ಅಲಾಹಾಬಾದ್ ಹೈಕೋರ್ಟ್, ಸಿಎಂ ಯೋಗಿ ಆದಿತ್ಯನಾಥ್ 
ಸುದ್ದಿಗಳು

ಯೋಗಿ ರಾಜ್ಯದಲ್ಲಿ ದೇಗುಲ, ಬೃಂದಾವನಗಳಿಗಿಲ್ಲ ಹಣ; 4 ವರ್ಷದಿಂದ ಬಾಕಿ: ಸಿಎಂ ಮಧ್ಯಪ್ರವೇಶಕ್ಕೆ ಹೈಕೋರ್ಟ್ ಸೂಚನೆ

Bar & Bench

ಉತ್ತರ ಪ್ರದೇಶದ ದೇವಾಲಯಗಳು ಮತ್ತು ಟ್ರಸ್ಟ್‌ಗಳು ಬಾಕಿ ಮೊತ್ತ ಬಿಡುಗಡೆ ಕೋರಿ ನ್ಯಾಯಾಲಯದ ಮೊರೆ ಹೋಗುವಂತಾಗಿರುವ ಬಗ್ಗೆ ಅಲಾಹಾಬಾದ್‌ ಹೈಕೋರ್ಟ್‌ ಸೋಮವಾರ ತೀವ್ರ ಬೇಸರ ವ್ಯಕ್ತಪಡಿಸಿದೆ (ಠಾಕೂರ್ ರಂಗ್ಜಿ ಮಹಾರಾಜ್ ವಿರಾಜ್‌ಮಾನ್‌ ಮಂದಿರ ಮತ್ತು ಉ. ಪ್ರದೇಶ ಸರ್ಕರ ಇನ್ನಿತರರ ನಡುವಣ ಪ್ರಕರಣ).

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್‌ವಾಲ್‌ ಅವರು ಇದೇ ವೇಳೆ ಸೂಚಿಸಿದ್ದಾರೆ.

ಕೇವಲ ಒಂದೆರಡು ವರ್ಷದ ಪ್ರಶ್ನೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕನಿಷ್ಠ ಒಂಬತ್ತು ವೃಂದಾವನದ ದೇವಾಲಯಗಳಿಗೆ ಸ್ವಯಂಚಾಲಿತವಾಗಿ ಪಾವತಿಯಾಗಬೇಕಿದ್ದ ವರ್ಷಾಶನ ಪಾವತಿಯಾಗದೆ ಇರುವುದನ್ನು ನ್ಯಾಯಾಲಯ ಗಮನಿಸಿತು. ಹೀಗಾಗಿ ನ್ಯಾಯಾಲಯವು, ಕಳೆದ ನಾಲ್ಕು ವರ್ಷಗಳಿಂದ ವೃಂದಾವನದ ಕನಿಷ್ಠ ಒಂಬತ್ತು ದೇವಾಲಯಗಳಿಗೆ ವರ್ಷಾಶನ ಪಾವತಿಸದ ಬಗ್ಗೆ ವಿವರಣೆ ನೀಡುವಂತೆ ಉತ್ತರ ಪ್ರದೇಶದ ಕಂದಾಯ ಮಂಡಳಿ ಕಾರ್ಯದರ್ಶಿಗೆ ಸಮನ್ಸ್ ನೀಡಿದೆ.

ನ್ಯಾ. ರೋಹಿತ್ ರಂಜನ್ ಅಗರ್‌ವಾಲ್‌

ಸರ್ಕಾರಿ ಅಧಿಕಾರಿಗಳಿಂದ ಬಾಕಿ ಮೊತ್ತ ಪಡೆಯಲು ದೇವಾಲಯದ ಅಧಿಕಾರಿಗಳು ಅಲೆದಾಡುತ್ತಿರುವುದು ವಿಚಿತ್ರವಾಗಿದೆ ಎಂದು ನ್ಯಾಯಾಲಯ ಹೇಳಿದೆ.

"ರಾಜ್ಯ ಸರ್ಕಾರದಿಂದ ಬಾಕಿ ಮೊತ್ತ ಪಡೆಯುವುದಕ್ಕಾಗಿ ದೇವಾಲಯಗಳು ಮತ್ತು ಟ್ರಸ್ಟ್‌ಗಳು ನ್ಯಾಯಾಲಯದ ಬಾಗಿಲು ತಟ್ಟಬೇಕಿರುವುದು ನ್ಯಾಯಾಲಯಕ್ಕೆ ನೋವುಂಟು ಮಾಡಿದೆ. ರಾಜ್ಯದ ಖಜಾನೆಯಿಂದ ದೇವಾಲಯದ ಖಾತೆಗೆ ಈ ಹಣ ಸ್ವಯಂಚಾಲಿತವಾಗಿ ಸಂದಾಯವಾಗಬೇಕಿತ್ತು" ಎಂದು ಪೀಠ ಅಭಿಪ್ರಾಯಪಟ್ಟಿದೆ.

