Taj Mahal
Taj Mahal 
ಸುದ್ದಿಗಳು

ತಾಜ್‌ ಮಹಲ್‌ ಕೊಠಡಿ ತೆರೆಯಲು ಕೋರಿದ್ದ ಪಿಐಎಲ್‌ ವಜಾ ಮಾಡಿದ ಸುಪ್ರೀಂ; 'ಪ್ರಚಾರ ಹಿತಾಸಕ್ತಿ ಅರ್ಜಿ' ಎಂದ ಪೀಠ

Bar & Bench

ತಾಜ್‌ ಮಹಲ್‌ ಶಿವನ ದೇವಸ್ಥಾನವಾಗಿದ್ದು, ಅದನ್ನು 'ತೇಜೊ ಮಹಾಲಯ' ಎಂದು ಇತಿಹಾಸದಲ್ಲಿ ಹೇಳಲಾಗಿದೆ ಎನ್ನುವ ವಾದಕ್ಕೆ ಅಂತ್ಯ ಹಾಡುವ ದೃಷ್ಟಿಯಿಂದ ತಾಜ್‌ ಮಹಲ್‌ನ ಕೆಲವು ಕೊಠಡಿಗಳನ್ನು ತೆರೆಯಲು ಆದೇಶಿಸಬೇಕು ಎಂದು ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾ ಮಾಡಿದೆ [ಡಾ. ರಜನೀಶ್‌ ಸಿಂಗ್‌ ವರ್ಸಸ್‌ ಭಾರತ ಸರ್ಕಾರ ಮತ್ತಿತರರು].

ಬಿಜೆಪಿಯ ಅಯೋಧ್ಯಾ ವಿಭಾಗದ ಮಾಧ್ಯಮ ಮೇಲ್ವಿಚಾರಕ ಎಂದು ಹೇಳಿಕೊಂಡಿದ್ದ ಡಾ. ರಜನೀಶ್‌ ಸಿಂಗ್‌ ಎಂಬುವರು ಅಲಾಹಾಬಾದ್‌ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯು 'ಪ್ರಚಾರ ಹಿತಾಸಕ್ತಿ ಅರ್ಜಿ' ಎಂದು ನ್ಯಾಯಮೂರ್ತಿಗಳಾದ ಎಂ ಆರ್‌ ಶಾ ಮತ್ತು ಎಂ ಎಂ ಸುಂದರೇಶ್‌ ನೇತೃತ್ವದ ವಿಭಾಗೀಯ ಪೀಠವು ಹೇಳಿದೆ.

“ಪ್ರಚಾರ ಹಿತಾಸಕ್ತಿ ಹೊಂದಿರುವ ಅರ್ಜಿಯನ್ನು ವಜಾ ಮಾಡಿರುವ ಹೈಕೋರ್ಟ್‌ ಯಾವುದೇ ತಪ್ಪು ಎಸಗಿಲ್ಲ” ಎಂದು ಸುಪ್ರೀಂ ಕೋರ್ಟ್‌ ಹೇಳಿತು.

ಮೊಘಲ್‌ರ ಕಾಲದಲ್ಲಿ ಷಹಜಹಾನ್‌ ನಿರ್ದೇಶನದಂತೆ ತಾಜ್‌ಮಹಲ್‌ನಲ್ಲಿ ಹುದುಗಿಸಿಡಲಾಗಿರುವ ಪ್ರಮುಖ ಐತಿಹಾಸಿಕ ಮೂರ್ತಿಗಳು, ಶಾಸನಗಳನ್ನು ಪತ್ತೆ ಹಚ್ಚಲು ಸತ್ಯ ಶೋಧನಾ ಸಮಿತಿ ರಚಿಸಿಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ತೇಜೋ ಮಹಾಲಯ ಎಂದು ಕರೆಯಲಾಗುವ ಹಳೆಯ ಶಿವ ದೇವಾಲಯವೇ ತಾಜ್‌ ಮಹಲ್‌ ಎಂದು ಹಲವು ಹಿಂದೂ ಸಂಘಟನೆಗಳು ಹೇಳುತ್ತಿವೆ. ಇದನ್ನು ಹಲವು ಇತಿಹಾಸಕಾರರು ಬೆಂಬಲಿಸಿದ್ದಾರೆ ಎಂದು ಅಲಾಹಾಬಾದ್‌ ಹೈಕೋರ್ಟ್‌ ಮುಂದೆ ಅರ್ಜಿದಾರರು ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ಹಿಂದೂ ಮತ್ತು ಮುಸ್ಲಿಮ್‌ ಸಮುದಾಯಗಳು ಕಚ್ಚಾಡುತ್ತಿದ್ದು ವಿವಾದಕ್ಕೆ ಅಂತ್ಯ ಹಾಡಬೇಕಿದೆ ಎಂದು ವಾದಿಸಲಾಗಿತ್ತು.

ನಾಲ್ಕು ಅಂತಸ್ತು ಹೊಂದಿರುವ ತಾಜ್‌ ಮಹಲ್‌ ಕಟ್ಟಡದಲ್ಲಿ ಮೇಲೆ ಮತ್ತು ಕೆಳಗೆ ಒಟ್ಟು 22 ಕೊಠಡಿಗಳಿದ್ದು, ಅವುಗಳನ್ನು ಶಾಶ್ವತವಾಗಿ ಮುಚ್ಚಲಾಗಿದೆ. ಈ ಕೊಠಡಿಗಳಲ್ಲಿ ಶಿವನ ದೇವಾಲಯವಿದೆ ಎಂದು ಇತಿಹಾಸಕಾರರಾದ ಪಿ ಎನ್‌ ಓಕ್‌ ಸೇರಿದಂತೆ ಹಲವು ಹಿಂದೂಗಳು ನಂಬಿದ್ದಾರೆ ಎಂದು ಸಿಂಗ್‌ ವಾದಿಸಿದ್ದರು.

ತೇಜೋ ಮಹಾಲಯದ ಕುರಿತಂತೆ ನ್ಯಾಯಾಲಯದ ಮುಂದೆ ಇದೇ ಮೊದಲ ಬಾರಿಗೇನೂ ಪ್ರಕರಣ ಬಂದಿಲ್ಲ. ತಾಜ್‌ ಮಹಲ್‌, ತೇಜೋ ಮಹಾಲಯ ದೇವಸ್ಥಾನ ಅರಮನೆಯಾಗಿತ್ತು ಎಂದು ಆಗ್ರಾ ಮೂಲದ ಆರು ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಸರ್ಕಾರವು 2017ರಲ್ಲಿ ಕಟ್ಟುಕತೆ ಎಂದಿತ್ತು.