Suo Motu Covid, Supreme Court
Suo Motu Covid, Supreme Court 
ಸುದ್ದಿಗಳು

ವಿಚಾರಣೆಯಿಂದ ಏನಾದರೂ ಬದಲಾವಣೆ ಗೋಚರಿಸಬೇಕು ಎಂದ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಹಾಕಿದ ಹತ್ತು ಪ್ರಶ್ನೆಗಳಿವು

Bar & Bench

ದೇಶವು ಕೋವಿಡ್‌ ಸಾಂಕ್ರಾಮಿಕತೆಯ ಹೊಡೆತಕ್ಕೆ ಸಿಲುಕಿ ತತ್ತರಿಸುತ್ತಿರುವಾಗ ಈ ಕುರಿತು ಸ್ವಯಂಪ್ರೇರಿತವಾಗಿ ಅರ್ಜಿ ದಾಖಲಿಸಿಕೊಂಡು ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌ ಹಲವು ಮಹತ್ವದ ಪ್ರಶ್ನೆಗಳನ್ನು ಕೇಂದ್ರ ಸರ್ಕಾರಕ್ಕೆ ಕೇಳಿದೆ.

ಕೇಂದ್ರ ಸರ್ಕಾರದ ಲಸಿಕಾ ದರ ನೀತಿಯನ್ನು ಪ್ರಶ್ನಿಸಿರುವ, ಸಾಮಾಜಿಕ ಮಾಧ್ಯಮದಲ್ಲಿ ನೆರವು ಕೋರುವ ಪ್ರಜೆಗಳ ವಿರುದ್ಧ ಯಾವುದೇ ಕ್ರಮಕೈಗೊಳ್ಳದಂತೆ ಸೂಚಿಸಿರುವುದರ ಆಚೆಗೆ ಹತ್ತು ಪ್ರಮುಖ ಪ್ರಶ್ನೆಗಳನ್ನು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌, ಎಲ್‌ ನಾಗೇಶ್ವರ ರಾವ್‌ ಮತ್ತು ರವೀಂದ್ರ ಭಟ್‌ ಅವರಿದ್ದ ತ್ರಿಸದಸ್ಯ ಪೀಠವು ಕೇಂದ್ರಕ್ಕೆ ಕೇಳಿತು. ಅವು ಹೀಗಿವೆ:

  1. ಯಾವ ಆಸ್ಪತ್ರೆಯಲ್ಲಿ ಎಷ್ಟು ಆಮ್ಲಜನಕವಿದೆ, ಎಷ್ಟು ಹಂಚಿಕೆ ಮಾಡಲಾಗುತ್ತಿದೆ ಎಂಬುದರ ಕುರಿತ ಮಾಹಿತಿಯನ್ನು ನೈಜ ಸಮಯದಲ್ಲಿ ತೋರಿಸುವ ಯಾಂತ್ರಿಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬಹುದೇ?

  2. ಕೋವಿಡ್‌ ವ್ಯಾಪಿಸುವುದನ್ನು ತಡೆಯಲು ಲಾಕ್‌ಡೌನ್‌ ರೀತಿಯ ಯಾವೆಲ್ಲಾ ನಿರ್ಬಂಧಗಳನ್ನು ಕೇಂದ್ರ ವಿಧಿಸಿದೆ. ಆಮ್ಲಜನಕ ಟ್ಯಾಂಕರ್‌ ಮತ್ತು ಸಿಲಿಂಡರ್‌ಗಳು ನಿಗದಿತ ಸ್ಥಳ ತಲುಪುವುದನ್ನು ಖಾತರಿಪಡಿಸಲು ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ? ಅಫಿಡವಿಟ್‌ನಲ್ಲಿ ಈ ಯಾವುದೇ ಯೋಜನೆಗಳು ಪ್ರಸ್ತಾಪವಾಗಿಲ್ಲ.

  3. ಅನಕ್ಷರಸ್ಥರು ಅಥವಾ ಇಂಟರ್‌ನೆಟ್‌ ಸೌಲಭ್ಯ ಹೊಂದಿಲ್ಲದವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಲಸಿಕೆ ಪಡೆಯಲು ನೋಂದಣಿಯನ್ನು ಹೇಗೆ ಸಕ್ರಿಯಗೊಳಿಸಲಾಗುತ್ತದೆ?

  4. ಲಸಿಕೆ ಪಡೆಯುವ ವಿಚಾರದಲ್ಲಿ ಒಂದು ರಾಜ್ಯವು ಮತ್ತೊಂದು ರಾಜ್ಯಕ್ಕಿಂತ ಹೆಚ್ಚಿನ ಆದ್ಯತೆ ಪಡೆಯಲಿದೆಯೇ? ಶೇ. 50ರಷ್ಟು ಲಸಿಕೆಯನ್ನು ರಾಜ್ಯಗಳು ಖರೀದಿಸಲಿವೆ ಎಂದು ಕೇಂದ್ರ ಹೇಳುತ್ತಿದೆ. ಲಸಿಕೆಯ ಉತ್ಪಾದಕರು ಸಮತೆಯನ್ನು ಹೇಗೆ ಖಾತರಿಪಡಿಸುತ್ತಾರೆ?

