Supreme Court
Supreme Court 
ಸುದ್ದಿಗಳು

ತೆಲಂಗಾಣ ಶಾಸಕರ ಖರೀದಿ ಪ್ರಕರಣ: ಸದ್ಯಕ್ಕೆ ತನಿಖೆ ಬೇಡ ಎಂದು ಸಿಬಿಐಗೆ ಮೌಖಿಕವಾಗಿ ಸುಪ್ರೀಂ ಸೂಚನೆ

Bar & Bench

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್‌ ಸಂತೋಷ್‌ ಅವರ ಹೆಸರು ಕೇಳಿ ಬಂದಿದ್ದ ತೆಲಂಗಾಣ ಶಾಸಕರ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿರುವ ಮೇಲ್ಮನವಿಯ ವಿಚಾರಣೆ ಬಾಕಿ ಇರುವುದರಿಂದ ಪ್ರಕರಣದ ತನಿಖೆಯಿಂದ ದೂರ ಇರುವಂತೆ ಸಿಬಿಐಗೆ ಸುಪ್ರೀಂ ಕೋರ್ಟ್‌ ಸೋಮವಾರ ಸೂಚಿಸಿದೆ.

ಯಥಾಸ್ಥಿತಿಗೆ ಆದೇಶಿಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಂ ಎಂ ಸುಂದರೇಶ್ ಅವರಿದ್ದ ಪೀಠ ಸಿಬಿಐಗೆ ಪ್ರಕರಣ ವರ್ಗಾಯಿಸಿರುವುದನ್ನು ಪ್ರಶ್ನಿಸಿ ತೆಲಂಗಾಣ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಜುಲೈನಲ್ಲಿ ಆಲಿಸಲು ಸಮ್ಮತಿ ಸೂಚಿಸಿತು.

“ನಾವು ಯಥಾಸ್ಥಿತಿಗೆ ಆದೇಶಿಸುತ್ತೇವೆ. ಸಿಬಿಐ ತನಿಖೆ ಮುಂದುವರಿಸುವುದು ಬೇಡ” ಎಂದು ಪೀಠ ಮೌಖಿಕವಾಗಿ ತಿಳಿಸಿತು.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಹೈಕೋರ್ಟ್‌ ಏಕ ಸದಸ್ಯ ಪೀಠ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತ್ತು. ಬೇರಾರೂ ಅಲ್ಲದೆ ಸ್ವತಃ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಅವರು ಆರೋಪಿಗಳನ್ನು ಸಾರ್ವಜನಿಕವಾಗಿ ಖಂಡಿಸಿ ಸಂಚುಕೋರರು ಎಂದು ಹಣೆಪಟ್ಟಿ ಹಚ್ಚಿದ್ದಾರೆ. ಈ ಘಟನೆಗಳು ಎಸ್‌ಐಟಿ ತನಿಖೆಯ ನ್ಯಾಯಸಮ್ಮತತೆಯನ್ನು ಪ್ರಶ್ನಿಸುತ್ತವೆ ಎಂದು ಹೈಕೋರ್ಟ್‌ ಆಗ ನುಡಿದಿತ್ತು.

ಪಕ್ಷಾಂತರ ಮಾಡುವ ಸಲುವಾಗಿ ಆಡಳಿತಾರೂಢ ಬಿಆರ್‌ಎಸ್‌ ಪಕ್ಷದ ಶಾಸಕರನ್ನು ಬಿಜೆಪಿ ಸಂಪರ್ಕಿಸಿತ್ತು ಎಂಬ ವಿಚಾರ ನ್ಯಾಯಾಲಯದ ಕಟಕಟೆ ಏರಿತ್ತು.