BH Anil Kumar IAS (Rtd) & Bengaluru city civil court 
ಸುದ್ದಿಗಳು

ಬಿಜೆಪಿ ಕೊರಟಗೆರೆ ಅಭ್ಯರ್ಥಿ ಅನಿಲ್‌ಕುಮಾರ್‌ ವಿರುದ್ಧ ಮಾನಹಾನಿ ಸುದ್ದಿ ಪ್ರಕಟಿಸದಂತೆ ತಾತ್ಕಾಲಿಕ ಪ್ರತಿಬಂಧಕಾದೇಶ

ನಿವೃತ್ತ ಐಎಎಸ್‌ ಅಧಿಕಾರಿ ಅನಿಲ್‌ಕುಮಾರ್‌ ಅವರು ಸಲ್ಲಿಸಿದ್ದ ಮೂಲ ದಾವೆಯ ವಿಚಾರಣೆಯನ್ನು ಬೆಂಗಳೂರಿನ ಐದನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ಆರ್‌ ಓಂಕಾರಪ್ಪ ಅವರು ಮಾಡಿದ್ದಾರೆ.

Bar & Bench

ತುಮಕೂರು ಜಿಲ್ಲೆಯ ಕೊರಟೆಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ನಿವೃತ್ತ ಐಎಎಸ್‌ ಅಧಿಕಾರಿ ಬಿ ಎಚ್‌ ಅನಿಲ್‌ಕುಮಾರ್‌, ಅವರ ಕುಟುಂಬ ಸದಸ್ಯರು ಮತ್ತು ಅವರ ಸಹಾಯಕರ ವಿರುದ್ಧ ಯಾವುದೇ ತೆರನಾದ ಮಾನಹಾನಿ ಸುದ್ದಿ ಪ್ರಕಟಿಸದಂತೆ ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳೂ ಸೇರಿ 56 ಸಂಸ್ಥೆಗಳ ವಿರುದ್ಧ ಬೆಂಗಳೂರಿನ ನ್ಯಾಯಾಲಯ ಈಚೆಗೆ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಿದೆ.

ಅನಿಲ್‌ಕುಮಾರ್‌ ಅವರು ಸಲ್ಲಿಸಿದ್ದ ಮೂಲ ದಾವೆಯ ವಿಚಾರಣೆಯನ್ನು ಬೆಂಗಳೂರಿನ ಐದನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ಆರ್‌ ಓಂಕಾರಪ್ಪ ನಡೆಸಿದ್ದಾರೆ.

ಫಿರ್ಯಾದಿ ಅನಿಲ್‌ಕುಮಾರ್‌ ವಿರುದ್ಧ ಯಾವುದೇ ತೆರನಾದ ಮಾನಹಾನಿ ಸುದ್ದಿ, ಬರಹ, ಹೇಳಿಕೆ ಪ್ರಕಟ, ಪ್ರಸಾರ ಮತ್ತು ಹಂಚಿಕೆ ಮಾಡದಂತೆ ಪ್ರತಿವಾದಿಗಳು ಮತ್ತು ಅವರ ಸಹಾಯಕರ ವಿರುದ್ಧ ಏಕಪಕ್ಷೀಯ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಲಾಗಿದೆ. ನಾಗರಿಕ ಪ್ರಕ್ರಿಯಾ ಸಂಹಿತೆ ಆದೇಶ 39, ನಿಯಮ 3(ಎ) ಅಡಿ ಫಿರ್ಯಾದಿಯು ಆದೇಶ ಪಾಲಿಸಬೇಕು. ಆದೇಶ ಪಾಲನೆಯ ಬಳಿಕ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಲು ಕಚೇರಿಗೆ ನಿರ್ದೇಶಿಸಲಾಗಿದ್ದು, ಸಮನ್ಸ್‌ ಮತ್ತು ನೋಟಿಸ್‌ ಜಾರಿ ಮಾಡಲಾಗಿದೆ. ವಿಚಾರಣೆಯನ್ನು ಜೂನ್‌ 6ಕ್ಕೆ ಮುಂದೂಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಫಿರ್ಯಾದಿಯ ಪರವಾಗಿ ವಕೀಲ ಶ್ರೀಧರ್‌ ಪ್ರಭು ವಾದ ಮಂಡಿಸಿದರು.

