Karnataka High Court and farmer DyCM K S Eshwarappa
Karnataka High Court and farmer DyCM K S Eshwarappa 
ಸುದ್ದಿಗಳು

ಸಂಸ್ಕೃತಿ ಬಿಂಬಿತವಾಗುವಂತೆ ಮಾತನಾಡಲು ನಿಮ್ಮ ಕಕ್ಷಿದಾರರಿಗೆ ಹೇಳಿ: ಬಿಜೆಪಿ ಮುಖಂಡ ಈಶ್ವರಪ್ಪಗೆ ಹೈಕೋರ್ಟ್‌ ಕಿವಿಮಾತು

Siddesh M S

“ನಮ್ಮದು ಬಹುಭಾಷೆ, ಬಹು ಧರ್ಮ ಮತ್ತು ಬಹು ಸಂಸ್ಕೃತಿಗಳ ರಾಷ್ಟ್ರ. ಎಷ್ಟೋ ಕಡೆ ಸ್ವಲ್ಪ ಏನೋ ಮಾತನಾಡಿದರೆ ಬೆಂಕಿ ಹತ್ತುವ ಪರಿಸ್ಥಿತಿ ಇದೆ. ಹಾಗಾಗಿ, ಭಾಷಾ ಪ್ರಯೋಗ ಜವಾಬ್ದಾರಿಯುತವಾಗಿರಬೇಕು. ಸಂಸ್ಕೃತಿ ಬಿಂಬಿತವಾಗುವಂತೆ ಮಾತನಾಡಲು ನಿಮ್ಮ ಕಕ್ಷಿದಾರರಿಗೆ ಹೇಳಿ” ಎಂದು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಮಾಜಿ ಉಪಮುಖ್ಯಮಂತ್ರಿ ಕೆ ಎಸ್‌ ಈಶ್ವರಪ್ಪ ಅವರನ್ನು ಕುರಿತು ಮೌಖಿಕವಾಗಿ ಹೇಳಿತು.

“ದೇಶವನ್ನು ಛಿದ್ರ ಮಾಡುತ್ತೇವೆ ಎಂದು ಹೋರಾಡುತ್ತಿರುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎನ್ನುವ ಕಾನೂನು ತನ್ನಿ. ಏನೆಂದು ಕೊಂಡಿದ್ದೀರಾ ದೇಶ ಎಂದರೆ” ಎಂಬ ಹೇಳಿಕೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ವಿರುದ್ಧ ದಾವಣಗೆರೆ ಎಕ್ಷ್‌ಟೆನ್ಷನ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ ಎಸ್‌. ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆಯ ವೇಳೆ ಪೀಠವು “ನಮ್ಮ ರಾಜಕೀಯ ನಾಯಕರೆಲ್ಲಾ ಭಾಷೆಯ ಮೇಲೆ ಎಷ್ಟೊಂದು ದೌರ್ಜನ್ಯ ಎಸಗುತ್ತಾರೆ!? ನಮ್ಮ ನಾಯಕರು ಎಂದು ಶಾಲೆಯ ಮಕ್ಕಳೆಲ್ಲಾ ನೋಡುತ್ತಿರುತ್ತಾರೆ. ಎಲ್ಲರೂ ಬಹುಮುಖ್ಯವಾಗಿ ನಮ್ಮ ಧುರೀಣರು ಒಳ್ಳೆಯ ಭಾಷೆಯನ್ನು ಏಕೆ ಬಳಸುವುದಿಲ್ಲ? ಮಾತನಾಡುವಾಗ ಸಂಸ್ಕೃತಿ ಕಾಣುವ ರೀತಿಯಲ್ಲಿ ಏಕೆ ಮಾತನಾಡಬಾರದು. ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಸಚಿವರು, ಶಾಸಕರು ಯಾರೇ ಇರಬಹುದು. ಅವರೆಲ್ಲಾ ನಮ್ಮ ಪರವಾಗಿ ಕೆಲಸ ಮಾಡುತ್ತಾರೆ. ನಾವು ಏನೋ ಒಂದು ಮಾತನಾಡಬಾರದು. ಸಂಯಮದಿಂದ ಭಾಷಾ ಪ್ರಯೋಗ ಮಾಡಬೇಕು ಎಂಬುದು ನನ್ನ ಪ್ರಾರ್ಥನೆ” ಎಂದು ಹೇಳಿದರು.

