ರಾಜಕೀಯ ಪ್ರಭಾವ ಇದೆ ಎಂದು, ಜಮೀನು ವ್ಯಾಜ್ಯದಲ್ಲಿ ನ್ಯಾಯಾಲಯದ ಆದೇಶ ಲೆಕ್ಕಿಸದೆ ಅತಿಕ್ರಮ ಪ್ರವೇಶ ಮಾಡಿ ದೌರ್ಜನ್ಯ ನಡೆಸಿ ಮಹಿಳೆಯರ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ತಮ್ಮ ವಿರುದ್ಧ ದಾಖಲಿಸಲಾಗಿರುವ ಪ್ರಕರಣ ರದ್ದತಿ ಕೋರಿ ಕಿರುತೆರೆ ನಿರ್ದೇಶಕ ಟಿ ಎನ್ ಸೀತಾರಾಮ್ ಮತ್ತಿತರರು ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಗುರುವಾರ ನೋಟಿಸ್ ಜಾರಿಗೊಳಿಸಿದೆ.
ಟಿ ಎನ್ ಸೀತಾರಾಮಯ್ಯ ಅಲಿಯಾಸ್ ಸೀತಾರಾಮ್ ಮತ್ತು ಅವರ ಸಹೋದರಿ ಕೆ ಎಸ್ ಜಯಲಕ್ಷ್ಮಿ ಅಲಿಯಾಸ್ ಕೆ ಎಸ್ ವಿಜಯಲಕ್ಷ್ಮಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ರಜಾಕಾಲೀನ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಸೀತಾರಾಮ್ ಪರ ಹಿರಿಯ ವಕೀಲ ಕೆ ದಿವಾಕರ ಅವರ ವಾದ ಆಲಿಸಿದ ಪೀಠವು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸ್ ಮತ್ತು ದೂರುದಾರ ಎಂ. ಅರವಿಂದ ಕುಮಾರ್ ಅವರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮೇ 14ಕ್ಕೆ ಮುಂದೂಡಿತು. ಅರ್ಜಿದಾರರ ಪರ ವಕೀಲ ಯು ಸಂತೋಷ್ ವಕಾಲತ್ತು ವಹಿಸಿದ್ದಾರೆ.
ಟಿ ಎನ್ ಸೀತಾರಾಮ್, ಕೆ ಎಸ್ ವಿಜಯಲಕ್ಷ್ಮಿ, ರಾಕೇಶ್ ಮತ್ತು ಶಶಾಂಕ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು ನಾಲ್ವರೂ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ರಾಕೇಶ್ ಮತ್ತು ಶಶಾಂಕ್ ದೊಡ್ಡಬಳ್ಳಾಪುರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ನಮ್ಮ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ; ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್‌ಗಳಾದ 74 (ಮಹಿಳೆಯ ಘನತೆ ಅಥವಾ ನಮ್ರತೆಗೆ ಧಕ್ಕೆ ತರುವ ಉದ್ದೇಶದಿಂದ ಆಕೆಯ ಮೇಲೆ ನಡೆಸುವ ಹಲ್ಲೆ), 352 (ಶಾಂತಿ ಪ್ರಚೋದಿಸಿ ಉದ್ದೇಶಪೂರ್ವಕ ಅವಮಾನ) 351(2) (ಆಸ್ತಿಯನ್ನು ಬೆಂಕಿಯಿಂದ ನಾಶಪಡಿಸುವ ಕ್ರಿಮಿನಲ್ ಬೆದರಿಕೆ), 329(3) (ಕ್ರಿಮಿನಲ್ ಅತಿಕ್ರಮಣ), 324(4) (ಕಿಡಿಗೇಡಿತನ ಅಥವಾ ಆಸ್ತಿಗೆ ಹಾನಿ ಉಂಟು ಮಾಡುವ ಅಪರಾಧ), 324(5) (ದೊಡ್ಡ ಪ್ರಮಾಣದಲ್ಲಿ ಆಸ್ತಿಗೆ ಹಾನಿ), 351(3) (ಮರಣದಂಡನೆ ಅಥವಾ ಘೋರವಾದ ಗಾಯ ಉಂಟು ಮಾಡುವ) ಮತ್ತು 318(4) ವಂಚನೆ ಅಪರಾಧಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಕುರಿತಾದ ತನಿಖೆಯನ್ನು ರದ್ದುಪಡಿಸಬೇಕು ಎಂದು ಕೋರಿ ಸೀತಾರಾಮ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಹಸನಘಟ್ಟ ಗ್ರಾಮದ ವಿವಿಧ ಸರ್ವೇ ನಂಬರ್‌ಗಳಲ್ಲಿ ಒಟ್ಟು 5 ಎಕರೆಗೂ ಹೆಚ್ಚು ವಿಸ್ತೀರ್ಣದ ಜಮೀನನ್ನು ಟಿ ಎನ್ ಸೀತಾರಾಮ್ 1977ರಲ್ಲಿ ರಾಮಯ್ಯ ಎಂಬುವರಿಗೆ ಮಾರಾಟ ಮಾಡಿದ್ದರು. ನಂತರ ಈ ಜಮೀನನ್ನು ರಾಮಯ್ಯ ಅಡವಿಯಪ್ಪ ಎಂಬುವರಿಗೆ ಮಾರಾಟ ಮಾಡಿದ್ದು, ಅಡವಿಯಪ್ಪ ಅವರ ನಿಧನಾನಂತರ ಅವರ ವಾರಸುದಾರರಾದ ಎಂ ಎ ಅರವಿಂದ ಕುಮಾರ್ ಮತ್ತು ಎಂ ಎ ಜಗದೀಶ್ ಸ್ವಾಧೀನಾನುಭವದಲ್ಲಿ ಇದ್ದಾರೆ ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.
