Teesta Setalvad and Supreme Court  Twitter
ಸುದ್ದಿಗಳು

ಹಿರಿಯ ರಾಜಕಾರಣಿ ಸೂಚನೆ ಮೇರೆಗೆ ತೀಸ್ತಾ ಸಂಚು: ಸುಪ್ರೀಂ ಕೋರ್ಟ್‌ಗೆ ಗುಜರಾತ್ ಸರ್ಕಾರದ ಪ್ರತಿಕ್ರಿಯೆ

ತೀಸ್ತಾ ವಿರುದ್ಧದ ಎಫ್ಐಆರ್, ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನಷ್ಟೇ ಆಧರಿಸಿಲ್ಲ. ಬದಲಿಗೆ ಗುಜರಾತ್ ಗಲಭೆಗೆ ಸಂಬಂಧಿಸಿದ ಸಾಕ್ಷ್ಯವನ್ನು ಹೇಗೆ ಆಕೆ ತಿರುಚಿದರು ಎಂಬುದನ್ನು ಅರಿಯಲು ಅದನ್ನು ದಾಖಲಿಸಲಾಗಿದೆ ಎಂದು ಗುಜರಾತ್ ಸರ್ಕಾರ ಹೇಳಿದೆ.

Bar & Bench

2002ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಸುಳ್ಳು ಸಾಕ್ಷಿ ಸೃಷ್ಟಿಸಿದ್ದಕ್ಕಾಗಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರ ವಿರುದ್ಧ ಹೂಡಲಾದ ಎಫ್‌ಐಆರ್ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನಷ್ಟೇ ಆಧರಿಸಿಲ್ಲ ಬದಲಿಗೆ ಪುರಾವೆಗಳಿಂದ ಕೂಡಿದೆ ಎಂದು ಗುಜರಾತ್‌ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ. [ತೀಸ್ತಾ ಅತುಲ್ ಸೆಟಲ್ವಾಡ್ ಇನ್ನಿತರರು ಮತ್ತು ಗುಜರಾತ್‌ ಸರ್ಕಾರದ ನಡುವಣ ಪ್ರಕರಣ].

ಇದುವರೆಗಿನ ತನಿಖೆಯಿಂದ, ತೀಸ್ತಾ ವಿರುದ್ಧ 2002ರ ಕೋಮುಗಲಭೆಗೆ ಸಂಬಂಧಿಸಿದ ಪುರಾವೆಗಳನ್ನು ತಿರುಚಿದ ಮತ್ತು ಸುಳ್ಳು ದಾಖಲೆ ಸೃಷ್ಟಿಸಿದ ಆರೋಪ ಮೇಲ್ನೋಟಕ್ಕೆ ಬಹಿರಂಗಗೊಂಡಿದೆ ಎಂದು ಗುಜರಾತ್‌ ಸರ್ಕಾರ ಸಲ್ಲಿಸಿರುವ ಅಫಿಡವಿಟ್‌ ತಿಳಿಸಿದೆ.

ಅಫಿಡವಿಟ್‌ನ ಪ್ರಮುಖ ಸಂಗತಿಗಳು

  • ಅರ್ಜಿದಾರೆ ಇತರೆ ಆರೋಪಿಗಳೊಂದಿಗೆ ಸೇರಿ ರಾಜಕೀಯ, ಹಣಕಾಸು ಮತ್ತಿತರ ಭೌತಿಕ ಲಾಭ ಗಳಿಸಲು ಸಂಚು ಹೂಡುವ ಮೂಲಕ ವಿವಿಧ ಕ್ರಿಮಿನಲ್‌ ಕೃತ್ಯಗಳನ್ನು ಎಸಗಿದ್ದರು ಎಂಬಂತಹ ಎಫ್‌ಐಆರ್‌ಗೆ ಪೂರಕವಾದ ದಾಖಲೆಗಳನ್ನು ಇದುವರೆಗೆ ನಡೆಸಲಾದ ತನಿಖೆ ಒದಗಿಸಿದೆ.

  • ರಾಜಕೀಯ ಪಕ್ಷವೊಂದರ ಹಿರಿಯ ನಾಯಕರೊಬ್ಬರ ಇಚ್ಛೆಯ ಮೇರೆಗೆ ಪ್ರಸ್ತುತ ಅರ್ಜಿದಾರರು ಇತರ ಆರೋಪಿಗಳೊಂದಿಗೆ ಸೇರಿ ಸಂಚು ರೂಪಿಸಿದ್ದಾರೆ.

ಗೋಧ್ರೋತ್ತರ ಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳನ್ನು ಬಂಧಿಸಲು ದಾಖಲೆಗಳನ್ನು ಸೃಷ್ಟಿಸಿದ ಆರೋಪದ ಮೇಲೆ ಬಂಧಿತರಾದ ತೀಸ್ತಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್‌ ಮತ್ತು ಎಸ್‌ ರವೀಂದ್ರ ಭಟ್‌ ಹಾಗೂ ಸುಧಾಂಶು ಧುಲಿಯಾ ಅವರಿದ್ದ ಪೀಠ ವಿಚಾರಣೆ ನಡೆಸುತ್ತಿದೆ.

ಗುಜರಾತ್‌ ಸರ್ಕಾರ ಪ್ರತಿಕ್ರಿಯೆ ಸಲ್ಲಿಸಬೇಕೆಂದು ಸರ್ವೋಚ್ಚ ನ್ಯಾಯಾಲಯ ಆಗಸ್ಟ್ 22ರಂದು ನೋಟಿಸ್‌ ನೀಡಿತ್ತು.