೆಕ್ಟರ್‌ ಆಗಿದ್ದ ಸಂದೇಶ್‌, 2018 ರಿಂದ 2023ರ ವರೆಗೆ ಮನೆಗೆ ಬಂದು ಅತ್ಯಾಚಾರ ಮಾಡಿರುವುದಾಗಿ ಸ್ವತಃ ಶಿಕ್ಷಕಿ ಆರೋಪಿಸಿದ್ದಾರೆ. ಹಲವು ಕಾರಣಗಳನ್ನು ಹಿಡಿದು, ಕೆಲ ಪ್ರಕರಣಗಳ ಕುರಿತು ಬೆದರಿಸಿ ನಿರಂತರವಾಗಿ ಅತ್ಯಾಚಾರ ಮಾಡಿದ್ದಾರೆ. 2018 ರಿಂದ 2023ರವರೆಗೆ ಸತತ 5 ವರ್ಷಗಳ ಕಾಲ ಅತ್ಯಾಚಾರ ಎಸಗಿದ್ದಾರೆ. ಜೀವ ಭಯ, ಮಾನ, ಕುಟುಂಬಸ್ಥರ ವಿರುದ್ಧವೂ ಬೆದರಿಕೆ ಹಾಕಿದ್ದ ಕಾರಣ ಮೌನವಾಗಿದ್ದೆ ಎಂದು ಶಿಕ್ಷಕಿ ದೂರಿದ್ದಾರೆ. ಆರೋಪದ ಹಿನ್ನೆಲೆಯಲ್ಲಿ ಸದ್ಯ ಸಂದೇಶ್‌ ಅವರನ್ನು ಸರ್ಕಾರ ಅಮಾನತುಗೊಳಿಸಿದೆ.