ಸದರಿ ಜಮೀನಿನಲ್ಲಿ 1 ಎಕರೆ 26 ಗುಂಟೆ ಜಮೀನು ಇನ್ನೂ ನಮ್ಮ ಹೆಸರಿನಲ್ಲೇ ಇದೆ ಎಂದು ಟಿ ಎನ್ ಸೀತಾರಾಮ್ ಅವರು ಎನ್ ರಾಕೇಶ್ ಎಂಬವರಿಗೆ ಇದರ ಜಿಪಿಎ (ಸಾಮಾನ್ಯ ಅಧಿಕಾರ ಪತ್ರ) ಮಾಡಿಸಿ ಕೊಟ್ಟು ನಂತರ ಕಾನೂನುಬಾಹಿರವಾಗಿ ಮಾರಾಟ ಮಾಡಿರುತ್ತಾರೆ. ವಾಸ್ತವದಲ್ಲಿ ಈ ಜಮೀನು ನಮಗೆ ಮಾರಾಟವಾಗಿದ್ದು ನಮ್ಮ ಸ್ವಾಧೀನಾನುಭವದಲ್ಲಿದ್ದರೂ ಸೀತಾರಾಮ್ ನಮಗೆ ಮೋಸ ಮಾಡುವ ಉದ್ದೇಶದಿಂದ ಈ ವಿವಾದಿತ ಜಮೀನಿನ ಒಳಗೆ 2026ರ ಮೇ 1ರಂದು ರಾತ್ರಿ 12ರಿಂದ 1 ಗಂಟೆ ಸಮಯದಲ್ಲಿ 100ರಿಂದ 150 ಜನರನ್ನು ಕೂಡಿಸಿಕೊಂಡು ಮಾರಾಕಾಸ್ತ್ರಗಳೊಂದಿಗೆ ಅತಿಕ್ರಮ ಪ್ರವೇಶ ಮಾಡಿದ್ದಾರೆ. ನಾವು ಹಾಕಿದ್ದ ಕಾಂಪೌಂಡ್ ಕೆಡವಿ, ಅಲ್ಲಿದ್ದ ಸಿಸಿಟಿವಿ ಕ್ಯಾಮರಾಗಳನ್ನು ಹಾಳು ಮಾಡಿ ಸಾಕ್ಷ್ಯ ನಾಶ ಮಾಡಿರುತ್ತಾರೆ. ದುಂಡಾವರ್ತನೆಯಿಂದ ಸ್ಥಳದಲ್ಲಿದ್ದ ಕೆಲಸಗಾರರನ್ನು ಸಮೀಪದ ಕೊಠಡಿಯೊಂದರಲ್ಲಿ ಕೂಡಿಹಾಕಿ ಅಲ್ಲಿದ್ದ ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮೈಮುಟ್ಟಿ ಎಳೆದಾಡಿ ಪರಿಪರಿಯಾಗಿ ವಿನಂತಿಸಿದರೂ ಅವರ ಬಟ್ಟೆಗಳನ್ನು ಹರಿದು ದೌರ್ಜನ್ಯ ನಡೆಸಿರುತ್ತಾರೆ ಎಂದು ದೂರುದಾರರ ಅಂಶಗಳನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.