The Telecommunications Act, 2023  
ಸುದ್ದಿಗಳು

ದೂರಸಂಪರ್ಕ ಕಾಯಿದೆ- 2023: ಇಂದಿನಿಂದ ಭಾಗಶಃ ಜಾರಿ

Bar & Bench

ದೂರಸಂಪರ್ಕ ಕಾಯಿದೆ- 2023ರ ಕೆಲವು ನಿಬಂಧನೆಗಳು ಬುಧವಾರ, ಜೂನ್ 26, 2024ರಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಕೇಂದ್ರ ಸಂವಹನ ಸಚಿವಾಲಯ ಜೂನ್ 21ರಂದು ಭಾರತದ ಗೆಜೆಟ್‌ನಲ್ಲಿ ಈ ಕುರಿತು ಅಧಿಸೂಚನೆ ಪ್ರಕಟಿಸಿದೆ. ಕಾಯಿದೆಯ ಸೆಕ್ಷನ್ 1, 2, 10ರಿಂದ 30, 42ರಿಂದ 44, 46, 47, 50ರಿಂದ 58, 61 ಮತ್ತು 62 ತಕ್ಷಣ ಜಾರಿಗೆ ಬರಲಿವೆ. ಕಳೆದ ವರ್ಷ ಡಿಸೆಂಬರ್ 24 ರಂದು, ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಕುರಿತ ಮಸೂದೆಗೆ ಅಂಕಿತ ಹಾಕಿದ್ದರು.

ಕಾಯಿದೆಯ ಪ್ರಮುಖಾಂಶಗಳು

  • 2023ರ ಕಾಯಿದೆ ದೂರಸಂಪರ್ಕ ಸೇವೆ ಮತ್ತು ದೂರಸಂಪರ್ಕ ಜಾಲ ಅಭಿವೃದ್ಧಿ, ವಿಸ್ತರಣೆ, ಕಾರ್ಯಾಚರಣೆ, ತರಂಗಾಂತರ ನಿಯೋಜನೆ ಮತ್ತು ಸಂಬಂಧಿತ ವಿಷಯಗಳ ಕುರಿತಂತೆ ಕಾನೂನನ್ನು ತಿದ್ದುಪಡಿ ಮಾಡುವ ಮತ್ತು ಕ್ರೋಢೀಕರಿಸುವ ಗುರಿ ಹೊಂದಿದೆ.

  • ಭಾರತೀಯ ಟೆಲಿಗ್ರಾಫ್ ಕಾಯಿದೆ- 1885, 1933ರ ಭಾರತೀಯ ವೈರ್‌ಲೆಸ್ ಟೆಲಿಗ್ರಾಫಿ ಕಾಯಿದೆ ಮತ್ತು 1950ರ ಟೆಲಿಗ್ರಾಫ್ ವಯರ್ಸ್‌ (ಕಾನೂನುಬಾಹಿರ ಸ್ವಾಧೀನ) ಕಾಯಿದೆಯ ಬದಲಿಗೆ ಇದನ್ನು ಜಾರಿಗೆ ತರಲಾಗುತ್ತಿದೆ.

  • ವಂಚನೆಗೆ ಕಡಿವಾಣ ಹಾಕಲೆನ್ನುವ ದೃಷ್ಟಿಯಿಂದ ಕಾಯಿದೆಯು ಬಳಕೆದಾರರ ಬಯೋಮೆಟ್ರಿಕ್ ದೃಢೀಕರಣವನ್ನು ಕಡ್ಡಾಯಗೊಳಿಸುತ್ತದೆ. ಆದರೆ ಈ  ಕ್ರಮ ಚರ್ಚೆಗೆ ಕಾರಣವಾಗಿದ್ದು ಬಳಕೆದಾರರ ಗೌಪ್ಯತೆಗೆ ಸಂಬಂಧಿಸಿದ ಕಳವಳಕ್ಕೆ ಎಡೆ ಮಾಡಿಕೊಟ್ಟಿದೆ.

