ಹೈದರಾಬಾದ್‌ನಲ್ಲಿ ಡಿಸೆಂಬರ್ 4 ರಂದು 'ಪುಷ್ಪ- 2' ಚಿತ್ರದ ಪ್ರಥಮ ಪ್ರದರ್ಶನದ ವೇಳೆ ಕಾಲ್ತುಳಿತ ಸಂಭವಿಸಿ ಮಹಿಳೆಯೊಬ್ಬರ ಸಾವಿಗೆ ಕಾರಣವಾದ ಘಟನೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ತೆಲುಗು ಚಲನಚಿತ್ರ ನಟ ಅಲ್ಲು ಅರ್ಜುನ್‌ಗೆ ತೆಲಂಗಾಣ ಹೈಕೋರ್ಟ್ ಶುಕ್ರವಾರ ಮಧ್ಯಂತರ ಜಾಮೀನು ನೀಡಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅಲ್ಲು ಅರ್ಜುನ್ ಅವರನ್ನು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಜಾಮೀನು ಕೋರಿ ಅಲ್ಲು ಅರ್ಜುನ್ ಪರ ವಕೀಲರು ತ್ವರಿತವಾಗಿ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಏಕಸದಸ್ಯ ಪೀಠದ ನ್ಯಾಯಮೂರ್ತಿ ಜುವ್ವಾಡಿ ಶ್ರೀದೇವಿ ಅವರು, ಅರ್ಜುನ್ ಅವರು ಅಗತ್ಯ ಅನುಮತಿ ಪಡೆದು ಸಿನಿಮಾದ ಪ್ರಥಮ ಪ್ರದರ್ಶನಕ್ಕೆ ಹೋಗಿರುವುದರಿಂದ ಘಟನೆಗೆ ಪ್ರಾಥಮಿಕ ಹೊಣೆಗಾರರಾಗಲು ಸಾಧ್ಯವಿಲ್ಲ ಎಂದು ಹೇಳಿ ಮಧ್ಯಂತರ ಜಾಮೀನು ಮಂಜೂರು ಮಾಡಿದರು.
ಚಿತ್ರದ ಪೂರ್ವಭಾವಿ ಪ್ರದರ್ಶನಕ್ಕೆ ಹೋದರೆ ಇಂತಹ ಅಹಿತಕರ ಘಟನೆ ಸಂಭವಿಸಬಹುದು ಎಂಬ ಅರಿವು ಅಲ್ಲು ಅರ್ಜುನ್‌ಗೆ ಇತ್ತು ಎಂಬ ರಾಜ್ಯ ಸರ್ಕಾರದ ಪರ ವಕೀಲರ ವಾದವನ್ನೂ ಸಹ ನ್ಯಾಯಾಲಯ ತಳ್ಳಿಹಾಕಿತು. "ಘಟಿಸಿದ ದುರಂತಕ್ಕೆ ಅವರು ಜವಾಬ್ದಾರರೇ? ಅವರಿಗೆ ಅದರ ಅರಿವು ಹೇಗಿರಲು ಸಾಧ್ಯ? ಅವರು ಅನುಮತಿ ಪಡೆದು ಪಾಲ್ಗೊಂಡಿದ್ದಾರೆ," ಎಂದು ಕೋರ್ಟ್ ಆದೇಶದ ವೇಳೆ ಅಭಿಪ್ರಾಯಪಟ್ಟಿತು.
ಘಟನೆಗೆ ಜವಾಬ್ದಾರನಾಗದೆ ಹೋದರೂ ಕೇವಲ ನಟ ಎಂಬ ಕಾರಣಕ್ಕೆಒಬ್ಬ ವ್ಯಕ್ತಿಯನ್ನು ಒಂದು ದಿನವಾದರೂ ಜೈಲಿನಲ್ಲಿ ಕಳೆಯುವಂತೆ ಮಾಡಬಹುದೇ ಎಂದು ಕೋರ್ಟ್ ಪ್ರಶ್ನಿಸಿತು. "ಅವರು ಕೇವಲ ನಟರಾದ ಮಾತ್ರಕ್ಕೆ ಅವರ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಈ ನೆಲದ ಪ್ರಜೆಯಾಗಿ ಅವರಿಗೂ ಬದುಕಿನ ಮತ್ತು ಸ್ವಾತಂತ್ರ್ಯದ ಹಕ್ಕಿದೆ" ಎಂದು ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ವೇಳೆ ಹೇಳಿತು.
ಸಿಕಂದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಡಿಸೆಂಬರ್ 11ರಂದು ನಡೆದ ಪುಷ್ಪ-2 ಚಿತ್ರದ ಪ್ರಥಮ ಪ್ರದರ್ಶನದ ವೇಳೆ ಆಗಮಿಸಿದ್ದ ನಟ ಅಲ್ಲು ಅರ್ಜುನ್ ಅವರನ್ನು ನೋಡಲೆಂದು ಉಂಟಾದ ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳೆ ಮೃತಪಟ್ಟಿದ್ದರು. ಘಟನೆಯಲ್ಲಿ ಅವರ 9 ವರ್ಷದ ಪುತ್ರ ಗಂಭೀರವಾಗಿ ಗಾಯಗೊಂಡಿದ್ದು ಅಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ.
ಘಟನೆಗೆ ಸಂಬಂಧಿಸಿದಂತೆ ಚಿಕ್ಕಡಪಲ್ಲಿ ಠಾಣೆಯಲ್ಲಿ ಮೃತ ಮಹಿಳೆ ಎಂ ರೇವತಿ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿತ್ತು. ಸೆಕ್ಷನ್ 105 (ಕೊಲೆಗೆ ಸಮನಾದ ನರಹತ್ಯೆಯ ಅಪರಾಧ) ಮತ್ತು ಸೆಕ್ಷನ್ 118(1), 3 3(1) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಈ ಪ್ರಥಮ ವರ್ತಮಾನ ವರದಿಯನ್ನು (ಎಫ್‌ಐಆರ್) ರದ್ದುಗೊಳಿಸುವಂತೆ ಅರ್ಜುನ್ ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು.
ಡಿಸೆಂಬರ್ 11 ರಂದು ರಾತ್ರಿ 9:30 ರ ಸುಮಾರಿಗೆ ಚಲನಚಿತ್ರದ ಪ್ರಥಮ ಪ್ರದರ್ಶನದ ಸಮಯದಲ್ಲಿ ಸಂಧ್ಯಾ ಥಿಯೇಟರ್‌ನಲ್ಲಿ ಉಂಟಾದ ಕಾಲ್ತುಳಿತದಲ್ಲಿ ರೇವತಿ ದುರಂತವಾಗಿ ತನ್ನ ಪ್ರಾಣವನ್ನು ಕಳೆದುಕೊಂಡರು. ಅವರ 9 ವರ್ಷದ ಮಗ ಗಂಭೀರ ಸ್ಥಿತಿಯಲ್ಲಿದ್ದು, ಸಿಕಂದರಾಬಾದ್‌ನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಾಲ್ತುಳಿತದ ಸಂದರ್ಭದಲ್ಲಿ ಅರ್ಜುನ್ ಕೂಡ ಥಿಯೇಟರ್‌ನಲ್ಲಿ ಹಾಜರಿದ್ದರು.