Karnataka HC, POCSO
Karnataka HC, POCSO  
ಸುದ್ದಿಗಳು

ನರ್ಸರಿ ಮಗುವಿಗೆ ಅಪಮಾನ: ಶಿಕ್ಷಕಿ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ ರದ್ದುಪಡಿಸಲು ಹೈಕೋರ್ಟ್‌ ನಕಾರ

Bar & Bench

ಬೆಂಗಳೂರಿನ ಖಾಸಗಿ ಶಾಲೆಯ ನರ್ಸರಿಯಲ್ಲಿ ಕಲಿಯುತ್ತಿದ್ದ ಐದು ವರ್ಷದ ಹೆಣ್ಣು ಮಗುವನ್ನು ಅಪಮಾನಗೊಳಿಸಿದ್ದ ಶಿಕ್ಷಕಿಯ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದು ಮಾಡಲು ಕರ್ನಾಟಕ ಹೈಕೋರ್ಟ್ ಈಚೆಗೆ ನಿರಾಕರಿಸಿದೆ.

ಸಂತ್ರಸ್ತ ಮಗುವಿನ ತಾಯಿ 2017ರಲ್ಲಿ ಹಲಸೂರು ಠಾಣೆಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ತನ್ನ ವಿರುದ್ಧ ಸಲ್ಲಿಸಿರುವ ಆರೋಪಪಟ್ಟಿ ರದ್ದು ಕೋರಿ 41 ವರ್ಷದ ಶಿಕ್ಷಕಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಪ್ರಕರಣ ವಜಾಗೊಳಿಸಲು ನಿರಾಕರಿಸಿದೆ.

“ಪೋಕ್ಸೊ ಕಾಯಿದೆಯಡಿ ಒಬ್ಬ ವ್ಯಕ್ತಿಗೆ ತನ್ನ ದೇಹವನ್ನು ಅಥವಾ ಅವನ ಅಥವಾ ಅವಳ ದೇಹದ ಯಾವುದೇ ಭಾಗವನ್ನು ಇತರ ವ್ಯಕ್ತಿಗಳು ನೋಡುವಂತೆ ಪ್ರದರ್ಶಿಸುವಂತೆ ಹೇಳಿದರೆ ಅದು ಲೈಂಗಿಕ ದೌರ್ಜನ್ಯ ಮತ್ತು ಅಪರಾಧ” ಎಂದು ಪೀಠ ಆದೇಶದಲ್ಲಿ ಹೇಳಿದೆ.

“ಶಿಕ್ಷಕಿ ಬಾಲಕಿಯ ಪ್ಯಾಂಟ್ ಅನ್ನು ಇತರ ಮಕ್ಕಳ ಮುಂದೆ ಎಳೆದು ಆ ಮಗು ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿದ್ದಾರೆ. ಶಿಕ್ಷಕರಾಗಿ ಮಕ್ಕಳು ತಪ್ಪು ಮಾಡಿದಾಗ ತಿದ್ದುವ ಬದಲು, ಎಳೆಯ ವಯಸ್ಸಿನಲ್ಲಿಯೇ ಮಕ್ಕಳನ್ನು ಈ ರೀತಿ ನಡೆಸಿಕೊಳ್ಳುವ ಮೂಲಕ ಆಘಾತ ಉಂಟು ಮಾಡಿದರೆ ಅದು ಮಗುವಿನ ಮನಸ್ಥಿತಿ ಮೇಲೆ ಗಂಭೀರ ಪರಿಣಾಮ ಬೀರುತ್ತದೆ” ಎಂದು ಪೀಠ ಹೇಳಿದೆ.

‘‘ಶಿಕ್ಷಕರ ಕೈಯಿಂದ ಆಕ್ರಮಣಕಾರಿ ನಡವಳಿಕೆ ಅಥವಾ ಹಿಂಸೆ ಅನುಭವಿಸುವ ಮಕ್ಕಳು ಸಾಮಾನ್ಯವಾಗಿ ಭಾವನಾತ್ಮಕ ಮತ್ತು ವರ್ತನಾ ಸಮಸ್ಯೆ ಬೆಳೆಸಿಕೊಳ್ಳುತ್ತಾರೆ. ಜೊತೆಗೆ ಅದು ಮಗುವಿನ ಮನಸಿನ ಮೇಲೆ ದೀರ್ಘಕಾಲೀನ ಪರಿಣಾಮ ಬೀರುತ್ತವೆ ಮತ್ತು ಮಗುವಿನ ಶೈಕ್ಷಣಿಕ ಕಾರ್ಯಕ್ಷಮತೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಮಗುವಿನ ಮೇಲೆ ಯಾವುದೇ ಶಿಕ್ಷಕರ ದಾಳಿ ಕ್ಷಮಿಸಲಾಗದು” ಎಂದು ನ್ಯಾಯಾಲಯ ಹೇಳಿದೆ.