  • ಹಿಂದಿನ ಟೆಲಿಗ್ರಾಫ್ ಕಾಯಿದೆಯಲ್ಲಿದ್ದ ದೂರಸಂಪರ್ಕಗಳ ಪ್ರತಿಬಂಧ ಅಥವಾ ಕಣ್ಗಾವಲಿಗೆ ಸಂಬಂಧಿಸಿದ ಸೆಕ್ಷನ್‌ಗಳು ಈ ಕಾಯಿದೆಯಲ್ಲೂ ಇವೆ. ಸಾರ್ವಜನಿಕ ತುರ್ತು ಅಥವಾ ಸುರಕ್ಷತೆಯ ಪ್ರಶ್ನೆಗಳು ಎದ್ದಾಗ ಸಂಬಂಧಿತ ದೂರಸಂಪರ್ಕ ಜಾಲವನ್ನು ನಿಯಂತ್ರಿಸುವ ಅಧಿಕಾರವನ್ನು ಕಾಯಿದೆ ಕೇಂದ್ರ ಸರ್ಕಾರಕ್ಕೆ ನೀಡುತ್ತದೆ.

  • ದೇಶದ ಭದ್ರತೆಗೆ, ವಿದೇಶಗಳೊಂದಿಗೆ ಸ್ನೇಹಸಂಬಂಧಕ್ಕೆ, ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಒದಗಿದಾಗ ಇಲ್ಲವೇ ಅಪರಾಧಕ್ಕೆ ಕುಮ್ಮಕ್ಕು ನೀಡುತ್ತಿರುವುದು ಕಂಡುಬಂದಾಗ ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ವ್ಯಕ್ತಿಗಳ ನಡುವಿನ ಯಾವುದೇ ಸಂದೇಶ ಅಥವಾ ನಿರ್ದಿಷ್ಟ ಸಂದೇಶಗಳ ಗೂಢಚರ್ಯೆ ನಡೆಸುವ, ನಿಗಾವಹಿಸುವ ಮತ್ತು ಪ್ರತಿಬಂಧಿಸುವ ಅಧಿಕಾರವನ್ನು ಕಾಯಿದೆ ನೀಡುತ್ತದೆ.

  • ಅಂತರ್ಜಾಲ ಆಧಾರಿತ ಸೇವೆಗಳು ಕೂಡ ಈ ಕಾಯಿದೆಯ ವ್ಯಾಪ್ತಿಗೆ ಒಳಪಡಲಿವೆ.

  • ಟೆಲಿಕಾಂ ಜಾಲಗಳ ಅಸ್ತಿತ್ವದಲ್ಲಿರುವ ಪರವಾನಗಿ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸಲು ಕಾಯಿದೆ ಅವಕಾಶ ಮಾಡಿಕೊಡಲಿದೆ. 

  • ಇದಲ್ಲದೆ, ಬಳಕೆಯಾಗದೆ ಉಳಿದಿರುವ ತರಂಗಾಂತರವನ್ನು ಹಿಂಪಡೆಯಲು ಕಾಯಿದೆ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ಕಾಯಿದೆಯು ತರಂಗಾಂತರ ಹಂಚಿಕೆ, ವ್ಯಾಪಾರ ಮತ್ತು ಗುತ್ತಿಗೆಗೆ ಅನುವು ಮಾಡಿಕೊಡುತ್ತದೆ. ಅಲ್ಲದೆ, ಬಳಕೆಯಾಗದ ತರಂಗಾಂತರವನ್ನು ಮರಳಿ ಸರ್ಕಾರಕ್ಕೆ ನೀಡುವ ಆಯ್ಕೆಯೂ ಸಂಸ್ಥೆಗಳಿಗಿದೆ. ಆದರೆ, ಇದಕ್ಕೆ ಸರ್ಕಾರದಿಂದ ಯಾವುದೇ ಪರಿಹಾರ ದೊರೆಯುವುದಿಲ್ಲ.