ಯಾರೆಲ್ಲಾ ಪ್ರತಿವಾದಿಗಳು: ಕನ್ನಡ ಪ್ರಭ, ಸುವರ್ಣ ನ್ಯೂಸ್‌ 24/7, ಉದಯ ಕಾಲ, ಡೆಕ್ಕನ್‌ ಹೆರಾಲ್ಡ್‌, ಪ್ರಜಾವಾಣಿ, ದಿ ಹನ್ಸ್‌ ಇಂಡಿಯಾ. ಕಾಂ, ಟೈಮ್ಸ್‌ ನೌ, ದಿ ಟೈಮ್ಸ್‌ ಆಫ್‌ ಇಂಡಿಯಾ, ಟೈಮ್ಸ್‌ ಆಫ್‌ ಕರ್ನಾಟಕ, ಡೆಕ್ಕನ್‌ ಕ್ರಾನಿಕಲ್‌, ದಿ ಇಂಡಿಯನ್‌ ಎಕ್ಸ್‌ಪ್ರೆಸ್‌, ದಿ ಹಿಂದೂ,  ಫೋಕಸ್‌ ಟಿವಿ, ಟಿವಿ9, ನ್ಯೂಸ್‌ 9, ಬಿಟಿವಿ ನ್ಯೂಸ್‌, ಜನಶ್ರೀ ಟಿವಿ, ಕಸ್ತೂರಿ ನ್ಯೂಸ್‌, ಎನ್‌ಡಿಟಿವಿ ನ್ಯೂಸ್‌, ಇಂಡಿಯಾ ಟುಡೇ, ಉದಯ ನ್ಯೂಸ್‌, ಪ್ರಜಾ ಟಿವಿ, ಸಮಯ ನ್ಯೂಸ್‌, ರಾಜ್‌ ನ್ಯೂಸ್‌, ಈಟಿವಿ ಕನ್ನಡ, ನಾನು ಗೌರಿ.ಕಾಂ, ಬೆಂಗಳೂರು ಮಿರರ್‌, ವಿಜಯ ಕರ್ನಾಟಕ, ಪ್ರಜಾವಾಣಿ, ವಿಜಯ ಕರ್ನಾಟಕ, ವಿಜಯವಾಣಿ, ಸಂಜೆವಾಣಿ, ಉದಯವಾಣಿ, ಹೊಸ ದಿಗಂತ, ಲಂಕೇಶ್‌ ಪತ್ರಿಕೆ, ಗೌರಿ ಲಂಕೇಶ್‌ ಜರ್ನಲ್‌, ಹಾಯ್‌ ಬೆಂಗಳೂರು, ಅಗ್ನಿ ಕನ್ನಡ, ಪರಶು ಕನ್ನಡ, ಸುದ್ದಿ ಟಿವಿ, ದಿಗ್ವಿಜಯ ನ್ಯೂಸ್‌, ಟಿವಿ 5, ವಿಶ್ವವಾಣಿ, ಪಬ್ಲಿಕ್‌ ಟಿವಿ, ಟಿವಿ1 ಕನ್ನಡ, ರಿಪಬ್ಲಿಕ್‌, ಆಜ್‌ತಕ್‌, ಒನ್‌ ಇಂಡಿಯಾ ನ್ಯೂಸ್‌, ವಾರ್ತಾ ಭಾರತಿ, ಟೈಮ್ಸ್‌ ಆಫ್‌ ಕರ್ನಾಟಕ, ವಾರ್ತಾ ಭಾರತಿ, ಗೂಗಲ್‌ ಎಲ್‌ಎಲ್‌ಸಿ, ಮೆಟಾ ಪ್ಲಾಟ್‌ಫಾರ್ಮ್‌ ಇಂಕ್‌, ಯಾಹೂ ಇಂಡಿಯಾ, ಯೂಟ್ಯೂಬ್‌ ಎಲ್‌ಎಲ್‌ಸಿ, ವಾಟ್ಸಾಪ್‌, ಟ್ವಿಟರ್‌, ಇನ್‌ಸ್ಟಾಗ್ರಾಂಗಳನ್ನು ಕ್ರಮವಾಗಿ 1ರಿಂದ 56ನೇ ಪ್ರತಿವಾದಿಗಳನ್ನಾಗಿಸಲಾಗಿದೆ.

Anil Kumar B H IAS (Rtd) Vs Kannada Prabha.pdf
Preview