ಹೆಣ್ಣುಮಕ್ಕಳಿಗೆ ಸುರಕ್ಷಿತವಾಗಿರುವುದು ಹೇಗೆ ಎಂದು ಹೇಳುವ ಬದಲು ಬೇರೆಯವರೊಂದಿಗೆ ವರ್ತಿಸುವಾಗ ಸರಿ- ತಪ್ಪು ಯಾವುದು ಎಂಬುದನ್ನು ಹುಡುಗರಿಗೆ ಕಲಿಸಿಕೊಡುವ ಅಗತ್ಯವಿದೆ ಎಂದು ಬಾಂಬೆ ಹೈಕೋರ್ಟ್ ಮಂಗಳವಾರ ಬುದ್ಧಿವಾದ ಹೇಳಿದೆ [ಹೈಕೋರ್ಟ್ ಸ್ವಯಂ ಪ್ರೇರಿತ ಮೊಕದ್ದಮೆ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].
ದೇಶದ ವಾಣಿಜ್ಯ ರಾಜಧಾನಿ ಮುಂಬೈ ಸಮೀಪದಲ್ಲಿರುವ ಥಾಣೆಯ ಬದಲಾಪೂರ್‌ನ ಶಿಶುವಿಹಾರಕ್ಕೆ ತೆರಳಿದ್ದ 4 ವರ್ಷದ ಇಬ್ಬರು ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಪೃಥ್ವಿರಾಜ್ ಕೆ ಚವಾಣ್ ಅವರಿದ್ದ ಪೀಠ ಮೇಲಿನಂತೆ ಅಭಿಪ್ರಾಯಪಟ್ಟಿತು.
ಶಾಲೆಗಳಲ್ಲಿ ಹೆಣ್ಣು ಮಕ್ಕಳ ಸುರಕ್ಷತೆ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸುವ ಮಾರ್ಗಗಳನ್ನು ಅನ್ವೇಷಿಸಲು ಸರ್ಕಾರವು ರಚಿಸಿರುವ ಸಮಿತಿಯನ್ನು ಉದ್ದೇಶಿಸಿದ ಪೀಠ ಸದಾ ಸಂತ್ರಸ್ತರು ಹೇಗಿರಬೇಕು ಎಂದು ಹೇಳುವ ಬದಲು ಹುಡುಗರಿಗೆ ಯಾವುದು ಸರಿ ತಪ್ಪು ಎಂದು ಏಕೆ ತಿಳಿಸಿಕೊಡಬಾರದು ಎಂದು ಪ್ರಶ್ನಿಸಿತು.
ಅಲ್ಲದೆ ತಾವು ಏನು ಮಾಡಬಾರದು ಎಂಬುದನ್ನು ಹುಡುಗರಿಗೆ ತಿಳಿಹೇಳಬೇಕು. ಸರ್ಕಾರದ ಸಮಿತಿ ಈ ಕುರಿತು ಕೆಲಸ ಮಾಡಬಹುದು. ಸರ್ಕಾರ ಬಾಲಕರ ಮನಸ್ಥಿತಿಯನ್ನು ಅವರು ಎಳವೆಯಲ್ಲಿದ್ದಾಗಲೇ ತಿದ್ದಬೇಕಿದೆ. ಅವರಿಗೆ ಲಿಂಗ ಸಂವೇದನೆ ಉಳಿದ ಲಿಂಗಿಗಳ ಬಗ್ಗೆ ಗೌರವ, ಮಹಿಳೆಯರನ್ನು ಗೌರವಿಸುವುದನ್ನು ಕಲಿಸಿ. ನೀತಿ ಕತೆಯ ತರಗತಿಗಳು ಇರುತ್ತವೆ. ಇಲ್ಲಿ ಶಿಕ್ಷಣ ಇಲಾಖೆ ಕಾರ್ಯಪ್ರವೃತ್ತವಾಗಬೇಕಿದೆ ಎಂದು ನ್ಯಾಯಾಲಯ ನುಡಿದಿದೆ.
ನಿವೃತ್ತ ನ್ಯಾಯಾಧೀಶರು, ಪೊಲೀಸ್ ಅಧಿಕಾರಿಗಳು, ಪ್ರಾಂಶುಪಾಲರು ಮತ್ತು ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಕೂಡ ಸಮಿತಿಯ ಭಾಗವಾಗಬೇಕು ಎಂದು ನ್ಯಾಯಾಲಯ ಇಂದು ಸೂಚಿಸಿತು.
ಇದೇ ವೇಳೆ ಬದಲಾಪೂರ್ ಲೈಂಗಿಕ ದೌರ್ಜನ್ಯ ಘಟನೆಯ ಕುರಿತು ಸಮಗ್ರ ವರದಿ ಸಲ್ಲಿಸುವಂತೆಯೂ ಸಮಿತಿಗೆ ಅದು ಸೂಚಿಸಿದೆ.
ಕಾಗದದ ಮೇಲೆ ಎಲ್ಲವೂ ಚನ್ನಾಗಿ ಇರುತ್ತವೆ ಎಂದ ನ್ಯಾ. ರೇವತಿ ಅವರು ಸಂತ್ರಸ್ತರಿಗೆ ಅವರ ಹಕ್ಕುಗಳು ತಿಳಿದಿದೆಯೇ? ಹಾಗೆ ತಿಳಿಸಲು ಸರ್ಕಾರ ಸಾರ್ವಜನಿಕ ಜಾಗೃತಿ ಮೂಡಿಸಬೇಕು ಎಂದರು.
ಕಳೆದ ವಾರದ ವಿಚಾರಣೆ ವೇಳೆ, ಪ್ರಕರಣದ ತನಿಖೆಯಲ್ಲಿನ ಲೋಪ ಮತ್ತು ಘಟನೆಯನ್ನು ಸಕಾಲಕ್ಕೆ ವರದಿ ಮಾಡಲು ವಿಫಲವಾದ ಶಾಲಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದ ಕಾರಣಕ್ಕೆ ನ್ಯಾಯಾಲಯ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತು. ಸೆಪ್ಟೆಂಬರ್ 03 ರಂದು ಪ್ರಕರಣದ ವಿಚಾರಣೆ ಮುಂದುವರೆಯಲಿದೆ.