ಮುಂದುವರಿದು, “ಅರ್ಜಿದಾರರು ಎಸಗಿರುವ ಕೃತ್ಯ ಅಪರಾಧವೋ, ಅಲ್ಲವೋ ಎಂಬುದು ಬೇರೆಯ ಮಾತು. ನಮ್ಮದು ಸುಶ್ರಾವ್ಯವಾದ ಭಾಷೆ. ಕೇಳಿದರೆ ಖುಷಿಯಾಗುತ್ತದೆ. ನಮ್ಮದು ಬಹುಭಾಷೆ, ಬಹು ಧರ್ಮ ಮತ್ತು ಬಹು ಸಂಸ್ಕೃತಿಗಳ ರಾಷ್ಟ್ರ. ಎಷ್ಟೋ ಕಡೆ ಸ್ವಲ್ಪ ಏನೋ ಮಾತನಾಡಿದರೆ ಬೆಂಕಿ ಹತ್ತುವ ಪರಿಸ್ಥಿತಿ ಇದೆ. ಹಾಗಾಗಿ, ಭಾಷಾ ಪ್ರಯೋಗ ಜವಾಬ್ದಾರಿಯುತವಾಗಿರಬೇಕು. ಆಗ ಸಾಮರಸ್ಯ ಇರುತ್ತದೆ. ಚಿಂತನೆ ಬೇರೆ ಬೇರೆ ಇರಬಹುದು. ಯಾರು ಏನು ಮಾತನಾಡಿದರೂ ಎಂಬುದನ್ನು ಪರಿಶೀಲಿಸಲು ನ್ಯಾಯಾಲಯ ವ್ಯಾಕರಣ ತಜ್ಞರಾಗಿ ಕೂರಲಾಗದು” ಎಂದರು.

ಈಶ್ವರಪ್ಪ ಪರವಾಗಿ ಹಿರಿಯ ವಕೀಲ ಅರುಣ್‌ ಶ್ಯಾಮ್‌ ಅವರು ವಾದಿಸಿದರು. ಒಂದು ಹಂತದಲ್ಲಿ ಪೀಠವು ಅರ್ಜಿದಾರ ಈಶ್ವರಪ್ಪ ಅವರು ದೇಶವಿರೋಧಿ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಹೇಳಿರುವುದು ಹೇಗೆ ಅಪರಾಧವಾಗುತ್ತದೆ? ಯಾರು ಆ ಕೃತ್ಯ ಎಸಗುತ್ತಾರೋ ಅವರ ವಿರುದ್ಧ ಪ್ರಕರಣ ದಾಖಲಿಸಬೇಕಲ್ಲವೇ? ಇಲ್ಲಿ ಭಾಷಾ ಬಳಕೆಯ ಸಮಸ್ಯೆ ಇರಬಹುದು ಎಂದೂ ಹೇಳಿತು.

ಅಂತಿಮವಾಗಿ ಪೀಠವು ಈಶ್ವರಪ್ಪ ವಿರುದ್ಧದ ಎಫ್‌ಐಆರ್‌ ಮತ್ತು ಮುಂದಿನ ಪ್ರಕ್ರಿಯೆಗೆ ಮುಂದಿನ ವಿಚಾರಣೆವರೆಗೆ ತಡೆಯಾಜ್ಞೆ ವಿಧಿಸಿ, ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿತು.

ಸರ್ಕಾರದ ಪರವಾಗಿ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಜಗದೀಶ್‌ ಅವರು ವಾದ ಮಂಡಿಸಿದರು.