Telangana High Court 
ಸುದ್ದಿಗಳು

ನ್ಯಾಯಾಲಯದ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸದಂತೆ ಜಿಲ್ಲಾ ನ್ಯಾಯಾಲಯಗಳಿಗೆ ತೆಲಂಗಾಣ ಹೈಕೋರ್ಟ್ ಸೂಚನೆ

ಇದೇ ರೀತಿಯ ಸುತ್ತೋಲೆಗಳನ್ನು ಮೇ 1987 ಮತ್ತು ಮೇ 2018 ರಲ್ಲಿ ಹೊರಡಿಸಿರುವುದನ್ನು ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್ ಉಲ್ಲೇಖಿಸಿದ್ದಾರೆ.

Bar & Bench

ನ್ಯಾಯಾಲಯದ ಆವರಣದಲ್ಲಿ ಯಾವುದೇ ರೀತಿಯ ಧಾರ್ಮಿಕ ಕಾರ್ಯಕ್ರಮ ಅಥವಾ ಸಮಾರಂಭ ಆಚರಿಸದಂತೆ ಇಲ್ಲವೇ ಆಯೋಜಿಸದಂತೆ ಜಿಲ್ಲಾ ನ್ಯಾಯಾಲಯಗಳಿಗೆ ನಿರ್ದೇಶಿಸಿ ತೆಲಂಗಾಣ ಹೈಕೋರ್ಟ್ ಕಳೆದ ವಾರ ಸುತ್ತೋಲೆ ಹೊರಡಿಸಿದೆ.

ಜಿಲ್ಲಾ ನ್ಯಾಯಾಲಯಗಳ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಸಮಾರಂಭಗಳನ್ನು ಆಯೋಜಿಸುತ್ತಿರುವುದನ್ನು ಇತ್ತೀಚೆಗೆ ಹೈಕೋರ್ಟ್‌ ಗಮನಕ್ಕೆ ತರಲಾಗಿತ್ತು ಎಂದು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ನ್ಯಾಯಾಲಯದ ಆವರಣದಲ್ಲಿ ಯಾವುದೇ ರೀತಿಯ ಧಾರ್ಮಿಕ ಸಮಾರಂಭಗಳಿಗೆ ಅವಕಾಶ ನೀಡದಂತೆ ನ್ಯಾಯಾಂಗ ಅಧಿಕಾರಿಗಳಿಗೆ ಸೂಚಿಸಿ ಇದೇ ರೀತಿಯ ಸುತ್ತೋಲೆಗಳನ್ನು ಮೇ 1987 ಮತ್ತು ಮೇ 2018 ರಲ್ಲಿ ಹೊರಡಿಸಿರುವುದನ್ನು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಉಲ್ಲೇಖಿಸಿದ್ದಾರೆ.

“ಪ್ರಸ್ತುತ ವಿದ್ಯಮಾನವನ್ನು ಹೈಕೋರ್ಟ್‌ ಬಹಳ ಗಂಭೀರವಾಗಿ ಪರಿಗಣಿಸಿದೆ. ವಕೀಲರು ಅಥವಾ ವಕೀಲ ಸಂಘಗಳು ಹಾಗೂ ಇತರರು ನ್ಯಾಯಾಲಯದ ಆವರಣದಲ್ಲಿ ಧಾರ್ಮಿಕ ಸಮಾರಂಭಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸದಂತೆ 1987 ಮತ್ತು 2018 ರಲ್ಲಿ ಹೊರಡಿಸಿದ ಹಿಂದಿನ ಸುತ್ತೋಲೆಗಳನ್ನು ಇಲ್ಲಿ ಮತ್ತೆ ಉಲ್ಲೇಖಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಸೂಚನೆಗಳನ್ನು ಪಾಲಿಸಲು ನ್ಯಾಯಾಂಗ ಅಧಿಕಾರಿಗಳು ವಿಫಲರಾದರೆ, ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

"ಇದಲ್ಲದೆ, ಎಲ್ಲಾ ಘಟಕಗಳ ಮುಖ್ಯಸ್ಥರು ತಮ್ಮ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುವ ನ್ಯಾಯಾಂಗ ಅಧಿಕಾರಿಗಳಿಗೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲು ನಿರ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಉಂಟಾಗುವ ಯಾವುದೇ ವ್ಯತ್ಯಯ ಗಂಭೀರವಾಗಿ ಪರಿಗಣಿಸಲಾಗುವುದು" ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.