ತಂತ್ರಜ್ಞಾನದ ಈ ಆಧುನಿಕ ಯುಗದಲ್ಲಿ ಹಣಕಾಸು ವರ್ಷ ಪ್ರಾರಂಭವಾದ ಕೂಡಲೇ ಸರ್ಕಾರ ಸ್ವಯಂಚಾಲಿತವಾಗಿ ಹಣವನ್ನು ದೇವಾಲಯಗಳಿಗೆ ವರ್ಗಾಯಿಸಬೇಕು ಎಂದು ಅದು ಹೇಳಿದೆ.

ಉತ್ತರ ಪ್ರದೇಶ ಜಮೀನ್ದಾರಿ ಪದ್ದತಿ ನಿರ್ಮೂಲನೆ ಮತ್ತು ಭೂ ಸುಧಾರಣಾ ಕಾಯಿದೆಯ ಸೆಕ್ಷನ್ 99ರ ಅನ್ವಯ ಮಥುರಾದ ಜಿಲ್ಲಾಧಿಕಾರಿ ಮತ್ತು ಅದರ ಹಿರಿಯ ಖಜಾನೆ ಅಧಿಕಾರಿ ವರ್ಷಾಶನ ಪಾವತಿಸಲು ನಿರ್ದೇಶಿಸುವಂತೆ ಕೋರಿ ಠಾಕೂರ್ ರಂಗ್‌ಜೀ ಮಹಾರಾಜ್ ವಿರಾಜ್‌ಮಾನ್‌ ಮಂದಿರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. 

ಒಂಬತ್ತು ದೇವಸ್ಥಾನಗಳಿಗೆ ಬಿಡುಗಡೆಯಾಗಬೇಕಾದ ₹9,125,07 ವರ್ಷಾಶನವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ಅರ್ಜಿದಾರರು ಮನವಿ ಮಾಡಿದರು. ಇದಕ್ಕೆ ಕಂದಾಯ ಮಂಡಳಿಯು ಅನುಮತಿ ನೀಡದಿರುವುದೇ ಕಾರಣ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರವು ತಾನು ₹2,23,199 ಹಣ ಸಂದಾಯ ಮಾಡಿದ್ದು, ಬಾಕಿ ₹6,89,308 ಹ ಣ ಸಂದಾಯ ಮಾಡಬೇಕಿದೆ ಎಂದು ಹೇಳಿತು.

ಇದೇ ವೇಳೆ, ನ್ಯಾಯಾಲಯವು ಅರ್ಜಿದಾರರ ವಿಷಯದಲ್ಲಿ 2020 ರಿಂದ 2023ರ ಅವಧಿಯಲ್ಲಿ ಬಿಡುಗಡೆ ಮಾಡಬೇಕಾದ ₹3,52,080 ಹಣವನ್ನು ಬಿಡುಗಡೆ ಮಾಡದೆ ಇರುವುದನ್ನು ಗಮನಿಸಿತು. ಹಣಕಾಸಿನ ಅಲಭ್ಯತೆಯ ಕಾರಣದಿಂದಾಗಿ ಹಣ ಬಿಡುಗಡೆ ಸಾಧ್ಯವಾಗಿಲ್ಲ ಎನ್ನುವ ಕಂದಾಯ ಮಂಡಳಿಯ ಉತ್ತರ ಬಗ್ಗೆ ನ್ಯಾಯಾಲಯ ಇದೇ ವೇಳೆ ಆಶ್ಚರ್ಯವ್ಯಕ್ತಪಡಿಸಿತು.

ಹೀಗಾಗಿ, ಮುಖ್ಯಮಂತ್ರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿ ನ್ಯಾಯಾಲಯ ಪ್ರಕರಣವನ್ನು ರಾಜ್ಯ ಮುಖ್ಯ ಕಾರ್ಯದರ್ಶಿಯವರಿಗೆ ವರ್ಗಾಯಿಸಿತು. ಪ್ರಕರಣದ ವಿಚಾರಣೆ ನಾಳೆ (ಮಾರ್ಚ್ 20) ಮುಂದುವರೆಯಲಿದೆ.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Thakur Rangji Maharaj Virajman Mandir vs. State Of UP And 3 Others.pdf
Preview