ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ತಾರಿಣಿ ಅವರ ನೇತೃತ್ವದ ಮೆಟ್ರೊ ರೈಲು ದರ ನಿಗದಿ ಸಮಿತಿ ಸಲ್ಲಿಸಿರುವ ವರದಿಯನ್ನು ಸಾರ್ವಜನಿಕಗೊಳಿಸುವಂತೆ ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ ಕರ್ನಾಟಕ ಹೈಕೋರ್ಟ್ ಸೋಮವಾರ ನೋಟಿಸ್ ಜಾರಿ ಮಾಡಿದೆ.
ಬಿಜೆಪಿ ಸಂಸದ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠವು ನಡೆಸಿತು.
ತೇಜಸ್ವಿ ಪರ ವಕೀಲರು, “ವರದಿ ಬಹಿರಂಗಗೊಳಿಸುವಂತೆ ಪತ್ರ ಬರೆದಿದ್ದು, ಸಂಬಂಧಿತ ಬಿಎಂಆರ್‌ಸಿಎಲ್ ಅಧಿಕಾರಿಯನ್ನು ಭೇಟಿ ಮಾಡಲಾಗಿದೆ” ಎಂದರು.
ಇದನ್ನು ಆಲಿಸಿದ ಪೀಠವು ಬಿಎಂಆರ್‌ಸಿಎಲ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಎರಡು ವಾರ ಮುಂದೂಡಿತು.
ಆನಂತರ ಪೀಠವು ತೇಜಸ್ವಿ ಸೂರ್ಯ ವಕೀಲರನ್ನು ಕುರಿತು “ನೀವು ತುಂಬಾ ಪ್ರಭಾವಿಯಾಗಿದ್ದೀರಿ, ಬಿಆರ್‌ಸಿಎಲ್‌ಗೆ ಆ ವರದಿ ಬಿಡುಗಡೆ ಮಾಡುವಂತೆ ಮಾಡಲಾವುದಿಲ್ಲವೇ?” ಎಂದು ಪ್ರಶ್ನಿಸಿತು.
ಅದಕ್ಕೆ ತೇಜಸ್ವಿ ಪರ ವಕೀಲರು “ಹೆಚ್ಚೆಂದರೆ ನಾವು ಬಿಎಂಆರ್‌ಸಿಎಲ್‌ಗೆ ಪತ್ರ ಬರೆಯಬಹುದು. ಸಾರ್ವಜನಿಕರು ಬಿಎಂಆರ್‌ಸಿಎಲ್‌ಗೆ ವರದಿ ಬಹಿರಂಗಪಡಿಸಲು ಕೇಳುತ್ತಿದ್ದಾರೆ. ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರನ್ನು ನೇರವಾಗಿ ತೇಜಸ್ವಿ ಸೂರ್ಯ ಭೇಟಿ ಮಾಡಿದ್ದಾರೆ. ಆದರೆ, ಅವರು ಪ್ರತಿಕ್ರಿಯಿಸುತ್ತಿಲ್ಲ. ರಾಜ್ಯ ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ಬಿಎಂಆರ್‌ಸಿಎಲ್ ಹೇಳುತ್ತಿದೆ. ಆದರೆ, ಕಾಯಿದೆಯಲ್ಲಿ ಬಿಎಂಆರ್‌ಸಿಎಲ್‌ಗೆ ಯಾವುದೇ ವಿನಾಯಿತಿಯಲ್ಲ” ಎಂದರು.
ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ ಮತ್ತು ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ದರ ನಿಗದಿಗೆ ಸಂಬಂಧಿಸಿದ ವರದಿಯನ್ನು ಈ ಹಿಂದೆ ದೆಹಲಿ, ಮುಂಬೈ ಮತ್ತು ಹೈದರಾಬಾದ್ ಮೆಟ್ರೊ ರೈಲು ನಿಗಮಗಳು ಸಾರ್ವಜನಿಕಗೊಳಿಸಿದ್ದವು. ಈ ನೆಲೆಯಲ್ಲಿ ಸ್ವೇಚ್ಛೆಯಿಂದ ನಡೆದುಕೊಳ್ಳುವುದನ್ನು ಬಿಟ್ಟು ಬಿಎಂಆರ್‌ಸಿಎಲ್ ವರದಿ ಬಹಿರಂಗಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಮೆಟ್ರೊ ರೈಲು (ಕಾರ್ಯನಿರ್ವಹಣೆ ಮತ್ತು ನಿರ್ವಹಣೆ) ಕಾಯಿದೆ ಸೆಕ್ಷನ್ 34ರ ಅನ್ವಯ 2024ರ ಸೆಪ್ಟೆಂಬರ್ 7ರಂದು ನಿವೃತ್ತ ನ್ಯಾ. ತಾರಣಿ ಅವರ ನೇತೃತ್ವದಲ್ಲಿ ಪರಿಷ್ಕೃತ ದರ ಪಟ್ಟಿ ಶಿಫಾರಸ್ಸು ಮಾಡುವಂತೆ ದರ ನಿಗದಿ ಸಮಿತಿಯನ್ನು ಬಿಎಂಆರ್‌ಸಿಎಲ್ ರಚಿಸಿತ್ತು. ಇದರ ಅನ್ವಯ ಸಮಿತಿಯು ದೇಶದ ವಿವಿಧೆಡೆ ಮತ್ತು ಸಿಂಗಪೋರ್ ಹಾಗೂ ಹಾಂಗ್‌ಕಾಂಗ್ ಸೇರಿ ಜಾಗತಿಕ ಮೆಟ್ರೊ ರೈಲು ಪ್ರಯಾಣ ದರಗಳನ್ನು ಅಧ್ಯಯನ ಮಾಡಿ 2024ರ ಡಿಸೆಂಬರ್ 16ರಂದು ವರದಿ ಸಲ್ಲಿಸಿತ್ತು. 2025ರ ಫೆಬ್ರವರಿ 8ರಂದು ಇದನ್ನು ಬಿಎಂಆರ್‌ಸಿಎಲ್ ಮಾಧ್ಯಮ ಹೇಳಿಕೆಯ ಮೂಲಕ ಜನರಿಗೆ ತಿಳಿಸಿತ್ತು.
ಇದರ ಭಾಗವಾಗಿ 2025ರ ಫೆಬ್ರವರಿ 9ರಂದು ಕೆಲವು ಕಡೆ ಶೇ.100ರಷ್ಟು ಅಂದರೆ ಮೆಟ್ರೊ ರೈಲು ಟಿಕೆಟ್ ದರವನ್ನು 60ರಿಂದ 90 ರೂಪಾಯಿಗೆ ಹೆಚ್ಚಿಸಲಾಗಿದತ್ತು. ಆ ಮೂಲಕ ಇಡೀ ದೇಶದಲ್ಲೇ ದುಬಾರಿ ಎಂಬ ಅಪಖ್ಯಾತಿಗೆ ಗುರಿಯಾಗಿತ್ತು. ಇದಕ್ಕೆ ಸಾರ್ವಜನಿಕವಾಗಿ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ 2025ರ ಫೆಬ್ರವರಿ 14ರಂದು ಬಿಎಂಆರ್‌ಸಿಎಲ್ ಶೇ.71ಕ್ಕೆ ಗರಿಷ್ಠ ಟಿಕೆಟ್ ದರ ಮಿತಿಗೊಳಿಸಿತ್ತು.
ಹೀಗಾಗಿ, ದರ ನಿಗದಿ ಸಮಿತಿ ವರದಿ ಬಹಿರಂಗಗೊಳಿಸುವಂತೆ ಬಿಎಂಆರ್‌ಸಿಎಲ್‌ಗೆ ಹಲವು ಬಾರಿ ಮನವಿ ಮಾಡಿದ್ದರೂ ಅದಕ್ಕೆ ಸ್ಪಂದಿಸುತ್ತಿಲ್ಲ ಎಂದು ಆಕ್ಷೇಪಿಸಿ ತೇಜಸ್ವಿ ಸೂರ್ಯ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ವಕೀಲ ಅನಿರುದ್ಧ್ ಕುಲಕರ್ಣಿ ವಕಾಲತ್ತು ಹಾಕಿದ್ದಾರೆ.