  5. ಇಂಥ ತುರ್ತು ಪರಿಸ್ಥಿತಿಯನ್ನು ಎದುರಿಸಲು ಲಸಿಕೆ ಉತ್ಪಾದಿಸಲು ಕಡ್ಡಾಯ ಪರವಾನಗಿ ನೀಡುವ ಸಂಬಂಧ ಪೇಟೆಂಟ್‌ ಕಾಯಿದೆಯ ಸೆಕ್ಷನ್‌ 92 ಅನ್ನು ಚಲಾಯಿಸಲು ಕೇಂದ್ರ ಸರ್ಕಾರ ಪರಿಗಣಿಸುತ್ತಿದೆಯೇ?

  6. ಕೋವಿಡ್‌ನ ಹೊಸ ರೂಪಾಂತರಿ ಸೋಂಕು ಆರ್‌ಟಿ-ಪಿಸಿಆರ್‌ ಪರೀಕ್ಷೆಯಲ್ಲಿ ಪತ್ತೆಯಾಗುತ್ತಿಲ್ಲ. ಸೋಂಕಿನ ಸಕ್ರಿಯ ವರದಿ ಇರದ ರೋಗಿಗಳನ್ನು ವೈದ್ಯಕೀಯ ಕೇಂದ್ರಗಳು ಒಂದೋ ಸೇರಿಸಿಕೊಳ್ಳುತ್ತಿಲ್ಲ, ಇಲ್ಲವೇ ದುಬಾರಿ ದರ ವಿಧಿಸುತ್ತಿವೆ. ಇದನ್ನು ಹೇಗೆ ನಿಯಂತ್ರಿಸಲಾಗುತ್ತಿದೆ? ಈ ಕುರಿತು ಯಾವ ನೀತಿ ಜಾರಿಗೊಳಿಸಲಾಗಿದೆ?

  7. ಕೋವಿಡ್‌ನ ಎರಡನೇ ರೂಪಾಂತರಿ ಸೋಂಕನ್ನು ಪತ್ತೆ ಹಚ್ಚುವ ಸಂಬಂಧ ಪ್ರಯೋಗಾಲಯಗಳಿಗೆ ಯಾವ ರೀತಿಯ ನಿರ್ದೇಶನ ನೀಡಲಾಗಿದೆ? ವರದಿಗಳ ಲಭ್ಯತೆಗೆ ಸಮಯಮಿತಿಯನ್ನು ಹೇಗೆ ನಿಗದಿಪಡಿಸಲಾಗಿದೆ?

  8. ರೋಗಿಗಳನ್ನು ದಾಖಲಿಸಿಕೊಳ್ಳಲು ಮತ್ತು ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡಲು ಹೆಚ್ಚು ದರ ವಿಧಿಸುವುದನ್ನು ನಿಯಂತ್ರಿಸಲು ಕೇಂದ್ರ ಹೇಗೆ ಪ್ರಯತ್ನಿಸುತ್ತಿದೆ?

  9. ವೈದ್ಯಕೀಯ ಸಿಬ್ಬಂದಿ ಕೊರತೆ ನೀಗಿಸಲು ಏನು ಮಾಡಲಾಗುತ್ತಿದೆ? ಕೋವಿಡ್‌ಗೆ ತುತ್ತಾದ ವೈದ್ಯರಿಗೆ ಹೇಗೆ ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ವೈದ್ಯರನ್ನು ಹೇಗೆ ರಕ್ಷಿಸಲಾಗುತ್ತಿದೆ? 1982ರಿಂದ ವೃತ್ತಿ ಮಾಡುತ್ತಿರುವ ವೈದ್ಯರೊಬ್ಬರಿಗೆ ಕೋವಿಡ್‌ ಶುಶ್ರೂಷೆಗೆ ಹಾಸಿಗೆ ದೊರೆಯಲಿಲ್ಲ ಎಂದು ಸುಪ್ರೀಂ ಕೋರ್ಟ್‌ನಲ್ಲಿ ನಮ್ಮೆಲ್ಲರಿಗೂ ಆತ್ಮೀಯರಾದ ವೈದ್ಯರೊಬ್ಬರು ಹೇಳಿದ್ದಾರೆ.

  10. ನಾವು ನಡೆಸುತ್ತಿರುವ ವಿಚಾರಣೆಯು ಏನಾದರೂ ಬದಲಾವಣೆಗೆ ಕಾರಣವಾಗಬೇಕು. ಅತ್ಯಂತ ಗಂಭೀರ ಪರಿಸ್ಥಿತಿ ಎದುರಿಸುತ್ತಿರುವ ರಾಜ್ಯಗಳಿಗೆ ಎಷ್ಟು ಆಮ್ಲಜನಕ ದೊರೆಯಲಿದ ಎಂಬುದನ್ನು ನಮಗೆ ತಿಳಿಸಲು ಸಾಧ್ಯವೇ?