“ಶಿಕ್ಷೆಯಾಗಿ ತನ್ನ ಪುತ್ರಿಯನ್ನು ಸುಮಾರು ಎರಡು ನಿಮಿಷ ಕತ್ತಲೆಯ ಕೋಣೆಯಲ್ಲಿ ಕೂಡಿ ಹಾಕಲಾಗಿದೆ ಎಂದು ದೂರುದಾರರು ಆರೋಪಿಸಿದ್ದರು. ವಿಚಾರಣಾಧೀನ ನ್ಯಾಯಾಲಯವು ಮಗುವಿನ ಹೇಳಿಕೆ ದಾಖಲಿಸಿದ್ದು, ದೂರಿನಲ್ಲಿ ಮಾಡಿರುವ ಆರೋಪಗಳಿಗೂ ಹೇಳಿಕೆಗೂ ಸಾಮ್ಯತೆ ಇದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

“ಐದು ವರ್ಷದ ಹೆಣ್ಣು ಮಗುವಿನೊಂದಿಗೆ ವ್ಯವಹರಿಸುವಾಗ ಶಿಕ್ಷಕರು ಜಾಗರೂಕರಾಗಿರಬೇಕಾಗುತ್ತದೆ ಎಂದಿರುವ ನ್ಯಾಯಾಲಯವು ಶಿಕ್ಷಕರು ಕೋಲನ್ನು ಬಿಡಬೇಕು ಮತ್ತು ಮಗುವಿಗೆ ಕಲಿಸಲು ಮುಂದಾಗಬೇಕು. ಇದನ್ನು ಪ್ರತಿಯೊಬ್ಬ ಶಿಕ್ಷಕರೂ ಸಹ ನೆನಪಿನಲ್ಲಿಡಬೇಕು” ಎಂದು ಆದೇಶದಲ್ಲಿ ದಾಖಲಿಸಲಾಗಿದೆ.

ಪ್ರಕರಣದ ಹಿನ್ನೆಲೆ: ಸಂತ್ರಸ್ತ ಮಗುವಿನ ತಾಯಿ 2017ರಲ್ಲಿ ಹಲಸೂರು ಠಾಣೆಯಲ್ಲಿ ಶಿಕ್ಷಕಿ ವಿರುದ್ಧ ದೂರು ನೀಡಿದ್ದರು. ಆರೋಪಿ ಶಿಕ್ಷಕಿ ಆರಂಭದಲ್ಲಿ ಮಗುವಿಗೆ ಥಳಿಸುತ್ತಿದ್ದರು ಎಂದು ದೂರಿದ್ದರು. ಆ ನಡವಳಿಕೆಯನ್ನು ಪೋಷಕರು ವಿರೋಧಿಸಿದ ನಂತರ, ಶಿಕ್ಷೆಯಾಗಿ ಮಕ್ಕಳ ಪ್ಯಾಂಟ್ ಅನ್ನು ಕೆಳಕ್ಕೆ ಎಳೆಯಲು ಪ್ರಾರಂಭಿಸಿದರು ಮತ್ತು ತರಗತಿಯ ಇತರೆ ಮಕ್ಕಳು ಮಗುವನ್ನು ನಿಂದಿಸುವಂತೆ ಮಾಡಿದ್ದರಲ್ಲದೆ, ನಾಯಿಯನ್ನು ಸಾಕಿರುವ ಕತ್ತಲ ಕೋಣೆಯಲ್ಲಿ ಕೂಡಿ ಹಾಕುವುದಾಗಿ ಹೇಳಿ ಮಕ್ಕಳನ್ನು ಬೆದರಿಸಿದ್ದಾರೆ ಎಂದು ಆರೋಪಿಸಿದ್ದರು.

ಇದನ್ನು ಆಧರಿಸಿ ಪೊಲೀಸರು, ಲೈಂಗಿಕ ಅಪರಾಧಗಳಿಂದ ಮಕ್ಕಳ ತಡೆ ಕಾಯಿದೆ, 2012 - ಪೋಕ್ಸೊ ನಿಬಂಧನೆ ಅನ್ವಯ ಪ್ರಕರಣ ದಾಖಲಿಸಿದ್ದರು. ಆನಂತರ ಆರೋಪಪಟ್ಟಿಯನ್ನೂ ಸಲ್ಲಿಸಿದ್ದಾರೆ. ಹೀಗಾಗಿ, ಪ್ರಕರಣ ರದ್ದು ಕೋರಿ ಶಿಕ್ಷಕಿ ಹೈಕೋರ್ಟ್ ಮೊರೆ ಹೋಗಿದ್ದರು.